ಮಾಸ್ತಿ: ಕಾಮನ ಕಟ್ಟಿಗೆ, ಭೀಮನ ಬೆರಣಿ, ಅಡಿಕೆ ಗೋಟು ಎಕ್ಕಡದೇಟು ಏನೇನು ಕದ್ದರು? ಸೌದೆ ಬೆರಣಿ ಕದ್ದರು,. ಯಾತಕ್ಕಾಗಿ ಕದ್ದರು? ಕಾಮಣ್ಣನನ್ನು ಸುಡೊಕೆ ಎಂದು ಹೇಳಿ ಬಾಯಿ ಬಡಿದು ಕೊಳ್ಳುವ ಕಾಮನ ಹಬ್ಬ ನಡೆದಿದ್ದು ಮಾಸ್ತಿಯಲ್ಲಿ. ದಕ್ಷ ಬ್ರಹ್ಮನ ಮಗಳಾದ ರತಿ ಮನ್ಮಥನ ಪತ್ನಿ ಕಾಮಿ, ಮಯಾವತಿ, ರಾಗಲತಾ ಶುಭಾಂಗಿ ಮೊದಲಾದ ಹೆಸರು ಈಕೆಗೆ ಇವೆ. ದೇವತೆಗಳ ಮಾತಿನಂತೆ ಮನ್ಮಥ ಕಬ್ಬಿನ ಬಿಲ್ಲೆಗೆ ದುಂಬಿಗಳ ಹಗ್ಗ ಬಿಗಿದು ಪುಷ್ಪ ಮೊನೆಯ ಬಾಣಗಳನ್ನು ಶಿವನನ್ನು ಪಾರ್ವತಿಯಲ್ಲಿ ಆಸಕ್ತನಾಗುವಂತೆ ಮಾಡಲು ಬಾಣವನ್ನು ಶಿವನ ಮೇಲೆ ಪ್ರಯೋಗಿಸಿ ತಪೋ ಭಂಗ ಮಾಡುತ್ತಾನೆ.
ಶಿವನು ಕೋಪಗೊಂಡು ತನ್ನ ಹಣೆಯ 3ನೇ ಕಣ್ಣು ಬಿಟ್ಟು ಕಾಮನನ್ನು ದಹನ ಮಾಡುತ್ತಾನೆ. ನಂತರ ದೇವತೆಗಳ ಪ್ರಾರ್ಥನೆಯಂತೆ ಶಿವನು ಕಾಮನಿಗೆ ಮರು ಜೀವ ನೀಡಿ ಬದುಕಿಸಿದನು ಎಂಬ ಪ್ರತೀತಿ ಹಾಗೂ ಪುರಾಣ ಐತಿಹಾಸಿಕ ನೆನಪಿನ ಭಕ್ತಿಯ ಹಬ್ಬ ಕಾಮನ ಹುಣ್ಣಿಮೆ.
ಕಾಮನ ಹುಣ್ಣಿಮೆಯಂದು ತಮ್ಮ ಮನೆಗಳಲ್ಲಿ ಉಪಯೋಗಕ್ಕೆ ಬಾರದ ಹಳೆ ಪೊರಕೆ, ಮೊರ, ಮಂಕರಿ, ಚಾಪೆ, ತೆಂಗಿನ ಮರ, ನೀಲಗಿರಿ ಮರದ ಬುಡ ಕಟ್ಟಿಗೆ, ಸೌದೆ ಮುಂತಾದವುಗಳ ರಾಶಿ ಹಾಕಿ ಹುಣ್ಣಿಮೆ ರಾತ್ರಿ ರಾಶಿಗೆ ಕಾಮನ ಬೊಂಬೆಯನ್ನು ನಿಲ್ಲಿಸಿ ಪೂಜೆ ಸಲ್ಲಿಸಿದ ನಂತರ ಬೆಂಕಿ ಹಚ್ಚುತ್ತಾರೆ. ಇದು ಶಿವನು ತಪೋಭಂಗ ಮಾಡಿದ ಕಾಮನನ್ನು ತನ್ನ ಹಣೆಯ 3ನೇ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ ಎಂಬುದರ ಸಂಕೇತವಾಗಿ ಕಾಮನನ್ನು ಸುಡುವ ಸಂಪ್ರದಾಯವಿದೆ.
ಕಾಮನನ್ನು ದಹಿಸಿ ತನ್ನ ಕಾಮನೆಗಳನ್ನು ನಿಯಂತ್ರಿಸಿ ರತಿ ಮನ್ಮಥರಂತೆ ಆದರ್ಶ ದಂಪತಿಗಳಾಗಿ ಬಾಳುವಂತೆ ಬುದ್ಧಿ ಪರಶಿವ ಎಲ್ಲರಿಗೂ ದಯಪಾಲಿಸಲಿ ಎಂದು ಪ್ರಾರ್ಥಿಸುವ ಮೂಲಕ ಕಾಮಣ್ಣನ ಹಬ್ಬ ಆಚರಿಸುವುದು ವಿಶೇಷ.
ರಾಜ್ಯದ ಹಲವು ಭಾಗಗಳಲ್ಲಿ ಆಚರಿಸುವ ಕಾಮನ ಹುಣ್ಣಿಮೆಯ ಅಂಗವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಅದೇ ರೀತಿಯಾಗಿ ಮಾಸ್ತಿಯಲ್ಲಿ ಹೋಳಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಇನ್ನು ಸೋಮವಾರ ರಾತ್ರಿ ಕಾಮನ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಗ್ರಾಮದ ಮರಾಠರ ಬೀದಿಯಲ್ಲಿ ಪೂಜೆ ಸಲ್ಲಿಸಿದ ನಂತರ ಕಾಮನ ದಹಿಸುವ ಕಾರ್ಯ ನಡೆಯಿತು.
ಇದೇ ಸಂದರ್ಭದಲ್ಲಿ ಮಾಸ್ತಿ ಗ್ರಾಮದ ಮರಾಠರ ಸಮುದಾಯದವರು, ಸೇಟ್ ಮಾರವಾಡಿಗಳು ಸೇರಿದಂತೆ ಸಾರ್ವಜನಿಕರು ಕಾಮನ ದಹಿಸುವ ಸ್ಥಳಕ್ಕೆ ಆಗಮಿಸಿ ಮನೆಗಳಲ್ಲಿ ಉಪಯೋಗಕ್ಕೆ ಬಾರದ ಹಳೆ ಪೊರಕೆ, ಮೊರ, ಮಂಕರಿ, ಚಾಪೆ, ತೆಂಗಿನ ಮರಗಳು, ನೀಲಗಿರಿ ಮರದ ಬುಡ ಕಟ್ಟಿಗೆ, ಸೌದೆ ಸೇರಿ ಇನ್ನಿತರೆ ಅನುಪಯುಕ್ತ ವಸ್ತು ರಾಶಿ ಹಾಕಿ ಕಾಮನ ದಹನ ವೀಕ್ಷಿಸಿದರು.
-ಎಂ.ಮೂರ್ತಿ