Advertisement

ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಹೋಂ ಡೆಲಿವರಿ?

02:53 AM Apr 29, 2021 | Team Udayavani |

ಮಹಾನಗರ: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಮಾದರಿಯ ಕರ್ಫ್ಯೂ ನಗರದಲ್ಲಿ ಜಾರಿಗೊಳಿಸಲಾಗಿದ್ದು, ಈ ವೇಳೆ ಜನರು ಮನೆಯೊಳಗಿದ್ದು, ಸಹಕರಿಸುವಂತೆ ಸರಕಾರ ಸೂಚಿಸಿದೆ. ಆದರೂ ಬೆಳಗ್ಗೆ 6ರಿಂದ 10ರ ವೇಳೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯ ನೆಪದಿಂದ ಮನೆಯಿಂದ ಹೊರಬರುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಜನದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹೋಂ ಡೆಲಿವರಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

Advertisement

ಈ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಅಂಗಡಿ ಮಾಲಕರ ಸಹಕಾರದೊಂದಿಗೆ ವಸ್ತುಗಳನ್ನು ಹೋಂ ಡೆಲಿವರಿ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಹೇಗೆ ಕಾರ್ಯನಿರ್ವಹಣೆ?
ನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ಹೊಂದಿದವರ ಜತೆಗೆ ಮಂಗಳೂರು ಪಾಲಿಕೆ ಮಾತುಕತೆ ನಡೆಸಲಿದೆ. ಒಂದೊಂದು ವಾರ್ಡ್‌ನಲ್ಲಿ ನಿಗದಿತ ಸಂಖ್ಯೆಯ ಅಂಗಡಿಯವರ ಪಟ್ಟಿ ಸಿದ್ಧಪಡಿಸಿ ಆ ವಾರ್ಡ್‌ನಲ್ಲಿ ಅಂಗಡಿಯವರ ಬಗ್ಗೆ ಸಾರ್ವ ಜನಿಕರಿಗೆ ಮಾಹಿತಿ ನೀಡಲಾಗುತ್ತದೆ.

ಸಂಬಂಧಿತ ಅಂಗಡಿಯವರ ನಂಬರ್‌ಗೆ ಆಯಾ ವ್ಯಾಪ್ತಿಯ ಜನರು ಯಾವೆಲ್ಲ ಅಗತ್ಯ ವಸ್ತುಗಳು ಬೇಕು ಎಂಬ ಬಗ್ಗೆ ಮೊಬೈಲ್‌ ಸಂದೇಶ ಕಳುಹಿಸಲಾಗುತ್ತದೆ. ಅದರಂತೆ ಅಂಗಡಿಯವರು ವಸ್ತುಗಳನ್ನು ಪ್ಯಾಕ್‌ ಮಾಡಿ ಅವರೇ ಮನೆ ಬಾಗಿಲಿಗೆ ತಲುಪಿಸುವುದು ಚಿಂತನೆ. ಅಗತ್ಯವಿದ್ದರೆ ಆನ್‌ಲೈನ್‌ ಸೇವೆ ನೀಡುವವರ ಸಹಾಯವನ್ನು ಪಡೆಯುವುದು ಈ ಕಲ್ಪನೆಯ ಉದ್ದೇಶ.
ಕಳೆದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಅಂಗಡಿ ಮಾಲಕರ ಮಾಹಿತಿ ಪಡೆದು ಅವರ ಮೂಲಕವೇ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಮುಟ್ಟಿಸುವ ಕಾರ್ಯ ನಡೆದಿತ್ತು. ಒಂದು ವೇಳೆ ಸದ್ಯದ ಲಾಕ್‌ಡೌನ್‌ ಮತ್ತೆ ಮುಂದುವರಿದರೆ ಅಥವಾ ಕೊರೊನಾ ಸಂಖ್ಯೆ ಏರಿಕೆಯಾದರೆ ಅಥವಾ ಜನದಟ್ಟಣೆ ಏರಿಕೆಯಾದರೆ ಈ ನಿಯಮವನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಹೋಂ ಡೆಲಿವರಿ ಚಿಂತನೆ
ಮಂಗಳೂರಿನಲ್ಲಿ ಅಗತ್ಯ ವಸ್ತುಗಳನ್ನು ಅಂಗಡಿ ಮಾಲಕರ ಮುಖೇನವೇ ಹೋಂ ಡೆಲಿವರಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಮುಂದಿನ ದಿನದಲ್ಲಿ ಪರಿಸ್ಥಿತಿ ಅವಲೋಕಿಸಿ ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next