ಬೆಂಗಳೂರು: ಹುಡುಗರ ಜೊತೆ ಹೋಳಿ ಆಡದಂತೆ ಮಹಿಳಾ ಎಎಸ್‌ಐ ಎಚ್ಚರಿಕೆ ನೀಡಿದ್ದಾರೆ. ಹೋಳಿ ಆಡುವುದು ಅಪರಾಧವೇ? ಎಂಬ ಪ್ರಶ್ನೆಗಳನ್ನು ಕೇಳಿ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರು ಆಕ್ರೋವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ಗಳು ಇದೀಗ ವೈರಲ್ ಆಗಿವೆ.
ಮಾರ್ಚ್ 23ರಂದು ಸಂಜೆ ಹೊಸೂರು ರಸ್ತೆಯಲ್ಲಿ ನಡೆದ ಘಟನೆ ಬಗ್ಗೆ ಟ್ವೀಟ್ಟರ್‌ನಲ್ಲಿ ಹಲವರು ಅಭಿಪ್ರಾಯ ಹಂಚಿಕೊಂಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಗುಂಟೆ ಠಾಣೆಯ ಮಹಿಳಾ ಎಎಸ್‌ಐ, ನಾವು ಸ್ನೇಹಿತರ ಜತೆ ಹೋಳಿ ಆಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ನಿಂದಿಸಿದ್ದಾರೆ. ನಮ್ಮ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹೋಳಿ ಆಡುವುದು ಅಪರಾಧವೇ? ಫುಟ್‌ಪಾತ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದವನ್ನು ಎಎಸ್‌ಐ ನಿಂದಿಸಿದ್ದಾರೆ. ಇದು ಸರಿಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕಿ ಟ್ವಿಟ್ಟರ್‌ನಲ್ಲಿ ಹಲವು ಖಾತೆಗಳಿಂದ ಮಹಿಳಾ ಅಧಿಕಾರಿಯ ನಡೆಯನ್ನು ಪ್ರಶ್ನಿಸಿದ್ದಾರೆ.
ಹಲವು ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ಆಕ್ರೋಶದ ಟ್ವಿಟ್‌ಗಳನ್ನು ಹಾಗೂ ಇನ್ಸ್‌ಟಾಗ್ರಾಂನಲ್ಲಿ ಹಾಕಿದ್ದು, ಬೆಂಗಳೂರು ನಗರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್‌ಗಳಿಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ಮಹಿಳಾ ಅಧಿಕಾರಿಯ ನಡೆ ಸಮರ್ಥನೀಯವಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಸ್ಸಿಗಾಗಿ ಸ್ನೇಹಿತೆಯರ ಜತೆ ಕಾಯುತ್ತಿದ್ದವರನ್ನು ಮಹಿಳಾ ಅಧಿಕಾರಿ ನಿಂದಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಮೊಬೈಲ್ ಕಿತ್ತಿಟ್ಟುಕೊಂಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಪೋಸ್ಟ್ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಎಸ್‌ಐ ಪದ್ಮಾವತಿ ಅವರನ್ನು ಹೊಯ್ಸಳ ಪೆಟ್ರೋಲಿಂಗ್ ಕರ್ತವ್ಯದಿಂದ ಚುನಾವಣಾ ಕರ್ತವ್ಯಕ್ಕೆ ವರ್ಗಾವಣೆ ಮಾಡಲಾಗಿದೆ.
ಮಾ. 23ರಂದು ಕೆಲವು ಯುವಕರು ಯುವತಿಯರ ಇಚ್ಚೆಗೆ ವಿರುದ್ಧವಾಗಿ ಹೋಳಿ ಬಳಿಯಲು ಯತ್ನಿಸುತ್ತಿರುವ ಬಗ್ಗೆ ಬಂದ ಕರೆ ಆಧರಿಸಿ ಹೊಯ್ಸಳ ಪೆಟ್ರೋಲಿಂಗ್‌ನಲ್ಲಿದ್ದ ಎಎಸ್‌ಐ ಪದ್ಮಾವತಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಬಲವಂತವಾಗಿ ಯುವತಿಯರಿಗೆ ಹೋಳಿ ಬಳಿಯದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್, ಸಾಮಾಜಿಕ ಜಾಲತಾಣಗಳಿಂದ ಈ ವಿಚಾರ ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.