ಹೊಳೆನರಸೀಪುರ: ಶೋಷಿತರು, ಆರ್ಥಿಕವಾಗಿ ಹಿಂದುಳಿದವರು ವಾಸಿಸುತ್ತಿರುವ ಪಟ್ಟಣದ ನಾಯಕ ನಗರ, ಸಿದ್ಧಾರ್ಥ ನಗರ, ಡಾ.ಬಿ.ಆರ್. ಅಂಬೇಡ್ಕರ್ ನಗರ ಸೇರಿ ಕೆಲವು ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜರೋಷವಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ ಎಂದು ನೊಂದ ಮಹಿಳೆಯರು ದೂರಿದ್ದಾರೆ.
ಈಗಾಗಲೇ ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಬಡ ಕುಟುಂಬಗಳು ಈ ಅಕ್ರಮ ಮದ್ಯ ಮಾರಾಟದಿಂದ ಬೀದಿಗೆ ಬರುವಂತಾಗಿದೆ. ಮನೆಯ ಯಜಮಾನ ದುಡಿದ ಹಣವನ್ನೆಲ್ಲ ಮದ್ಯ ಸೇವನೆಗೆ ವಿನಿಯೋಗಿಸುತ್ತಿರುವುದರಿಂದ ಕುಟುಂಬ ಸದಸ್ಯರು ಹಸಿವಿನಿಂದ ಬಳಲುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ರಮಕೈಗೊಂಡಿದ್ದರು: ಈ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಹಲವು ಬಡಾವಣೆಗಳ ನಾಗರಿಕರು ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ನಗರ ಸೇರಿ ಹಲವು ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದಾಗ, ಅಬಕಾರಿ ಮತ್ತು ಪೊಲೀಸರು ದಾಳಿ ನಡೆಸಿ, ಕೆಲವರ ವಿರುದ್ಧ ಕ್ರಮಕೈಗೊಂಡಿದ್ದರು.
ಇದನ್ನೂ ಓದಿ:ಮೂರಲ್ಲಿ ಒಂದು ಚಿರತೆ ಬೋನಿಗೆ ಬಿತ್ತು! ಬಿಸಲೆ ಅರಣ್ಯದಲ್ಲಿ ಜೀವ ಭಯ ಹುಟ್ಟಿಸಿದ್ದ ಚಿರñ
ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ: ದೌರ್ಭಾಗ್ಯ ಎಂದರೆ, ಅಕ್ರಮ ಮದ್ಯ ಮಾರಾಟ ಪ್ರಕರಣಗಳಲ್ಲಿ ಸಿಲುಕಿ ಕೊಂಡಿದ್ದ ವ್ಯಕ್ತಿಗಳೇ, ಮತ್ತಷ್ಟು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಲ ಚಿಲ್ಲರೆ ಅಂಗಡಿ, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆಯವರು ನೆಪಮಾತ್ರಕ್ಕೆ ದಾಳಿ ನಡೆಸಿ, ಎಚ್ಚರಿಕೆ ನೀಡಿ, ವಾಪಸ್ ಕಳುಹಿಸುತ್ತಿರುವುದೇ, ಈ ಅಕ್ರಮ ಮದ್ಯ ಮಾರಾಟ ಹೆಚ್ಚಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಹೊಳೆನರಸೀಪುರ ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಅಕ್ರಮ ಮದ್ಯ ಮಾರಾಟದ ಮಾಹಿತಿ ಬಂದಿದೆ. ಅಕ್ರಮ ಮದ್ಯ ಮಾರಾಟ ಮಾಡುವ ವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈ ಗೊಳ್ಳುತ್ತಿದೆ. ಕಳೆದೊಂದು ವಾರ ದಿಂದ ಅಕ್ರಮ ಮದ್ಯ ತಡೆಗೆ ತೀವ್ರ ನಿಗಾವಹಿಸಲಾಗಿದೆ.
– ಶಂಕರಪ್ಪ, ಸರ್ಕಲ್ ಇನ್ಸ್ ಪೆಕ್ಟರ್, ಅಬಕಾರಿ ಇಲಾಖೆ, ಹೊಳೆನರಸೀಪುರ ವೃತ್ತ