ಶಿವಮೊಗ್ಗ: ಭೋವಿ ಸಮಾಜದ ಪ್ರತಿಯೊಬ್ಬರೂ ತಮ್ಮಲ್ಲಿರುವ ಮನಸ್ತಾಪ ಬದಿಗೊತ್ತಿ ಸಂಘಟಿತವಾಗಿ ಮುನ್ನಡೆದಾಗ ಸಮಾಜ ಬಲಗೊಳ್ಳಲು ಸಾಧ್ಯ ಎಂದು ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹೊಳಲೂರು ಜನತಾ ಕಾಲೋನಿಯಲ್ಲಿ ಶ್ರೀ ವೆಂಕಟೇಶ್ವರ ಸೇವಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಭೋವಿ ಸಮಾಜದ ಬೃಹತ್ ಧಾರ್ಮಿಕ ಸಭೆ, ಶ್ರೀ ವೆಂಕಟೇಶ್ವರ ದೇವಾಲಯದ ಪ್ರವೇಶೋತ್ಸವ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭೋವಿ ಸಮಾಜದ ಜನರು ಒಂದುಗೂಡದ ಕಾರಣ ಇಂದಿಗೂ ಸಮಾಜದ ಜನರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕವಾಗಿ ಹಿಂದುಳಿದಿದ್ದಾರೆ. ಈ ಬಗ್ಗೆ ಅರಿತು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸಿದಾಗ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಹಾಗೂ ಸಮಾಜ ಸರ್ವತೋಮುಖವಾಗಿ ಬೆಳವಣಿಗೆ ಕಾಣಲು ಸಹಾಯವಾಗುತ್ತದೆ ಎಂದರು.
ಕಾಗಿನೆಲೆ ಕನಕಗುರು ಪೀಠದ ಶ್ರೀ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, “ಸಮಾಜದ ಪ್ರತಿಯೊಬ್ಬರೂ ಮೌಡ್ಯ ಆಚರಣೆಗಳಿಂದ ದೂರ ಸರಿದು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, “ಭೋವಿ ಸಮಾಜದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಬೇಕಾದ ಅಗತ್ಯ ಸ್ಥಾನಮಾನಗಳನ್ನು ನೀಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, “ಮನುಷ್ಯನ ನೆಮ್ಮದಿಯ ಜೀವನಕ್ಕೆ ಧಾರ್ಮಿಕ ಕಾರ್ಯಗಳು ಅತ್ಯವಶ್ಯಕ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ’ ಎಂದು ಆಶಿಸಿದರು. ಕಾರ್ಯಕ್ರಮದ ಸಲಹಾ ಮತ್ತು ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸಂತೋಷ್ ಹೊಳಲೂರು ಮಾತನಾಡಿ, “ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಭೋವಿ ಸಮಾಜ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೆಲ್ಲರೂ ಇಂದಿಗೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಹಾಗಾಗಿ ಸಮಾಜದ ಪ್ರತಿಯೊಬ್ಬರೂ ಸಂಘಟಿತ ಪ್ರಯತ್ನದಿಂದ ಮುಂದೆ ಬರಬೇಕಿದೆ ಎಂದು ಕರೆ ನೀಡಿದರು.
ಶಿಕಾರಿಪುರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ, ಶಾಸಕ ಕೆ.ಬಿ. ಅಶೋಕ್ ನಾಯ್ಕ, ಪ್ರಮುಖರಾದ ಧೀರರಾಜ್ ಹೊನ್ನವಿಲೆ, ವೀರಭದ್ರಪ್ಪ ಪೂಜಾರ್, ರಾಮಚಂದ್ರಪ್ಪ ಹೊಳಲೂರು ಮತ್ತಿತರರಿದ್ದರು.