Advertisement

ಗೃಹ ಇಲಾಖೆ ಚಿತ್ರಣ ಬದಲು: ಆರಗ ಜ್ಞಾನೇಂದ್ರ

01:31 AM Mar 31, 2022 | Team Udayavani |

ಬೆಂಗಳೂರು: ಈ ಹಿಂದೆ ಒಬ್ಬ ನಿವೃತ್ತ ಪೊಲೀಸ್‌ ಅಧಿಕಾರಿ ಕೈಯಲ್ಲಿ ಇಡೀ ಗೃಹ ಇಲಾಖೆಯನ್ನು ಕೊಡಲಾಗಿತ್ತು. ಇದರೊಂದಿಗೆ ಸಚಿವರುಗಳನ್ನೇ ಡಮ್ಮಿ ಮಾಡಲಾಗಿತ್ತು. ಆದರೆ, ಈಗ ಅದರ ಚಿತ್ರಣ ಸಂಪೂರ್ಣ ಬದಲಾಗಿದೆ. ಹಾಗಾಗಿ, ಆಡಳಿತ ವ್ಯವಸ್ಥೆಯು ಆ ಇಲಾಖೆ ನಿರ್ವಹಣೆ ಮಾಡುವವರನ್ನು ಅವಲಂಬಿಸಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ಹೇಳಿದರು.

Advertisement

ಬುಧವಾರ ನಿಯಮ 68ರ ಅಡಿ ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮತ್ತಿತರ ಸದಸ್ಯರು ಪ್ರಸ್ತಾವಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರಕಾರ ಬದಲಾದಾಗಲೆಲ್ಲ ಇಲಾಖೆ ಬದಲಾವಣೆ ಆಗುವುದಿಲ್ಲ. ಸಚಿವರು ಮಾತ್ರ ಬದಲಾಗುತ್ತಾರೆ. ಹಾಗಾಗಿ, ನನ್ನ ಇಲಾಖೆಯಲ್ಲಿಯೂ ಅದೇ ಟೋಪಿ, ಲಾಠಿಯೇ ಇದೆ. ಈ ಹಿಂದೆ ಗೃಹ ಸಚಿವರಾಗಿದ್ದ ಡಾ| ಜಿ. ಪರಮೇಶ್ವರ, ಕೆ.ಜೆ. ಜಾರ್ಜ್‌ ಉತ್ತಮ ಆಡಳಿತಗಾರರು. ಆದರೆ, ಅವರನ್ನು ಡಮ್ಮಿ ಮಾಡಿ, ಓರ್ವ ನಿವೃತ್ತ ಪೊಲೀಸ್‌ ಅಧಿಕಾರಿ ಕೈಯಲ್ಲಿ ಇಡೀ ಪೊಲೀಸ್‌ ಇಲಾಖೆಯನ್ನು ನೀಡಲಾಗಿತ್ತು ಎಂದು ಹೇಳಿದರು.

“ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ’
ಬೆಂಗಳೂರು: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಎಲ್ಲ ಪ್ರಕ್ರಿಯೆಗಳು ನಿಯಮಾನುಸಾರ ಪಾರದರ್ಶಕವಾಗಿ ನಡೆದಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕಾಂಗ್ರೆಸ್‌ ಸದಸ್ಯ ಅರವಿಂದ ಕುಮಾರ್‌ ಅರಳಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿ ಅಕ್ರಮ ನಡೆದಿರುವ ಬಗ್ಗೆ ಆರೋಪಿಸಿದರು. ಆದರೆ, ಇದನ್ನು ತಳ್ಳಿ ಹಾಕಿದ ಗೃಹ ಸಚಿವರು ಯಾವುದೇ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದರು.

2 ವರ್ಷಕ್ಕೊಮ್ಮೆ ವರ್ಗಾವಣೆ: ಚಿಂತನೆ
ಪೊಲೀಸರ ವರ್ಗಾವಣೆ ನಿಯಮವನ್ನು ಎರಡು ವರ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Advertisement

ಪೊಲೀಸರ ವರ್ಗಾವಣೆ ವಿಚಾರದಲ್ಲಿ ಎರಡು ವರ್ಷ ಇದ್ದ ನಿಯಮವನ್ನು ಒಂದು ವರ್ಷಕ್ಕೆ ಯಾಕೆ ಮಾಡಲಾಯಿತು? ಐದು ವರ್ಷಕ್ಕೆ ಹೆಚ್ಚಿಸಬಹುದಿತ್ತಲ್ಲವೇ? ಎಂದು ವಿಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮತ್ತೆ ಆ ವರ್ಗಾವಣೆ ನಿಯಮವನ್ನು ಎರಡು ವರ್ಷಗಳಿಗೆ ಹೆಚ್ಚಿಸುವ ಆಲೋಚನೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next