Advertisement

ಹಾಲಿಡೇ ಸಂಭ್ರಮ

02:30 AM Jun 07, 2019 | Sriram |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆಯ ‘ಬಂಪರ್‌’ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಇದಕ್ಕೆ ಬದಲಾಗಿ ವಾರ್ಷಿಕವಾಗಿ ನೀಡುವ ಸಾಂದರ್ಭಿಕ ರಜೆಯನ್ನು 15 ರಿಂದ 10ಕ್ಕೆ ಕಡಿತಗೊಳಿಸಲು ನಿರ್ಧರಿಸಲಾಗಿದೆ.

Advertisement

ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ಅನುಮೋದನೆ ನೀಡಲಾಗಿದ್ದು, ಯಾವಾಗಿ ನಿಂದ ಜಾರಿ ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯವರ ತೀರ್ಮಾನಕ್ಕೆ ಬಿಡಲಾಗಿದೆ. ಮುಂದಿನ ವರ್ಷದ ಜನವರಿ 1 ಅಥವಾ ಏಪ್ರಿಲ್ನಿಂದ ಜಾರಿಯಾಗುವ ಸಾಧ್ಯತೆ ಇದೆ.

ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಿದರೆ ತಿಂಗಳಲ್ಲಿ ನಾಲ್ಕು ಭಾನುವಾರ ಹಾಗೂ ಎರಡು ಶನಿವಾರ ರಜೆ ದೊರೆತಂತಾಗುತ್ತದೆ. ಈಗಾಗಲೇ ಪ್ರತಿ ತಿಂಗಳ ಎರಡನೇ ಶನಿವಾರವೂ ಸರ್ಕಾರಿ ರಜೆಯಾಗಿದೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ,ರಾಜ್ಯದ ಎಲ್ಲ ಇಲಾಖೆಗಳ ನೌಕರರಿಗೂ ತಿಂಗಳ ಕೊನೆಯ ಶನಿವಾರ ರಜೆ ನೀಡಲು ಸಂಪುಟ ತೀರ್ಮಾನಿಸಿದೆ. ಶಾಲಾ-ಕಾಲೇಜುಗಳಿಗೂ ಇದು ಅನ್ವಯಿಸುತ್ತದೆಯಾದರೂ ಶಿಕ್ಷಣ ಇಲಾಖೆಯದೇ ರಜೆ ಹಾಗೂ ಕೆಲಸದ ವಿಚಾರದಲ್ಲಿ ಪ್ರತ್ಯೇಕ ಮಾರ್ಗಸೂಚಿ ಇರುವುದರಿಂದ ಅದರಂತೆ ನಡೆಯಲಿದೆ ಎಂದು ಹೇಳಿದರು.

2011 ರಲ್ಲಿ ವೇತನ ಆಯೋಗವು ವಾರದಲ್ಲಿ ಐದು ದಿನ ಕೆಲಸ ಮಾಡುವ ಕುರಿತು ಶಿಫಾರಸು ಮಾಡಿತ್ತು. ನಂತರ ಇತ್ತೀಚೆಗಿನ ವೇತನ ಆಯೋಗವೂ ವಾರದ ಕೊನೇ ಶನಿವಾರ ರಜೆ ಬಗ್ಗೆಯೂ ಶಿಫಾರಸು ಮಾಡಿತ್ತು. ದೇಶದಲ್ಲಿ ಹದಿನೇಳರಿಂದ ಹದಿನೆಂಟು ರಾಜ್ಯಗಳಲ್ಲಿ ವಾರದಲ್ಲಿ ಐದು ದಿನದ ಕೆಲಸದ ಪದ್ಧತಿಯಿದೆ. ಗುಜ ರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಡ ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆಯ ಪದ್ಧತಿಯಿದೆ. ವಿವಿಧ ರಾಜ್ಯಗಳಲ್ಲಿನ ಪದ್ಧತಿ ಬಗ್ಗೆ ಅಧ್ಯ ಯನದ ನಂತರ ರಾಜ್ಯದಲ್ಲೂ ನಾಲ್ಕನೇ ಶನಿವಾರ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

Advertisement

ರಾಜ್ಯ ಸರ್ಕಾರಿ ನೌಕರರಿಗೆ ಪ್ರಸ್ತುತ ಇರುವ ಸಾಂದರ್ಭಿಕ ರಜೆಯನ್ನು 15 ದಿನಗಳಿಂದ 10 ದಿನಗಳಿಗೆ ಇಳಿಸಲು ಸಂಪುಟ ನಿರ್ಧರಿಸಿದೆ.

ಈ ತೀರ್ಮಾನ ಯಾವಾಗಿನಿಂದ ಜಾರಿಯಾಗಬೇಕು ಎಂಬುದು ಮುಖ್ಯಮಂತ್ರಿಯವರ ತೀರ್ಮಾನಕ್ಕೆ ಬಿಡಲಾಗಿದೆ ಎಂದು ಹೇಳಿದರು. 4ನೇ ಶನಿವಾರ ರಜೆ ನೀಡಿ ಬಸವ, ಕನಕ, ವಾಲ್ಮೀಕಿ ಜಯಂತಿ ರಜೆ ರದ್ದುಮಾಡುವ ಪ್ರಸ್ತಾಪವೂ ಇತ್ತಾದರೂ ಸಂಪುಟ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಆಡಳಿತ ಸುಧಾರಣೆ ನಿಟ್ಟಿನಲ್ಲೇ ಈ ಎಲ್ಲ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೇತನ ಆಯೋಗದ ಶಿಫಾರಸ್ಸಿನಂತೆ ರಜೆ ವಿಚಾರದಲ್ಲಿ ಅಧ್ಯಯನ ನಡೆಸಿ ತೀರ್ಮಾನ ಮಾಡಲು ಸಂಪುಟ ಉಪ ಸಮಿತಿ ರಚಿಸಿತ್ತು. ಕೃಷ್ಣ ಬೈರೇಗೌಡರ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಶಿಫಾರಸು ನೀಡಿತ್ತು. ಆ ಶಿಫಾರಸ್ಸಿನಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಿ ಮೂರು ಜಯಂತಿಗಳ ರಜೆ ರದ್ದು ಮಾಡಬಹುದು ಎಂಬ ಅಭಿಪ್ರಾಯ ಸಲ್ಲಿಸಿತ್ತು. ಆದರೆ, ಸಂಪುಟ ಸಭೆಯಲ್ಲಿ ಜಯಂತಿ ರದ್ದು ಪಡಿಸುವ ವಿಚಾರದಲ್ಲಿ ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ನಿರಾಕರಿಸಿ ಯಥಾಸ್ಥಿತಿಯಲ್ಲಿ ರಜೆ ಇರಲಿ. ನಾಲ್ಕನೇ ಶನಿವಾರ ರಜೆ ನೀಡಬಹುದು ಎಂದು ಹೇಳಿದರು. ಅಂತಿಮವಾಗಿ ನಾಲ್ಕನೇ ಶನಿವಾರ ರಜೆ ನೀಡಿ ಸಾಂದರ್ಭಿಕ ರಜೆ ಐದು ದಿನ ಕಡಿತ ಮಾಡಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

ಶಾಲಾ-ಕಾಲೇಜುಗಳಿಗೆ ಅನ್ವಯ ಆಗುವುದಿಲ್ಲ
ನಾಲ್ಕನೇ ಶನಿವಾರದ ರಜೆ ಶಿಕ್ಷಣ ಇಲಾಖೆಯಲ್ಲಿ ಯಾರಿಗೆ ಅನ್ವಯ ಎಂಬ ಬಗ್ಗೆ
ಸ್ಪಷ್ಟತೆ ಇಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಉಪ ನಿರ್ದೇಶಕರ
ಕಚೇರಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಎರಡನೇ ಶನಿವಾರ ರಜೆ
ಇರುವುದರಿಂದ ಸಹಜವಾಗಿ ನಾಲ್ಕನೇ ಶನಿವಾರವೂ ರಜೆ ಸಿಗಲಿದೆ. ಆದರೆ,
ಶಾಲಾ-ಕಾಲೇಜುಗಳಿಗೆ ಇದು ಅನ್ವಯ ಆಗುವುದಿಲ್ಲ. ಏಕೆಂದರೆ ಈಗಲೂ
ಎರಡನೇ ಶನಿವಾರದ ರಜೆಯೂ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ. ಹೀಗಾಗಿ,
ಸರ್ಕಾರದ ಆದೇಶ ಹೊರ ಬಿದ್ದ ನಂತರ ಶಿಕ್ಷಣ ಇಲಾಖೆ ಈ ಕುರಿತು ಅಂತಿಮ
ತೀರ್ಮಾನ ಕೈಗೊಳ್ಳಬೇಕಾಗಿದೆ.

ಪ್ರತಿ ತಿಂಗಳ ನಾಲ್ಕನೇ ಶನಿವಾರ ಸರ್ಕಾರಿ ರಜೆ ಸಂಬಂಧ ಸಚಿವ ಸಂಪುಟ
ತೆಗೆದುಕೊಂಡ ನಿರ್ಧಾರದ ಸರ್ಕಾರಿ ಆದೇಶ ಇನ್ನೂ ಶಿಕ್ಷಣ ಇಲಾಖೆಗೆ
ಬಂದಿಲ್ಲ. ಏನೇ ಆದರೂ ಸರ್ಕಾರಿ ಆದೇಶದಂತೆ ನಡೆದುಕೊಳ್ಳಬೇಕಾಗುತ್ತದೆ.
ಡಿಪಿಆರ್‌ನಿಂದ ಆದೇಶ ಬಂದ ನಂತರವಷ್ಟೇ ಶಿಕ್ಷಕರು ಹಾಗೂ ಶಾಲೆಗಳಿಗೆ
ಮುಂದಿನ ಸೂಚನೆ ನೀಡಲು ಸಾಧ್ಯ.
-ಉಮಾ ಶಂಕರ್‌ ಪ್ರಧಾನ ಕಾರ್ಯದರ್ಶಿ,ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ

ಹಾಲಿ ರಜೆಗಳ ವಿವರ
ಪ್ರತಿ ಭಾನುವಾರ ಹಾಗೂ ಎರಡನೇ ಶನಿವಾರ 60ಸಾಂದರ್ಭಿಕ ರಜೆ 15ನಿರ್ಬಂಧಿತ ರಜೆ 2ವೇತನ ರಹಿತ ರಜೆ 10ಗಳಿಕೆ ರಜೆ 30ವೈದ್ಯಕೀಯ ರಜೆ (ಅಗತ್ಯಕ್ಕೆ ತಕ್ಕಂತೆ) ಹಬ್ಬಗಳ ರಜೆ 15 ರಿಂದ(ಜಯಂತಿಗಳು ಸೇರಿ ) 20ದಿನಗಳವರೆಗೆ ಒಟ್ಟು 137 ದಿನ (ಈಗ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ಘೋಷಿಸಿರು ವುದರಿಂದ 12 ದಿನ ರಜೆ ಸಿಗಲಿದೆ. ಸಾಂದರ್ಭಿಕ ರಜೆ ಗಳಲ್ಲಿ 5 ದಿನ ಕಡಿತ ಮಾಡಿರುವುದರಿಂದ 7 ದಿನ ಹೆಚ್ಚು ವರಿ ರಜೆ ಸಿಗಲಿದೆ. ಒಟ್ಟು ರಜೆ 144 ದಿನ ಆಗಲಿದೆ)

ಸಿ,ಡಿ ದರ್ಜೆಗೂ ಕೌನ್ಸೆಲಿಂಗ್‌
ರಾಜ್ಯ ಸರ್ಕಾರಿ ಗ್ರೂಪ್‌ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್‌ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಸಿ ಮತ್ತು ಡಿ ಗ್ರೂಪ್‌ ನೌಕರರು ವಾರ್ಗವಣೆ ಸಮಯದಲ್ಲಿ ಅನೇಕ ಅನಾನು ಕೂಲತೆ ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸಲು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕರಡು ಕಾನೂನಿಗೆ ಸಂಪುಟ ಒಪ್ಪಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ವಿಧೇ ಯಕ ಮಂಡಿಸಿ ಒಪ್ಪಿಗೆ ಪಡೆದು ಕಾನೂನು ರೂಪಿಸ ಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ. ಜತೆಗೆ ಅನ್ನಭಾಗ್ಯಕ್ಕೆ ನೀಡಲಾಗುವ ಅಕ್ಕಿಯನ್ನು ಈಗಿನಂತೆಯೇ 7 ಕೆಜಿ ವಿತರಿಸಲು ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಗಿದೆ. ಅಲ್ಲದೆ 10 ಕೆಜಿಗೆ ಹೆಚ್ಚಿಸುವ ಅಥವಾ 5 ಕೆಜಿಗೆ ಇಳಿಸುವ ಬಗ್ಗೆ ಚರ್ಚೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next