ಶಿವಮೊಗ್ಗ: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗುಡಮಗಟ್ಟೆ ಚಾನಲ್ ಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಹೊಳೆಹೊನ್ನೂರು ಆನವೇರಿ ಸಮೀಪದ ಗುಡಮಗಟ್ಟೆಯಲ್ಲಿರುವ ಭದ್ರಾ ಚಾನಲ್ ನಲ್ಲಿ ಈ ಘಟನೆ ಸಂಭವಿಸಿದೆ.
ಮೃತರನ್ನು ರಜತ್ (10ವರ್ಷ) ಹಾಗೂ ರೋಹನ್ (15 ವರ್ಷ) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದರು. ಸೋಮವಾರ ಸಂಜೆ ಮೂರುವರೆ ನಾಲ್ಕು ಗಂಟೆ ಸುಮಾರಿಗೆ ಇಬ್ಬರು ಭದ್ರಾ ಚಾನಲ್ ಬಳಿ ಬಂದಿದ್ದಾರೆ. ಚಾನಲ್ ಏರಿ ಮೇಲೆ ಬಂದ ಇಬ್ಬರು ಬಾಲಕರ ಪೈಕಿ ಚಿಕ್ಕವನು ನೀರಿಗಿಳಿದಿದ್ದಾನೆ. ಆದರೆ ನೀರಿನ ಸೆಲೆಯಲ್ಲಿ ಆತ ಈಜಲಾಗದೇ ಮುಳಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಇನ್ನೊಬ್ಬನು ನೀರಿಗಿಳಿದಿದ್ದು, ಆತನೂ ಸಹ ಚಾನಲ್‌ನಲ್ಲಿ ಮುಳುಗಿದ್ದಾನೆ. ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಟ್ಟೆ ಮಾತ್ರ ಪತ್ತೆಯಾಗಿದ್ದರಿಂದ ಪ್ರಕರಣ ಅನುಮಾನ ಸಹ ಮೂಡಿಸಿತ್ತು. ಆನಂತರ ರಾತ್ರಿ 9.30 ರ ಸುಮಾರಿಗೆ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವ ಮಹಜರ್ ನಡೆಸಿ ಪೋಷಕರಿಗೆ ಬಾಲಕರ ಮೃತದೇಹವನ್ನು ಒಪ್ಪಿಸಿದ್ದಾರೆ.
ಇದನ್ನೂ ಓದಿ: Telangana Election 2024: ಕಳೆಗುಂದಿದ ಬಿಆರ್‌ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ