Advertisement
ಕೆಲವೊಮ್ಮೆ ಮನೆಯಲ್ಲಿ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ. ಒಂದು ರೀತಿಯಲ್ಲಿ ಹೊಂದಿಕೊಂಡಿದ್ದ ಮನೆಗೆ ಮತ್ತೂಂದು ರೀತಿಯಲ್ಲಿ ಅಳವಡಿಸಿಕೊಳ್ಳುವುದು ಸುಲಭವಲ್ಲ. ಅದರಲ್ಲೂ ಮನೆಯಲ್ಲಿ ಇದ್ದುಕೊಂಡೇ ಬದಲಾವಣೆ ಮಾಡಿಕೊಳ್ಳೋದು ಕಿರಿಕಿರಿಯ ಸಂಗತಿ. ಹಾಗಾಗಿ ಮನೆ ವಿಭಜನೆ ಮಾಡುವ ಮೊದಲು ಒಂದಷ್ಟು ವಿನ್ಯಾಸಗಳನ್ನು ತಯಾರು ಮಾಡಿಟ್ಟುಕೊಳ್ಳುವುದು ಉತ್ತಮ.
Related Articles
Advertisement
ಹಾಗೆಯೇ ನಾವು ಮನೆಯೊಳಗೆ ಎಲ್ಲ ಕೆಲಸವನ್ನೂ ಮಾಡದೆ, ಅಳತೆಗೆ ತಕ್ಕಂತೆ ಹೊರಗೆ ಮಾಡಿಸಿ, ತಯಾರಾಗಿರುವ ಪ್ಯಾನಲ್‌ಗಳನ್ನು ಮನೆಯೊಳಗೆ ತಂದು ಜೋಡಿಸಿಕೊಳ್ಳಬಹುದು. ಮುಂದೊಂದು ದಿನ ಇದರಲ್ಲೂ ಬದಲಾವಣೆ ಬೇಕೆಂದರೆ, ಇದನ್ನು ತೆಗೆಯಲೂ ಕೂಡ ಸುಲಭವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ವಿನ್ಯಾಸದ ವೈವಿಧ್ಯಮಯ ಲ್ಯಾಮಿನೇಟ್ಸ್ ಹಾಗೂ ಪಾಲೀಶ್ ಮಾಡಬೇಕೆಂದರೆ ಗ್ರೇನ್ ಇರುವ ಟೀಕ್ ಪ್ಲೆ„ವುಡ್ ಲಭ್ಯವಿದೆ.
ಹೆಚ್ಚು ದುಬಾರಿಯೂ ಅಲ್ಲದ ಇವುಗಳನ್ನು ಬಳಸಿ ನುರಿತವರಿಂದ ಸಲಹೆ ಪಡೆದು ಸುಲಭದಲ್ಲಿ ನಮಗಿಷ್ಟವಾಗುವ ವಿಭಜಕಗಳನ್ನು ಮಾಡಿಕೊಳ್ಳಬಹುದು. ಮರದಲ್ಲಿ ಮಾಡಿದ ವಿಭಜಕಗಳನ್ನು ಅತಿ ಸುಲಭದಲ್ಲಿ ಮಾಡುವ ರೀತಿಯಲ್ಲೇ ರಿಪೇರಿ ಕೂಡ ಸಾಧ್ಯವಾಗುತ್ತದೆ. ಈ ಮಾದರಿಯಲ್ಲಿ ಮಾಡುವ ಪಾರ್ಟಿಷನ್‌ಗಳನ್ನು ಆದಷ್ಟೂ ನೆಲಕ್ಕೆ ಬಿಗಿಯದೆ, ಅಕ್ಕ ಪಕ್ಕದ ಗೋಡೆಗಳಿಗೆ ಉದ್ದನೆಯ ಸೂðಗಳನ್ನು ಬಳಸಿ ಬಿಗಿದರೆ, ಮುಂದೆ ತೆಗೆಯಲು ಹಾಗೂ ತೆಗೆದ ಸ್ಥಳ ಮೊದಲಿನಂತೆ ಆಗಲು ಬಣ್ಣ ಬಳಿಯಲು ಅನುಕೂಲವಾಗುತ್ತದೆ. ಡ್ರಿಲ್ ಮಾಡಿ ಸೂð ಹಾಕಿದರೆ, ನಂತರ ರಿಪೇರಿ ಮಾಡಲು ಕಷ್ಟ.
ಪ್ಲಾಸ್ಟರ್ ಬೋರ್ಡ್ ಪಾರ್ಟಿಷನ್: ಇಟ್ಟಿಗೆ ಇಲ್ಲವೇ ಕಾಂಕ್ರಿಟ್ ಬ್ಲಾಕ್ ಗೋಡೆಯಿಂದ ಮಾಡಿದ ಮನೆಯಲ್ಲಿ ಕೆಲವೊಮ್ಮೆ ಮರದ ಪಾರ್ಟಿಷನ್ ಸರಿಯಾಗಿ ಹೊಂದಿಕೊಳ್ಳದೆ ಹೋಗಬಹುದು. ಇಲ್ಲವೇ ದುಬಾರಿ ಅನ್ನಿಸಬಹುದು. ಅಂಥ ಸಂದರ್ಭದಲ್ಲಿ ಸುಲಭದಲ್ಲಿ ಮಾಡಬಹುದಾದ ಮತ್ತೂಂದು ವಿಧಾನ ಎಂದರೆ ಅದು ಪ್ಲಾಸ್ಟರ್ ಬೋರ್ಡ್ ಬಳಸಿ ಮಾಡುವುದೇ ಅಗಿರುತ್ತದೆ. ಮರದಲ್ಲಿ ಪಾರ್ಟಿಷನ್ ಮಾಡುವ ರೀತಿಯಲ್ಲೇ ನಾಲ್ಕು ಇಂಚಿಗೆ ಎರಡು ಇಂಚು ಸೈಜ್‌ನ ಮರಗಳನ್ನು ಬಳಸಿ ಇಲ್ಲವೇ
ಈ ರೀತಿಯ ಪಾರ್ಟಿಷನ್‌ಗೆ ಎಂದೇ ಸಿಗುವ ಲೋಹದ ಆಧಾರಗಳನ್ನು ಉಪಯೋಗಿಸಿಕೊಂಡು ಫ್ರೆಮ್ ವರ್ಕ್ ಮಾಡಬೇಕಾಗುತ್ತದೆ. ಇದರ ಮೇಲೆ ಪ್ಲಾಸ್ಟರ್ ಬೋರ್ಡ್‌ಗಳನ್ನು ಸಿಗಿಸಬಹುದು. ಇವು ನೋಡಲು ಪ್ಲಾಸ್ಟರ್ ಮಾಡಿದ ಗೋಡೆಗಳಂತೆಯೇ ಕಾಣುವುದರಿಂದ ನಾವು ಮ್ಯಾಚಿಂಗ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಇಡೀ ಮನೆಯ ಒಂದು ಮೂಲಭಾಗವೇನೋ ಎಂಬ ರೀತಿಯಲ್ಲಿ ಈ ವಿಭಜಕಗಳು ಕಾಣುತ್ತವೆ. ಅದರಲ್ಲೂ ಮ್ಯಾಚಿಂಗ್ ಬಣ್ಣ ಬಳಿದರೆ, ಪಾರ್ಟಿಷನ್ ಮಾಡಿರುವುದು ಗೊತ್ತೇ ಆಗುವುದಿಲ್ಲ.
ಬಾಗಿಲು ಕಿಟಕಿಯ ಲೆಕ್ಕಾಚಾರ: ವಿಭಜನೆ ಮಾಡಿರುವ ಸ್ಥಳ ಸ್ಟಡಿ ಇಲ್ಲವೇ ಸಣ್ಣದೊಂದು ಬ್ರಹ್ಮಚಾರಿಗಳ ಕೋಣೆ ಎಂದಾದಲ್ಲಿ- ಇಲ್ಲಿಯೂ ಸೂಕ್ತ ಗಾಳಿ ಬೆಳಕಿಗೆ ಅನುಕೂಲ ಮಾಡಿಕೊಡುವುದು ಅನಿವಾರ್ಯ. ಪಾರ್ಟಿಷನ್ ಮಾಡಿರುವ ಸ್ಥಳ ಸುಮಾರು ನೂರು ಚದರ ಅಡಿ ಇದ್ದರೆ, ಶೇಕಡ ಇಪ್ಪತ್ತರಂತೆ ಕಡೇಪಕ್ಷ ಇಪ್ಪತ್ತು ಚದರ ಅಡಿಗಳಷ್ಟು ಕಿಟಕಿ ಹರವು ಇರಬೇಕು. ಅಂದರೆ ನಾಲ್ಕು ಅಡಿಗೆ ಐದು ಅಡಿ ಇರುವ ಒಂದು ಇಲ್ಲವೇ, ಎರಡೂವರೆ ಅಡಿಗೆ ನಾಲ್ಕೂವರೆ ಅಡಿಯ ಎರಡು ಕಿಟಕಿಗಳು ಈ ಪ್ರದೇಶದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಈ ಕಾರಣಕ್ಕಾಗಿ ನಾವು ಮನೆಯಲ್ಲಿ ವಿಭಜಕಗಳನ್ನು ಅಳವಡಿಸುವ ಮೊದಲು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ಗಳ ಸಲಹೆ ಪಡೆಯುವುದು ಉತ್ತಮ. ಗೋಡೆ ಒಡೆದು ಹೊಸದಾಗಿ ಕಿಟಕಿಗಳನ್ನು ನಿರ್ಮಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲವಾದ ಕಾರಣ, ಸೂಕ್ತ ಕಿಟಕಿಗಳಿರುವ ಸ್ಥಳ ನೋಡಿಕೊಂಡು ಪಾರ್ಟಿಷನ್ ಮಾಡುವುದು ಸೂಕ್ತ. ಬಾಗಿಲು ಕೀಲು ಸಿಗಿಸುವ ಸ್ಥಳದಲ್ಲಿ ಸೂಕ್ತರೀತಿಯ ದಪ್ಪನೆಯ ಆಧಾರಗಳನ್ನು ಫ್ರೆಮ್- ಚೌಕಟ್ಟಿನ ರೀತಿಯಲ್ಲಿ ನೀಡುವುದು ಉತ್ತಮ.
ಇಲ್ಲದಿದ್ದರೆ ಹೇಳಿಕೇಳಿ ಟೊಳ್ಳಾಗಿರುವ ಈ ವಿಭಜಕಗಳಿಂದಾಗಿ ಬಾಗಿಲು ಜೋರಾಗಿ ಮುಚ್ಚಿದರೆ ಇಲ್ಲವೇ ಗಾಳಿಗೆ ಅಲುಗಾಡಿದರೆ ಭಾರಿ ಶಬ್ಧ ಬರುವ ಸಾಧ್ಯತೆಗಳು ಇರುತ್ತವೆ. ಬಾಗಿಲುಗಳನ್ನು ಸಿಗಿಸುವಾಗ ಆದಷ್ಟೂ ಒಂದು ಬದಿಯಾದರೂ ಮಾಮೂಲಿ ಗೋಡೆಗೆ ತಾಗಿದಂತೆ ಇರುವಹಾಗೆ ಮಾಡುವುದು ಒಳ್ಳೆಯದು. ಅನಿವಾರ್ಯವಾಗಿ ಭಜಕದ ಮಧ್ಯೆ ಬಾಗಿಲು ಬರುವ ಹಾಗಿದ್ದರೆ, ಸೂಕ್ತ ರೀತಿಯಲ್ಲಿ ಫ್ಲೋರ್‌ನಿಂದ ಸೂರಿನವರೆಗೂ ಒಂದೇ ರಿಪೀಸು ಅಥವಾ ಲೋಹದ ಆಧಾರ ಇರುವಂತೆ ನೋಡಿಕೊಂಡರೆ- ಜೋರಾಗಿ ಹಾಕಲಾಗುವ ಬಾಗಿಲಿನ ಶಬ್ದದಿಂದ ಸಾಕಷ್ಟು ರಕ್ಷಣೆ ಪಡೆಯಬಹುದು!
ಕೆಲವೊಮ್ಮೆ ಮನೆ ಕಟ್ಟಿ ಕೆಲವಾರು ವರ್ಷಗಳು ಸುಧಾರಿಸಿಕೊಂಡ ನಂತರ ಬದಲಾದ ಅಗತ್ಯಗಳಿಗೆ ತಕ್ಕಂತೆ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ. ಸ್ವಲ್ಪ ಆಲೋಚಿಸಿ ವಿಭಜಕಗಳನ್ನು ಮಾಡಿಕೊಂಡರೆ ಹೆಚ್ಚುವರಿ ಕೋಣೆ ಸಿಗುವುದರ ಜೊತೆಗೆ ಹೆಚ್ಚು ಕಿರಿಕಿರಿಯೂ ಆಗುವುದಿಲ್ಲ.
ಹೆಚ್ಚಿನ ಮಾಹಿತಿಗೆ: 98441 32826
* ಆರ್ಕಿಟೆಕ್ಟ್ ಕೆ ಜಯರಾಮ್