ಉಡುಪಿ: ನಿರಂತರ ಮಳೆಯ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ 44 ಶಾಲೆಗಳಿಗೆ ಸೋಮವಾರ (ಜು.8 ರಂದು) ರಜೆ ಘೋಷಣೆ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಂದುಹೋಗಲು ಕಷ್ಟವಾಗುವ ಕಡೆಗಳಲ್ಲಿ ರಜೆ ಘೋಷಣೆಗೂ ಸೂಚನೆ ನೀಡಿದ್ದೇವೆ. ಆಯಾ ಶಾಲಾ ಮಟ್ಟದಲ್ಲಿ ನಿರ್ಧಾರ ತೆಗೆದುಕೊಂಡು ಪಾಲಕ – ಷೋಷಕರಿಗೆ ಸೂಚನೆ ನೀಡುವುದು ಮತ್ತು ಮಕ್ಕಳ ಸುರಕ್ಷತೆಗೆ ಹಚ್ಚಿನ ಆದ್ಯತೆ ನೀಡಲು ನಿರ್ದೇಶನ ಕೊಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಕೆ.ಗಣಪತಿ ಉದಯವಾಣಿಗೆ ತಿಳಿಸಿದ್ದಾರೆ.
ಮುಖ್ಯಶಿಕ್ಷಕರಿಗೆ ಸೂಚನೆ:
ಎಲ್ಲ ಮುಖ್ಯ ಶಿಕ್ಷಕರು ತಮ್ಮ ಶಾಲೆಗೆ ಸಂಬಂಧಿಸಿದಂತೆ ಮಳೆ ನೆರೆ, ಕಾಲುಸಂಕ, ಇತ್ಯಾದಿ ಗಳನ್ನು ಗಮನಿಸಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಅಗತ್ಯವೆಂದು ಕಂಡು ಬಂದಲ್ಲಿ ಶಾಲೆಗೆ ರಜೆ ನೀಡುವುದು. ಹಾಗೂ ಈ ಬಗ್ಗೆ ಶಿಕ್ಷಣ ಸಂಯೋಜಕರಿಗೆ ಹಾಗೂ ಸಿಆರ್ ಪಿ ಯವರಿಗೆ ಮಾಹಿತಿ ನೀಡುವುದು. ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮುಖ್ಯ ಶಿಕ್ಷಕರಾಗಿದ್ದು, ವಿವೇಚನೆಯಿಂದ ಕರ್ತವ್ಯ ನಿರ್ವಹಿಸುವುದು.
ರಜೆ ಅಗತ್ಯವಿಲ್ಲದಿದ್ದಲ್ಲಿ, ಮಳೆಯಿಂದ ಶಾಲೆಗೆ ಬರಲು ಅನಾನುಕೂಲ ವಾಗುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಪೋಷಕರಿಗೆ ತಿಳಿಸುವುದು.
ಎಲ್ಲ ಅನುದಾನಿತ, ಸರಕಾರಿ ಹಾಗೂ ಅನುದಾನರಹಿತ ಶಾಲೆಗಳಿಗೆ ಅನ್ವಯಿಸುವಂತೆ ಸೂಚನೆ ನೀಡಲಾಗಿದೆ