Advertisement

ಹೊಂಬಣ್ಣ ನಿರ್ದೇಶಕನ ಹೊಸ ಚಿತ್ರ “ಎಂಥ ಕಥೆ ಮಾರಾಯ’

10:23 AM Mar 17, 2020 | Lakshmi GovindaRaj |

“ಹೊಂಬಣ್ಣ’ ಚಿತ್ರದ ಮೂಲಕ ಭರವಸೆಯ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ಯುವ ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ, ಈಗ “ಎಂಥ ಕಥೆ ಮಾರಾಯ’ ಎನ್ನುವ ಮತ್ತೂಂದು ವಿಭಿನ್ನ ಕಥಾಹಂದರದ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ ಚಿತ್ರತಂಡ, ಇದೀಗ “ಎಂಥ ಕಥೆ ಮಾರಾಯ’ ಚಿತ್ರದ ಫ‌ಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಹೊರತಂದಿದೆ.

Advertisement

“ಸಂಚಲನ ಮೂವೀಸ್‌’ ಬ್ಯಾನರ್‌ನಲ್ಲಿ ರಾಮಕೃಷ್ಣ ನಿಗಡೆ ನಿರ್ಮಿಸಿರುವ ಈ ಚಿತ್ರದಲ್ಲಿ ಸುಧೀರ್‌, ಸುಬ್ರಮಣ್ಯ ತಲಬಿ, ಶ್ರೀಪ್ರಿಯಾ, ರವಿರಾಜ್‌ ಶೆಟ್ಟಿ, ಪ್ರಾಣೇಶ್‌, ಕೇಶವ್‌ ಗುತ್ತಳಿಕೆ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ, “ಇಡೀ ಸಿನಿಮಾ ಪಶ್ಚಿಮ ಘಟ್ಟ ಮತ್ತು ಶರಾವತಿ ನದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನಡೆಯುತ್ತದೆ.

1965 ರಿಂದ 2019 ಶರಾವತಿ ನದಿ ಪ್ರದೇಶದಲ್ಲಿ ನಡೆದ ಸರ್ಕಾರದ ವಿವಿಧ ಯೋಚನೆಗಳು, ಅದರಿಂದಾದ ಪರಿಣಾಮಗಳು ಮತ್ತಿತರ ಸಂಗತಿಗಳು, ಘಟನೆಗಳ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ತುಂಬ ಗಂಭೀರ ವಿಷಯವನ್ನು ಮಲೆನಾಡಿನ ಸೊಗಡಿನಲ್ಲಿ ಅಲ್ಲಿನ ಜನ-ಜೀವನದ ಜೊತೆ ಹಾಸ್ಯಮಿಶ್ರಿತವಾಗಿ ಹೇಳಿದ್ದೇವೆ’ ಎನ್ನುತ್ತಾರೆ. ಇನ್ನು ಪ್ರತಿ ಸನ್ನಿವೇಶಗಳು ನೈಜವಾಗಿ ಬರಬೇಕೆಂಬ ಕಾರಣಕ್ಕೆ ಪಶ್ಚಿಮ ಘಟ್ಟದ ಪ್ರದೇಶಗಳಾದ ಯಡೂರು, ಮಾಸ್ತಿಕಟ್ಟೆ, ತೀರ್ಥಹಳ್ಳಿ ಸುತ್ತಮುತ್ತ ಸೇರಿದಂತೆ ಶರಾವತಿ ನದಿ ತೀರದ ಪ್ರದೇಶಗಳಲ್ಲೇ “ಎಂಥ ಕಥೆ ಮಾರಾಯ’ ಚಿತ್ರದ ಬಹುಭಾಗ ಚಿತ್ರೀಕರಿಸಲಾಗಿದೆಯಂತೆ.

“ಸಿನಿಮಾದ ಕಥೆಗೆ ಹತ್ತಿರವಾದ ಲೊಕೇಶನ್‌ಗಳು, ಬಹುತೇಕ ಸ್ಥಳೀಯ ಕಲಾವಿದರನ್ನೇ ಪ್ರಮುಖ ಪಾತ್ರಗಳಲ್ಲಿ ಬಳಸಿಕೊಂಡಿದ್ದೇವೆ. ಇಲ್ಲಿಯವರೆಗೆ ಎಲ್ಲೂ ನೋಡಿರದ ಲೊಕೇಶನ್‌ಗಳನ್ನ, ಯಾರೂ ಹೋಗಿರದ ಕೆಲವು ಜಾಗಗಳನ್ನು ಸ್ಕ್ರೀನ್‌ ಮೇಲೆ ತೋರಿಸುತ್ತಿದ್ದೇವೆ. 2-3 ಫಾಲ್ಸ್‌ಗಳು, ಮಲೆನಾಡಿನ ಗುಡ್ಡಗಾಡು, ಕಾಡು, ನೀರು, ಹೋರಾಟ, ಸಂಘರ್ಷ, ಜನ-ಜೀವನ ಎಲ್ಲವೂ ಸಿನಿಮಾದಲ್ಲಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತಾರೆ ನಿರ್ದೇಶಕ ರಕ್ಷಿತ್‌.

“ಎಂಥ ಕಥೆ ಮಾರಾಯ’ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಹೇಮಂತ್‌ ಜೋಯ್ಸ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅನನ್ಯಾ ಭಟ್‌ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಗುರುಪ್ರಸಾದ್‌ ನರ್ನಾಡ್‌ ಚಿತ್ರಕ್ಕೆ ಛಾಯಾಗ್ರಹಣ, ಸುಧೀರ್‌ ಎಸ್‌.ಜೆ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಫ‌ಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ನಿಧಾನವಾಗಿ ಚಾಲನೆ ನೀಡಿರುವ ಚಿತ್ರತಂಡ, ಜೂನ್‌ ಅಥವಾ ಜುಲೈ ವೇಳೆಗೆ “ಎಂಥ ಕಥೆ ಮಾರಾಯ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next