Advertisement

ಚಿತ್ರೀಕರಣ ನಿಲ್ಲಿಸಿದ ಹಾಲಿವುಡ್‌…! ಬೀದಿಗಿಳಿದ ಹಾಲಿವುಡ್‌ ತಾರೆಯರು

11:29 PM Jul 22, 2023 | Team Udayavani |

ಸಿನೆಮಾ ಕ್ಷೇತ್ರದ ಹಾಗೂ ಹಾಲಿವುಡ್‌ನ‌ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಕ್ರಿಸ್ಟೋಫ‌ರ್‌ ನೋಲನ್‌ ಅವರ ಓಪೆನ್‌ ಹೈಮರ್‌ ಚಿತ್ರದ ಪ್ರೀಮಿಯರ್‌ ಶೋನ ಸಂದರ್ಭ. ಆ ಚಿತ್ರದ ಕಲಾವಿದರು ಹಾಗೂ ಹಾಲಿವುಡ್‌ನ‌ ಸಿನೆತಾರೆಯರು ಚಿತ್ರದ ಪ್ರೀಮಿಯರ್‌ ಶೋ ಅನ್ನು ನೋಡದೆ ಥೀಯೆಟರ್‌ನಿಂದ ಹೊರ ನಡೆದು, ಚಿತ್ರಿಕರಣವನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಕುಳಿತುಕೊಳ್ಳುತ್ತಾರೆ. ಇದು ಸದ್ಯದ ಹಾಲಿವುಡ್‌ ಸಿನೆರಂಗದ ಚಿತ್ರಣ. ಸಿನೆಮಾ ಪ್ರಪಂಚದಲ್ಲೇ ವಿಭಿನ್ನ ಕಥೆ, ವಿಶಿಷ್ಟ ತಾಂತ್ರಿಕ ಪ್ರಯೋಗಗಳಿಗೆ ಹಾಲಿವುಡ್‌ ಹೆಸರುವಾಸಿ. ಟೈಟಾನಿಕ್‌, ಅವತಾರ್‌ ಹಾಗೂ ಸೂಪರ್‌ ಹೀರೋಸ್‌ಗಳ ಕಥೆಗಳನ್ನು ಅದ್ಭುತವಾಗಿ ತೆರೆಯ ಮೇಲೆ ಮೂಡಿಸಿರುವ ಹಾಲಿವುಡ್‌ ಇದೀಗ ಸಿನೆಮಾ ಹಾಗೂ ಟಿವಿ ಚಿತ್ರೀಕರಣವನ್ನು ನಿಲ್ಲಿಸಿದೆ. ಯಾಕೆ ಪ್ರತಿಭಟನೆ? ಏನಿದು ? ಎಂಬುದರ ಮಾಹಿತಿ ಇಲ್ಲಿದೆ.

Advertisement

ಯಾಕಾಗಿ ಪ್ರತಿಭಟನೆ?
ಎಸ್‌ಎಜಿ-ಎಎಫ್ಟಿಆರ್‌ಎ ಪ್ರಕಾರ ಪ್ರತಿಭಟನೆಗೆಎರಡು ಮುಖ್ಯ ಕಾರಣಗಳು. ಒಂದು ನಟರು ಹೆಚ್ಚಿನ ಸಂಭಾವನೆಯನ್ನು ಬೇಡುತ್ತಿರುವುದು. ಇನ್ನೊಂದು ಮುಖ್ಯ ಕಾರಣ ಸಿನೆಮಾ ಸಂಬಂಧಿತ ಸೃಜನಾತ್ಮಕ ಕೆಲಸಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ವಿರುದ್ಧ.

ಹಣದುಬ್ಬರ; ಸಂಭಾವನೆಯ ಬೇಡಿಕೆ
ಸಿನೆಮಾ ನಟರು ತಮಗೆ ನೀಡುವ ಸಂಭಾವನೆಯಲ್ಲಿ ಈ ವರ್ಷ ಶೇ. 11ರಷ್ಟು ಹೆಚ್ಚಿನ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ. ಜತೆಗೆ ಮುಂದಿನ ಎರಡು ವರ್ಷಗಳಲ್ಲಿ ಇದರಲ್ಲಿ ಶೇ.8ರಷ್ಟು ಸಂಭಾವನೆ ಹೆಚ್ಚಿಸಬೇಕು ಎಂಬುದು ಆಗ್ರಹ. ಈ ಸಂಭಾವನೆಯ ಬೇಡಿಕೆಗೆ ಕಾರಣ ಕಳೆದ ಎರಡು ವರ್ಷಗಳಿಂದ ಎದುರಿಸುತ್ತಿರುವ ಹಣದುಬ್ಬರ. ಹಣದುಬ್ಬರದಿಂದ ಸಿನೆಮಾ ನಿರ್ಮಾಣಕ್ಕೆ ಅಗತ್ಯವಿರುವ ಸೆಟ್‌ ಹಾಗೂ ಇತರ ಸಲಕರಣೆಗಳ ಬೆಲೆಯು ಏರಿಕೆಯಾಗಿದ್ದು, ಅವುಗಳ ಅಗತ್ಯತೆಗಳು ಸರಿಯಾದ ಸಮಯದಲ್ಲಿ ದೊರೆಯದೇ ನಿರ್ಮಾಣ ಸಂಸ್ಥೆಗಳು ತೊಂದರೆ ಎದುರಿಸುತ್ತಿತ್ತು.

ಇದರಿಂದ ಸಿನೆಮಾ ನಿರ್ಮಾಣದಲ್ಲಿ ತಡವಾಗುತ್ತಿದೆ ಎಂದೂ ಕಳೆದ ವರ್ಷ ಕೆಲವು ನಿರ್ಮಾಣ ಸಂಸ್ಥೆಗಳು ಹೇಳಿದ್ದವು. ಅದಲ್ಲದೇ ಇತ್ತೀಚಿನ ಸ್ಟ್ರೀಮಿಂಗ್‌ ಸೇವೆಗಳು ಈ ಸಂಭಾವನೆಯನ್ನು ಹೆಚ್ಚಿಸಿದ್ದು ಕಲಾವಿದರ ವೃತ್ತಿ ಜೀವನವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಹೇಳಲಾಗುತ್ತಿದೆ. ಕಲಾವಿದರು ನಟಿಸಿದ ಟಿವಿ ಶೋ ಅಥವಾ ಸಿನೆಮಾಗಳು ಮರುಪ್ರಸಾರ ಕಂಡಾಗ ಪಾವತಿಯನ್ನು ಮಾಡಲಾಗುತ್ತಿತ್ತು. ಆದರೆ ಸ್ಟ್ರೀಮಿಂಗ್‌ ಸರ್ವಿಸ್‌ಗಳು ಈ ರೀತಿಯ ವ್ಯವಸ್ಥೆಯನ್ನು ಒದಗಿಸುತ್ತಿಲ್ಲ.

ಬರಹಗಾರರಿಗೆ ಕಲಾವಿದರ ಸಾಥ್‌
ಎಐ ಆಧಾರಿತ ವ್ಯವಸ್ಥೆಯ ವಿರುದ್ಧ ಬರಹಗಾರರು
ಮೇ ತಿಂಗಳಿನಲ್ಲಿ ತಮ್ಮ ಪ್ರತಿಭಟನೆ ಆರಂಭಿಸಿದ್ದಾರೆ. ಇದೀಗ ಹಾಲಿವುಡ್‌ನ‌ ಖ್ಯಾತ ನಟರು, ನಿರ್ದೇಶಕರು ಇದಕ್ಕೆ ಸಾಥ್‌ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲೇ ಮೊದಲ ಬಾರಿಗೆ ಬರಹಗಾರರು, ಕಲಾವಿದರು ಒಗ್ಗಟ್ಟಾಗಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಿರುವುದು. ಹಾಲಿವುಡ್‌ನ‌ ಪ್ರತಿಯೊಬ್ಬರನ್ನು ರಕ್ಷಣೆ ಮಾಡುವುದಾಗಿ ಪಣ ತೊಟ್ಟಿದ್ದಾರೆ. ಅಮೆರಿಕದ ಸ್ಕ್ರೀನ್‌ ಆ್ಯಕ್ಟರ್ ಗಿಲ್ಡ್‌ ಅಮೆರಿಕನ್‌ ಫೆಡರೇಶನ್‌ ಆಫ್ ಟೆಲಿವಿಷನ್‌ ಹಾಗೂ ರೇಡಿಯೋ ಆರ್ಟಿಸ್ಟ್‌ ( ಎಸ್‌ಎಜಿ- ಎಎಫ್ಟಿಆರ್‌ಎ ) ಮತ್ತು ರೈಟರ್ ಗಿಲ್ಡ್‌ ಆಫ್ ಅಮೆರಿಕ ( ಡಬ್ಲ್ಯುಜಿಎ) ಸಂಸ್ಥೆಯು ಹಲವು ನಿರ್ಮಾಣ ಸಂಸ್ಥೆಗಳಿಗೆ ಸಿನೆಮಾ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಹೇಳಿದೆ.

Advertisement

ಪರಿಣಾಮವೇನು?
ಈ ಪ್ರತಿಭಟನೆಯಿಂದ ಬರಹಗಾರರು ಹಾಗೂ ಕಲಾವಿದರು ಶೂಟಿಂಗ್‌ಗಳಿಗೆ ಹೋಗುತ್ತಿಲ್ಲ. ಇದ ರಿಂದ ಸರಿಸುಮಾರು ಮೇ ತಿಂಗಳಿನಿಂದ ಹಲವು ಟಿವಿ ಶೋ ಹಾಗೂ ಸಿನೆಮಾ ಚಿತ್ರೀಕರಣವು ಅರ್ಧ ದಲ್ಲೇ ಸ್ಥಗಿತವಾಗಿದೆ. ಅದಲ್ಲದೇ ಅನೇಕ ಕಾರ್ಯ ಕ್ರಮಗಳ ಹೊಸ ಸಂಚಿಕೆಗಳು ಪ್ರಸಾರವಾಗದೇ ಟಿವಿ ವಾಹಿನಿಯವರು ಹಳೆಯ ಸಂಚಿಕೆಗಳನ್ನೇ ಪ್ರಸಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಲಿವುಡ್‌ನ‌ ಬಿಗ್‌ ಬಜೆಟ್‌ ಹಾಗೂ ಖ್ಯಾತ ನಿರ್ದೇಶಕರ ಸಿನೆಮಾಗಳು, ಅವತಾರ್‌ -3, ಸ್ಟಾರ್‌ವಾರ್‌ನಂತಹ ಸಿನೆಮಾಗಳು ತನ್ನ ಸೀಕ್ವೆಲ್‌ಗ‌ಳ ಬಿಡುಗಡೆಯ ದಿನಾಂಕವನ್ನು ಮುಂದೂಡಿವೆ.

ನಟ – ನಟಿಯರು ತಮ್ಮ ಚಿತ್ರಗಳ ಪ್ರಮೋಶನ್‌ ಹಾಗೂ ಆ್ಯಮಿ ಅವಾರ್ಡ್ಸ್‌ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ. ಈ ಪ್ರತಿಭಟನೆಯಿಂದ ಇಂಡಸ್ಟ್ರಿಯು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ. ತಜ್ಞರ ಪ್ರಕಾರ 3 ಡಾಲರ್‌ ಬಿಲಿಯನ್‌ನಷ್ಟು ನಷ್ಟ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಕೆಲವೊಂದು ನಿರ್ಮಾಣ ಸಂಸ್ಥೆಗಳಿಂದ ಈ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆಯೂ ಬಂದಿದೆ.

ಕೃತಕ ಬುದ್ಧಿಮತ್ತೆ ಮತ್ತು ಹಾಲಿವುಡ್‌
ದಿನೇದಿನೇ ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಾ ಬೆಳೆಯುತ್ತಿ ರುವ ಕೃತಕ ಬುದ್ಧಿಮತ್ತೆಯು (ಎಐ) ಮಾನವನ ಕೆಲಸಗಳನ್ನು ಕಸಿದುಕೊಳ್ಳುತ್ತಿದೆ. ಹಾಲಿವುಡ್‌ನ‌ ನಟರು, ಬರಹಗಾರರು ಮುಖ್ಯವಾಗಿ ಪ್ರತಿಭಟಿಸುತ್ತಿರುವುದು ಇದರ ವಿರುದ್ಧವೇ. ಈ ಕೃತಕ ಬುದ್ಧಿಮತ್ತೆಯು ಹಾಲಿವುಡ್‌ನ‌ ಕಲಾವಿದರ ವೃತ್ತಿಯನ್ನು ಅಪಾಯದಲ್ಲಿರಿಸಿದೆ. ಈ ಎಐ ನಿರ್ಮಿತ ರೋಬೋಟ್‌ಗಳು ಹಾಲಿವುಡ್‌ನ‌ಲ್ಲಿ ಕಲಾವಿದರ ಹಾಗೂ ತಾಂತ್ರಿಕ ಕೆಲಸಗಾರರ ಸ್ಥಾನಗಳನ್ನು ಪಡೆದುಕೊಳ್ಳುತ್ತಿವೆ.

ಸಿನೆಮಾ ನಿರ್ಮಾಣದಲ್ಲಿ ತಾಂತ್ರಿಕ ಸಹಾಯಕರು ಹಾಗೂ ಸಣ್ಣ ಸಣ್ಣ ಕಲಾವಿದರ ಬದಲಾಗಿ ಎಐ ರೋಬೋಟ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಕಲಾವಿದರ ನಟನೆಯ ವೀಡಿಯೋ ತುಣುಕುಗಳನ್ನು ತೋರಿಸಿ ಅವುಗಳಿಗೆ ತರಬೇತಿ ನೀಡಲಾಗುತ್ತಿದೆ. ಅದಲ್ಲದೇ ಸಿನೆಮಾ ಬರಹಗಾರರ ಕೆಲಸವನ್ನು ಈ ಎಐ ಕಸಿದುಕೊಳ್ಳುತ್ತಿದ್ದು ಇಲ್ಲಿ ವ್ಯಕ್ತಿಯ ಸೃಜನಾತ್ಮಕ ಕೌಶಲವು ಪ್ರಶ್ನೆಯಾಗಿದೆ. ಈ ಎಐ ತಂತ್ರಜ್ಞಾನವು ಹಾಲಿವುಡ್‌ ತಾರೆಗಳ ಹಾಗೂ ತಾಂತ್ರಿಕ ಕಲಾವಿದರ ಧ್ವನಿಯನ್ನು ನಕಲು ಮಾಡಬಹುದು ಎಂದೂ ಆತಂಕ ವ್ಯಕ್ತಪಡಿಸಲಾಗಿದೆ.

ಸಿನೆಮಾ ಪ್ರಪಂಚದಲ್ಲೇ ಅತೀ ಹಳೆಯ ಹಾಗೂ ಶ್ರೀಮಂತವಾಗಿರುವುದು ಹಾಲಿವುಡ್‌ ಚಿತ್ರರಂಗ. ಕೇವಲ ಅಮೆರಿಕದಲ್ಲಿ ಮಾತ್ರವಲ್ಲದೇ ಭಾರತ ಸಹಿತ ಪ್ರಪಂಚಾದ್ಯಂತ ಹಾಲಿವುಡ್‌ ಸಿನೆಮಾಗಳಿಗೆ ಪ್ರೇಕ್ಷಕರಿದ್ದಾರೆ, ಅಲ್ಲಿನ ಕಲಾವಿದರಿಗೆ ಅಭಿಮಾನಿಗಳಿದ್ದಾರೆ.

ಈಗೀಗ ಹಾಲಿವುಡ್‌ ಸಿನೆಮಾಗಳು ಭಾರತದ ಪ್ರಾದೇಶಿಕ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಬಿಗ್‌ಬಜೆಟ್‌ ಸಿನೆಮಾಗಳನ್ನು ತಯಾರಿಸುವ ಹಾಲಿವುಡ್‌ನ‌ಲ್ಲಿ ಎದುರಾಗಿರುವ ಈ ಸಂಕಷ್ಟ ಸದ್ಯದಲ್ಲಿ ಅಂತ್ಯ ಕಾಣುವ ಹಾಗೇ ಕಾಣಿಸುತ್ತಿಲ್ಲ. ಈ ಪ್ರತಿಭಟನೆಯು ಹಲವು ಸಿನೆಮಾಗಳು ತೆರೆಯ ಮೇಲೆ ಬರುವುದನ್ನು ನಿಲ್ಲಿಸಲಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಹಾಲಿವುಡ್‌ ಸಿನೆಮಾಗಳನ್ನು ತೆರೆಯಲ್ಲಿ ಕಾಣುವುದು ಅಸಾಧ್ಯವೆನಿಸುವ ಪರಿಸ್ಥಿತಿ ಎದುರಾಗಿದೆ.

 ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next