Advertisement

ಅಧಿಕಾರಿಗಳ ವಿರುದ್ಧ ಅಧ್ಯಕ್ಷೆ-ಸದಸ್ಯರ ಆಕ್ರೋಶ

05:54 PM Oct 05, 2019 | Naveen |

ಹೊಳಲ್ಕೆರೆ: ತಾಪಂ ವಾರ್ಷಿಕ ಅನುದಾನದ ಖರ್ಚುಗಳನ್ನು ತಾಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ ಕೋಟ್ಯಂತರ ಹಣ ಖರ್ಚು ಮಾಡಿ ಇಂದಿನ ಸಭೆಯಲ್ಲಿ ಅನುಮೋದನೆ ನೀಡುವಂತೆ ಅಜೆಂಡಾ ಮಂಡಿಸಿರುವುದು ಜನಪತ್ರಿನಿಧಿಗಳನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಎಂದು ತಾಪಂ ಅಧ್ಯಕ್ಷೆ ಸುಜಾತಾ ಧನಂಜಯ ತಾಪಂ ಎಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರಿಗಳ ವಿರುದ್ಧ ಗರಂ ಆದರು.

ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್‌ ಮಾತನಾಡಿ, ತಾಪಂ ವ್ಯಾಪ್ತಿಯ ಇಲಾಖೆಗೆ ಬಂದಿರುವ ಕಳೆದ ವರ್ಷದ ಅನುದಾನ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ. ಏಕಪಕ್ಷೀಯವಾಗಿ ಹಣ ದುರ್ಬಳಕೆ ಮಾಡುತ್ತಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು. ಸರಕಾರ ಇಲಾಖೆಗೆ ಬಿಡುಗಡೆ ಮಾಡಿದ ಅನುದಾನ ಮಾಹಿತಿ ಇಲ್ಲದೆ ಸಭೆಯಲ್ಲಿ ಅನುಮೋದನೆ ನೀಡಲು ಸಾಧ್ಯವೇ ಎಂದು ತಾಪಂ ಲೆಕ್ಕಾಧಿಕಾರಿಯನ್ನು ತರಾಟೆ ತಗೆದುಕೊಂಡರು.

ತಾಪಂ ಸಾಮಾನ್ಯ ಸಭೆಯನ್ನು ಕಾಟಾಚಾರಕ್ಕೆ ಕರೆಯುತ್ತಿದ್ದಾರೆ. ಯಾವುದೇ ಇಲಾಖೆ ಮುಖ್ಯಸ್ಥರು ಸೂಕ್ತ ಮಾಹಿತಿ ತೆಗೆದುಕೊಂಡು ಬಂದಿಲ್ಲ. ಮಾಹಿತಿ ಕೇಳಿದರೇ ಸೂಕ್ತ ಮಾಹಿತಿ ತಿಳಿಸುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಜಿಪಂ ಸಿಇಒಗೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದರು.

ಅಧ್ಯಕ್ಷೆ ಸುಜಾತಾ ಮಾತನಾಡಿ, ವರ್ಷದ ಮೊದಲ ಸಭೆ ಕರೆದಿದ್ದಾರೆ. ಲಿಂಕ್‌ ಡ್ಯಾಕ್ಯುಮೆಂಟ್‌ ಅನುದಾನದ ಅನುಮೋದನೆ ಈ ಸಭೆಯಲ್ಲಿ ಏಕೆ ನೀಡಬೇಕು. ಈಗಾಗಲೇ ಕೋಟ್ಯಂತರ ರೂ. ಅನುದಾನ ಬೇಕಾಬಿಟ್ಟಿ ಖರ್ಚು ಮಾಡಿ ಅನುಮೋದನೆ ತಂದಿರುವ ವಿಷಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸದಸ್ಯ ದೇವರಾಜ್‌ ಮಾತನಾಡಿ, ಸರಕಾರ ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದರೆ ಬಡವರ ಹತ್ತಿರ ಹಣ ವಸೂಲಿ ಧಂದೆ ನಡೆಯುತ್ತಿದೆ. ಪದಾಧಿಕಾರಿಗಳು ಹತ್ತಿಪ್ಪತ್ತು ಸಾವಿರ ಹಣ ಪಡೆದುಕೊಳ್ಳಲು ನೂರಾರು ಬಾರಿ ಕಚೇರಿ ತಿರುಗಾಡುವ ಸ್ಥಿತಿ ಇದೆ. ಮನೆಯಿಲ್ಲದೆ ಬಡವರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ.

ಬಡವರ ಮನೆ ಕಟ್ಟಲು ತಕ್ಷಣ ಹಣ ನೀಡಬೇಕು. ಹಣ ಕೇಳಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್‌ ಹಾಗೂ ಜಯಣ್ಣ ಮಾತನಾಡಿ, ಎನ್‌.ಆರ್‌.ಇ.ಜಿಯಲ್ಲಿ ಕ್ರಿಯಾ ಯೋಜನೆ ಪ್ರಕಾರ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಶೇ.100ರಷ್ಟು ಕ್ರಿಯಾ ಯೋಜನೆ ಪಟ್ಟಿಯಲ್ಲಿರುವ ಕಾಮಗಾರಿ ನಿರ್ಲಕ್ಷ್ಯ ಮಾಡಿ ತಮಗೆ ಅನುಕೂಲವಾಗುವಂತೆ ಕೈಗೊಳ್ಳಲಾಗಿದೆ ಎಂದಾಗ ಸದಸ್ಯ ಶಿವಕುಮಾರ್‌ ಮಾತನಾಡಿ, ಪ್ರತಿ ಗ್ರಾಪಂ ಸುಮಾರು 3 ಕೋಟಿ ಅನುದಾನ ಖರ್ಚು ಮಾಡಿದ್ದರೂ ಯಾವುದೇ ಕಾಮಗಾರಿ ಕೆಲಸ ಕಾಣುತ್ತಿಲ್ಲ. ರಸ್ತೆಗಳು, ಚರಂಡಿ, ನೀರಿನ ಸೌಲಭ್ಯ ಯಾವುದೇ ಕೆಲಸ ಆಗಿಲ್ಲ. ಅನುದಾನ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಸದಸ್ಯ ಪರಮೇಶ್ವರಪ್ಪ ಮಾತನಾಡಿ, ಎನ್‌ಆರ್‌ ಇಜಿ ಯೋಜನೆಯಡಿ ಕೆಲಸ ಮಾಡಿದವರಿಗೆ ಹಣ ನೀಡುತ್ತಿಲ್ಲ. ಕೆಲಸ ಮಾಡದಿದ್ದವರಿಗೆ ಹಣ ನೀಡುತ್ತಿದ್ದಾರೆ. ಸಾಕಷ್ಟು ಕಳಪೆ ಕೆಲಸಗಳು ನಡೆಯುತ್ತಿವೆ. ಯಾರೊಬ್ಬರು ಅವುಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಪಿಡಿಒ ಹಾಗೂ ಅಧಿಕಾರಿಗಳು ಹೊಂದಾಣಿಕೆಯಿಂದ ಸರಕಾರದ ಹಣ ಲೂಟಿ ಮಾಡುತ್ತಿರುವ ಶಂಕೆಯಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ತಾಪಂ ವಿವಿಧ ಕ್ಷೇತ್ರದ ಸದಸ್ಯರು ಹಾಜರಿದ್ದರು. ಎಇಒ ಲಕ್ಷ್ಮಣ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next