Advertisement

ಮಂಗಳೂರು ಗಿಲ್‌ ನೆಟ್‌ ದೋಣಿಯಲ್ಲಿ ತೂತು:ಏಳು ಮಂದಿ ಮೀನುಗಾರರ ರಕ್ಷಣೆ

02:02 PM Jun 08, 2017 | Harsha Rao |

ಸುರತ್ಕಲ್‌: ಮಂಗಳೂರಿನ ಹಳೇ ದಕ್ಕೆಯಿಂದ ಮಲ್ಪೆಗೆ ತೆರಳುತ್ತಿದ್ದ ಗಿಲ್‌ನೆಟ್‌ ದೋಣಿಯೊಂದು ತಣ್ಣೀರುಬಾವಿ ಸಮೀಪ ತೂತಾಗಿ ಮುಳುಗುವ ಅಪಾಯದಲ್ಲಿದ್ದ ಸಂದರ್ಭ ತುರ್ತು ರಕ್ಷಣೆಯ ಮಾಹಿತಿ ಪಡೆದ ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆ ನಡೆಸಿ ಏಳು ಮಂದಿ ಮೀನುಗಾರರನ್ನು ರಕ್ಷಿಸಿದೆ.

Advertisement

ಬುಧವಾರ  ಮುರುಗೇಶ್‌ ಮಂಜೇಶ್ವರಿ ಗಿಲ್‌ನೆಟ್‌ ದೋಣಿ ಈ ಅವಘಡಕ್ಕೆ ತುತ್ತಾಗಿದ್ದು, ದೊಣಿಯಲ್ಲಿದ್ದ  ಬೆಂಗ್ರೆಯ ಆನಂದ್‌, ತಿರುವನಂತಪುರದ ಮೀನುಗಾರ ರಾದ ಕ್ಸೇವಿಯರ್‌, ತತೂಸ್‌, ಕ್ಲೆಮೆಂಟ್‌, ಆ್ಯಂಟನಿ ಕೋಸ್ಟಾ, ಅಲೆಕ್ಸಾಂಡರ್‌ ಮಿನೇಜಸ್‌ ಹಾಗೂ  ಜೇಸ್ಟೂಸ್‌ ಅವರನ್ನು ರಕ್ಷಿಸಲಾಯಿತು.

ಮುಂಜಾನೆ ಹಳೇ ದಕ್ಕೆಯಿಂದ ಮಲ್ಪೆಗೆ ಹೊರಟಿದ್ದ  ಮಂಜೇಶ್ವರಿ ದೋಣಿ ಸುಮಾರು 9 ಗಂಟೆ ಹೊತ್ತಿಗೆ  ಮುಳುಗಲು ಆರಂಭಿಸಿತು.

ತತ್‌ಕ್ಷಣ ಮೀನುಗಾರರು ಎನ್‌ಎಂಪಿಟಿಗೆ ವಾಕಿಟಾಕಿ ಮೂಲಕ ಮಾಹಿತಿ ನೀಡಿ ರಕ್ಷಣೆಗೆ ಮೊರೆ ಇಟ್ಟರು.ಸಮೀಪದಲ್ಲೇ ಗಸ್ತು ತಿರುಗುತ್ತಿದ್ದ ರಾಜ್‌ದೂತ್‌ ಹಡಗನ್ನು ರವಾನಿಸಿ ಸುಮಾರು 10.45ರ ವೇಳೆಗೆ ರಕ್ಷಿಸಲಾಯಿತು. 

ಮಳೆಗಾಲದ ಸಂದರ್ಭ ಸಮುದ್ರ ಉಗ್ರಾವತಾರ ತಾಳುವುದು ಎಲ್ಲರಿಗೂ ತಿಳಿದ ವಿಚಾರ. ಈ ಸಂದರ್ಭ ಮೀನುಗಾರರು ತಮ್ಮ ರಕ್ಷಣೆಗೆ ಆದ್ಯತೆ ನೀಡಿ ಬಳಿಕ ತೆರಳಬೇಕು. ಸರಿಯಾದ ರಕ್ಷಣಾ ಉಪಕರಣಗಳನ್ನು ಮುನ್ನೆಚ್ಚರಿಕೆಯಾಗಿ ಸುಸ್ಥಿಯಲ್ಲಿರ ಬೇಕು. ಕೋಸ್ಟ್‌ ಗಾರ್ಡ್‌ ಹಡಗು ಈ ಭಾಗದ ಕರಾವಳಿ ತೀರದಲ್ಲಿ ಸದಾ ಗಸ್ತಿನಲ್ಲಿ ಇರುತ್ತದೆ ಯಾವುದೇ ಅಪಾಯದ ಕ್ಷಣದಲ್ಲಿಯೂ ಮೀನುಗಾರರ ರಕ್ಷಣೆಗೆ ಧಾವಿಸಲಿದೆ ಎಂದು ಕೋಸ್ಟ್‌ಗಾರ್ಡ್‌ ಡೆಪ್ಯುಟಿ ಇನ್ಸ್‌ಪೆಕ್ಟರ್‌ ಜನರಲ್‌ ಎಸ್‌.ಎಸ್‌. ದಸಿಲಾ ಅವರು  ಹೇಳಿದರು.

Advertisement

ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಮಹೇಶ್‌ ಕುಮಾರ್‌, ಕೋಸ್ಟ್‌ಗಾರ್ಡ್‌ನ ಗುಲ್ವಿಂದರ್‌ ಸಿಂಗ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ದೋಣಿ ಸಂಪೂರ್ಣ ಹಾನಿಗೀಡಾಗಿದ್ದು ಸುಮಾರು 9 ಲ.ರೂ. ನಷ್ಟ ಸಂಭವಿಸಿದೆ. ದೊಣಿಯಲ್ಲಿದ್ದ ಮೀನುಗಾರರನ್ನು ಕೋಸ್ಟ್‌ಗಾರ್ಡ್‌ ರಕ್ಷಿಸಿದ್ದರೂ ದೋಣಿಯನ್ನು ಸಮುದ್ರದ ನಡುವೆ ಬಿಟ್ಟು ಬಂದ ಬಗ್ಗೆ ಮೀನುಗಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ದೋಣಿ
ಮಲ್ಪೆ ಬಂದರು ಮೂಲಕ ಮೀನುಗಾರಿಕೆಗೆ ತೆರಳಲು ನಾವು ದೋಣಿಯನ್ನು ಸಾಗಿಸುತ್ತಿದ್ದೆವು. ಹೊಸ ದೋಣಿಯಾಗಿದ್ದರಿಂದ ಯಾವುದೇ ಪರಿಶೀಲನೆ ಅಗತ್ಯವಿಲ್ಲ ಎಂದು ಮನಗಂಡು 10 ಎಚ್‌ಪಿ ಎಂಜಿನ್‌ ಬಳಸಿ ಹೋಗುತ್ತಿದ್ದಾಗ ತಣ್ಣೀರು ಬಾವಿ ಬಳಿ ದೋಣಿಯೊಳಗೆ ನೀರು ನುಗ್ಗಿದಾಗ ಅನುಮಾನವಾಯಿತು.

ಬಲೆ ಮತ್ತಿತರ ಪರಿಕರ ತೆಗೆದು ನೋಡಿದಾಗ ದೋಣಿ ತೂತಾಗಿದ್ದು ಗಮನಕ್ಕೆ ಬಂತು. ತತ್‌ಕ್ಷಣ ದೋಣಿಯೊಳಗೆ ನುಗ್ಗಿದ್ದ ನೀರು ಖಾಲಿ ಮಾಡಲು ಯತ್ನಿಸಿದೆವು.ಬಳಿಕ ರಕ್ಷಣೆಗಾಗಿ ಕರೆ ಮಾಡಿದೆವು. ಕೋಸ್ಟ್‌ಗಾರ್ಡ್‌ ಸಿಬಂದಿ ಸಕಾಲಕ್ಕೆ ಆಗಮಿಸಿ ನಮ್ಮ ಜೀವ ಉಳಿಸಿದ್ದಾರೆ.ಅವರಿಗೆ ಧನ್ಯವಾದಗಳು ಎಂದು ಮೀನುಗಾರ ಆನಂದ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next