Advertisement

ಪಂಚರಂಗಿನ ಮಡಿಕೆ ಒಡೆದು ಹೋಳಿ ಆಚರಣೆ

03:45 PM Mar 14, 2017 | |

ವಾಡಿ: ಗಲ್ಲಿಗಲ್ಲಿಗಳಲ್ಲಿ ಕಾಮದಹನ, ಎಲ್ಲಿ ನೋಡಿದರೂ ಬಣ್ಣದೋಕುಳಿ, ರಂಗುರಂಗಾದ ಯುವಜನರ ಮುಖಚಹರೆಗಳು ಹೋಳಿ ಹಬ್ಬ ರಂಗೇರುವಂತೆ ಮಾಡಿತು. ಪಟ್ಟಣ ಸೇರಿದಂತೆ ಸುತ್ತಲ ಗ್ರಾಮಗಳಾದ ರಾವೂರು, ಲಕ್ಷಿಪುರವಾಡಿ, ಲಾಡ್ಲಾಪುರ, ಕಮರವಾಡಿ,

Advertisement

ಬಳವಡಗಿ, ಹಳಕರ್ಟಿ,ಇಂಗಳಗಿ, ಕೊಂಚೂರು, ನಾಲವಾರ, ಸನ್ನತಿ ಹಾಗೂ ಕೊಲ್ಲೂರು ಗ್ರಾಮಗಳಲ್ಲಿ ಹೋಳಿ ಹಬ್ಬದ ಸಮಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ರಂಗಿನಾಟ ಶಾಂತಿಯಿಂದ ನಡೆಯಿತು. ಯುವಕರ ಗುಂಪುಗಳು ಮನೆ ಮನೆಗೆ ತೆರಳಿ ಬೊಬ್ಬೆ ಹೊಡೆದು ಬಣ್ಣ ಹಚ್ಚುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. 

ಹೊಳೆ ಸ್ನಾನ: ಪುಡಿ ಬಣ್ಣವನ್ನು ಕೈಬಿಟ್ಟ ಬಹುತೇಕ ಯುವಕರು, ತೈಲ ವರ್ಣ ಹಾಗೂ ಕೋಳಿ ಮೊಟ್ಟೆಗಳನ್ನೆ ಬಳಕೆ ಮಾಡಿದ್ದು ಎಲ್ಲೆಡೆ ಗೋಚರಿಸಿತು. ಕಪ್ಪು ಮಸಿ ಮಿಶ್ರಿತ ಬಣ್ಣದೊಂದಿಗೆ ಮೊಟ್ಟೆ ಒಡೆದು ತಲೆಕೂದಲೆಲ್ಲ ಗಬ್ಬೆದ್ದು ನಾರುವಂತೆ ಮಾಡಿ ಸಂತಸಪಡುತ್ತಿದ್ದ ಪಡ್ಡೆ ಹುಡುಗರ ತಂಡ ಹೆಚ್ಚಿತ್ತು. ಬಣ್ಣದಾಟದ ನಂತರ ಯುವಕರು ಸಮೀಪದ ಕಾಗಿಣಾ ಮತ್ತು ಭೀಮಾ ನದಿಗಳಲ್ಲಿ ಸ್ನಾನ ಮಾಡಿ ಹಬ್ಬದ ಸಂಭ್ರಮಕ್ಕೆ ತೆರೆ ಎಳೆದರು.

ರಾವೂರ: ಗ್ರಾಮದಲ್ಲಿ ಹೋಳಿ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಸಮುದಾಯಗಳ ಯುವಕರು ಸಾಮೂಹಿಕ ಬಣ್ಣದೋಕುಳಿಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಶರಣ ನಗರದ ಯುವಕರು ಎತ್ತರದ ಮರದ ತೊಂಗೆಗೆ ಕಟ್ಟಲಾಗಿದ್ದ ಪಂಚರಂಗದ ಮಡಿಕೆ ಒಡೆಯುವ ಹರಸಾಹಸ ನೋಡುಗರ ಮನತಣಿಸಿತು. ಕೊನೆಗೂ ಮಡಿಕೆ ಒಡೆದು ಹಬ್ಬದ ಸಂಭ್ರಮ ಮೆರೆದರು. 

ಸೇವಾಲಾಲ ನಗರ: ಇತರ ಜನಾಂಗದ ಜನರು ರವಿವಾರ ಸಂಜೆ ಕಾಮದಹನ ಮಾಡಿದರೆ, ಬಂಜಾರಾ (ಲಂಬಾಣಿ) ಸಮುದಾಯದ ತಾಂಡಾಗಳಲ್ಲಿ ಸೋಮವಾರ ಬೆಳಗಿನ ಜಾವ 5:00 ಗಂಟೆಗೆ ಕಾಮದಹನ ನಡೆಯಿತು. ಪಟ್ಟಣದ ಸೇವಾಲಾಲ ನಗರದಲ್ಲಿ ಕುರುಳು, ಕಟ್ಟಿಗೆ ಕ್ರೂಡೀಕರಿಸಿ ಕಾಮದಹನ ನೆರವೇರಿಸಲಾಯಿತು.

Advertisement

ಮಂಗಳವಾರ ಬೆಳಗ್ಗೆ ತಾಂಡಾಗಳಲ್ಲಿ ಬಣ್ಣದಾಟ ನಡೆಯಲಿದೆ ಎಂದು ತಾಂಡಾ ಮುಖಂಡರು ತಿಳಿಸಿದರು. ಪಿಎಸ್‌ಐ ಸಂತೋಷಕುಮಾರ ರಾಠೊಡ ಹಬ್ಬಕ್ಕೆ ಸೂಕ್ತ ರಕ್ಷಣೆ ಒದಗಿಸಿದ್ದರಿಂದ ಹೋಳಿ ಹಬ್ಬ ಶಾಂತಿಯಿಂದ ಅಂತ್ಯಗೊಂಡಿತು.  

Advertisement

Udayavani is now on Telegram. Click here to join our channel and stay updated with the latest news.

Next