Advertisement

ಹುಬ್ಳಿ ಜಗ್ಗಲಿಗೆ ಹಬ್ಬ ಇತಿಹಾಸ ಸೃಷ್ಟಿಸುತ್ತೆ

12:13 PM Mar 12, 2020 | Suhan S |

ಹುಬ್ಬಳ್ಳಿ: ಸಾಂಸ್ಕೃತಿಕ ಉತ್ಸವದ ರೂಪ ಪಡೆಯುತ್ತಿರುವ ಇಲ್ಲಿನ ಜಗ್ಗಲಿಗೆ ಹಬ್ಬ ಮುಂದೊಂದು ದಿನ ಇತಿಹಾಸ ಬರೆಯಲಿದೆ ಎಂದು ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಮೂರುಸಾವಿರಮಠದ ಶಾಲೆ ಆವರಣದಲ್ಲಿ ಹೋಳಿ ಪ್ರಯುಕ್ತ ಆಯೋಜಿಸಿದ್ದ ಹುಬ್ಬಳ್ಳಿ ಜಗ್ಗಲಿಗೆ ಹಬ್ಬಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಜಗ್ಗಲಿಗೆ ಹಬ್ಬ ವರ್ಷದಿಂದ ವರ್ಷಕ್ಕೆ ರಂಗೇರುತ್ತಿದೆ. ಕಲಾವಿದರ ಸಂಖ್ಯೆ ಹಾಗೂ ತಂಡಗಳು ಹೆಚ್ಚಾಗುತ್ತಿವೆ. ಹಬ್ಬದ ಆಚರಣೆಯ ಅಂದ ಚೆಂದ ಕೂಡ ದ್ವಿಗುಣಗೊಳ್ಳುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪೌರಾಣಿಕತೆ ನೆನಪಿಸುವಂತಹ ಕೆಲಸ ಈ ಹಬ್ಬದಿಂದ ಆಗುತ್ತಿದೆ ಎಂದರು.

ಕಾಮ ದಹನವಾದ ಮೇಲೆ ಜಗ್ಗಲಿಗೆ ಬಡಿಯುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಈ ಇತಿಹಾಸ, ಜಗ್ಗಲಿಗೆ ಮಹತ್ವ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಅದನ್ನು ಪರಿಚಯಿಸುವ ಕೆಲಸ ಈ ಹಬ್ಬದ ಮೂಲಕ ಆಗುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದ ಈ ಹಬ್ಬದ ತಯಾರಿ ನಡೆಯುತ್ತಿದೆ. ಐದನೇ ವರ್ಷದ ಹಬ್ಬಕ್ಕೆ ಸುಮಾರು 25 ಸ್ವಾಮಿಗಳು ಪಾಲ್ಗೊಂಡಿರುವುದು ಈ ಹಬ್ಬದ ವಿಶೇಷವಾಗಿದೆ ಎಂದು ಹೇಳಿದರು.

ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಪ್ಲಾಸ್ಟಿಕ್‌ ಭರಾಟೆಯಿಂದ ಚರ್ಮ ವಾದ್ಯಗಳು ಕಡಿಮೆಯಾಗುತ್ತಿವೆ. ವಿದೇಶಿ ಸಂಸ್ಕೃತಿಯತ್ತ ವಾಲುತ್ತಿರುವುದರಿಂದ ನಮ್ಮ ಹಬ್ಬಗಳ ಹಿನ್ನೆಲೆ ಮರೆಯಾಗುತ್ತಿದೆ. ವಿದೇಶಿಗರು ನಮ್ಮ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಅಂತಹ ಶಕ್ತಿ ನಮ್ಮ ನಾಡಿನಲ್ಲಿದೆ. ನಮ್ಮ ಸಂಸ್ಕೃತಿ, ಕಲೆಗಳನ್ನು ನಕಲು ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿನ ನೈಜ್ಯತೆ, ಹುಬ್ಬಳ್ಳಿಯ ಗತ್ತು ಬರಲು ಸಾಧ್ಯವಿಲ್ಲ. ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದರು.

“ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡಿನಲ್ಲಿ ಡಾ| ರಾಜಕುಮಾರ ಅವರು ಹಲಿಗೆ ಬಾರಿಸುವ ಮೂಲಕ ಇದರ ಖ್ಯಾತಿ ಮತ್ತಷ್ಟು ಹೆಚ್ಚಲು ಕಾರಣವಾಯಿತು. ರಾಜ್ಯವನ್ನು ಪ್ರತಿನಿಧಿಸುವ ಜಗ್ಗಲಿಗೆ ತಂಡಗಳು ಈ ಹಬ್ಬದಲ್ಲಿ ಪಾಲ್ಗೊಂಡಿರುವುದು ವಿಶೇಷ ಹಾಗೂ ಆಕರ್ಷಣೀಯವಾಗಿದೆ. ವರ್ಷದಿಂದ ವರ್ಷಕ್ಕೆ ಹಬ್ಬದಲ್ಲಿ ಭಿನ್ನತೆ ಕಾಣುತ್ತಿದ್ದು, ಜನರಿಗೆ ಹತ್ತಿರವಾಗುತ್ತಿದೆ ಎಂದು ಹುಕ್ಕೇರಿ ಶ್ರೀಗಳು ಹೇಳಿದರು.

Advertisement

ಜಗ್ಗಲಿಗೆ ಹಬ್ಬದ ಮುಖ್ಯಸ್ಥ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಆರಂಭದಲ್ಲಿ 10-12 ತಂಡಗಳು ಮಾತ್ರ ಹಬ್ಬದಲ್ಲಿ ಪಾಲ್ಗೊಂಡಿದ್ದವು. ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಈ ಹಬ್ಬವನ್ನು ವೀಕ್ಷಣೆ ಮಾಡುತ್ತಾರೆ. ಐದನೇ ವರ್ಷದ ಹಬ್ಬದಲ್ಲಿ ಸುಮಾರು 40ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಂಡಿವೆ. ಡಿಜೆ ಇದ್ದರೆ ಮಾತ್ರ ಯುವಕರು ಪಾಲ್ಗೊಳ್ಳುತ್ತಾರೆ ಎನ್ನುವ ಮಾತು ಈ ಹಬ್ಬ ನೋಡಿದಾಗ ಸುಳ್ಳಾಗಿದೆ ಎಂದರು.

ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಅಭಿನವ ಮೃತ್ಯುಂಜಯ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ಶ್ರೀಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ| ವಾಗೀಶ ಪಂಡೀತರಾಧ್ಯ ಶಿವಾಚಾರ್ಯ, ಅಕ್ಕಿ ಆಲೂರು ಶಿವಬಸವ ಸ್ವಾಮೀಜಿ, ನರಸಾಪುರ ವೀರೇಶ್ವರ ಶರಣರು, ನರಗುಂದ ಸಿದ್ಧಲಿಂಗ ಶಿವಾಚಾರ್ಯ, ಘಟಕಪ್ರಭಾ ಹೊಸಮಠದ ವಿರುಪಾಕ್ಷಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಂಕರಣ್ಣ ಮುನವಳ್ಳಿ, ವಿಜಯ ಶೆಟ್ಟರ್‌, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ಶಿವು ಮೆಣಸಿನಕಾಯಿ, ರಾಜಶೇಖರ ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ, ಸುಬ್ರಮಣ್ಯ ಶಿರಕೋಳ, ರಂಗನಾಯಕ ತಪೇಲಾ, ಯಮನೂರ ಜಾಧವ, ಸಂತೋಷ ಚವ್ಹಾಣ, ಸುಭಾಸಸಿಂಗ ಜಮಾದರ ಇನ್ನಿತರರಿದ್ದರು.

ಗಮನ ಸೆಳೆದ ಬೇಡರ ವೇಷ :  ಮಲೆನಾಡಿನ ಶಿರಸಿ ಭಾಗದಲ್ಲಿ ಆಚರಣೆಯಲ್ಲಿರುವ ಬೇಡರ ವೇಷ ಕುಣಿತ ಜಗ್ಗಲಿಗೆ ಹಬ್ಬದ ವಿಶೇಷ ಆಕರ್ಷಣೆಯಾಗಿತ್ತು. ಹಾನಗಲ್ಲನ ಶ್ರೀ ತಾರಕೇಶ್ವರ ಕಲಾ ತಂಡದವರು ಬೇಡರ ವೇಷ ಕುಣಿತ ಪ್ರದರ್ಶನ ನೀಡಿದರು. ನವಿಲು ಕುಣಿತದ ಬೇಡರ ವೇಷದ ಹಲಿಗೆ ತಾಳಕ್ಕೆ ಯುವಕರು ಹೆಜ್ಜೆ ಹಾಕಿ ಖುಷಿ ಪಟ್ಟರು. ಕೇಸರಿ ಧ್ವಜ, ತಾಳ ಬದ್ಧ ನೃತ್ಯ ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು.

40ಕ್ಕೂ ಹೆಚ್ಚು ತಂಡಗಳು ಭಾಗಿ :  ಮಹಾರಾಷ್ಟ್ರದ ಕೊಲ್ಲಾಪುರದ ಕಹಳೆ ತಂಡ, ಹಾಲ್‌ ಮ್ಯೂಸಿಕಲ್‌ ತಂಡ, ಗಂಗಾವತಿಯ ವಾದ್ಯ ಮೇಳ, ಸುಳ್ಳದ ದುರ್ಗಾದೇವಿ ಮಹಿಳಾ ಡೊಳ್ಳಿನ ತಂಡ, ಶೆರೇವಾಡ ಗುಂಡೇನಟ್ಟಿ ಜೈ ಹನುಮಾನ ಜಗ್ಗಲಗಿ ತಂಡ ಸೇರಿದಂತೆ ಸುಮಾರು 40ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಂಡಿದ್ದವು. ಮೂರುಸಾವಿರ ಮಠದ ಶಾಲೆ ಆವರಣದಿಂದ ಆರಂಭವಾದ ಜಗ್ಗಲಿಗೆ ಹಬ್ಬದ ಮೆರವಣಿಗೆ ಗಂಗಾಧರ ನಗರದವರೆಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next