Advertisement

ಬಂಗಾರ ಹರಾಜು ಪ್ರಕ್ರಿಯೆ ನಿಲ್ಲಿಸಿ

03:28 PM Dec 28, 2019 | Naveen |

ಹೊಳಲ್ಕೆರೆ: ರೈತರ ಬಂಗಾರ ಮೇಲಿನ ಸಾಲದಲ್ಲಿ ಸುಸ್ತಿದಾರಾಗಿದ್ದಲ್ಲಿ ಅವರ ಬಂಗಾರವನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ರಾಮಗಿರಿ ಕೆನರಾ ಬ್ಯಾಂಕ್‌ನಲ್ಲಿ ಎದುರು ಪ್ರತಿಭಟನೆ ನಡೆಸಿದರು.

Advertisement

ರೈತ ಸಂಘದ ತಾಲೂಕು ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇದರಿಂದಾಗಿ ಜೀವನ ಕೂಡ ನಡೆಸುವುದು ಕಷ್ಟಕರವಾಗಿದೆ. ಬಂಗಾರದ ಮೇಲಿನ ಸಾಲವನ್ನು ಹಿಂತಿರುಗಿಸಲು ರೈತರು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಕೆನರಾ ಬ್ಯಾಂಕ್‌ ರಾಮಗಿರಿಯವರು ರೈತರ ಬಂಗಾರವನ್ನು ಹರಾಜು ಮಾಡುತ್ತಿರುವುದು ಖಂಡನೀಯ ಎಂದರು.

ಕೂಡಲೇ ಬಂಗಾರ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ರೈತರಿಗೆ ಬಂಗಾರ ಸಾಲ ತೀರಿಸಲು ಸಮಯಾವಕಾಶ ನೀಡಬೇಕು. ಹಾಗೆಯೇ ಮೂರು ವರ್ಷದೊಳಗಿನ ಸಾಲಗಾರರ ಬಡ್ಡಿಯಲ್ಲಿ ರಿಯಾಯಿತಿ ನೀಡಬೇಕು. ಮತ್ತು ಮೂರು ವರ್ಷಕ್ಕಿಂತ ಹೆಚ್ಚಿನ ಸಮಯವಾಗಿರುವ ರೈತರ ಸಾಲಕ್ಕೆ ಮೂರು ವರ್ಷದ ಬಡ್ಡಿಯನ್ನು ಮಾತ್ರ ಪಡೆಯಬೇಕು. ಉಳಿದ ಬಡ್ಡಿಗೆ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಗಟ್ಟ ಸಿದ್ದವೀರಪ್ಪ ಅವರು ಚಿತ್ರದುರ್ಗ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅವರನ್ನು ಭೇಟಿ ಮಾಡಿ ಬಂಗಾರವನ್ನು ಹರಾಜು ಹಾಕಬಾರದು. ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಒನ್‌ ಟೈಮ್‌ ಸೆಟ್ಲಮೆಂಟ್‌ ಮಾಡಿಕೊಡುವಂತೆ ಕೋರಿದ್ದಾರೆ ಎಂದರು.

ರೈತ ಮುಖಂಡ ರಾಮಗಿರಿ ರಾಮಣ್ಣ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂದು ಬಾಯಲ್ಲಿ ಹೇಳಿದರೆ ಸಾಲದು, ಅವರ ಸಂಕಷ್ಟಗಳಿಗೆ ಬ್ಯಾಂಕ್‌ ಸ್ಪಂದಿಸಬೇಕು. ಬಂಗಾರ ಹರಾಜು ಹಾಕಿದರೆ ಬ್ಯಾಂಕ್‌ ಗ್ರಾಹಕರ ಮಾನ ಹರಾಜು ಮಾಡಿದಂತಾಗುತ್ತದೆ. ಕೂಡಲೇ ಹರಾಜು ರದ್ದುಗೊಳಿಸಬೇಕು. ಕನಿಷ್ಠ ಮೂರು ತಿಂಗಳು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

Advertisement

ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಜಿ.ವಿ. ಸುಬ್ರಮಣ್ಯ ಮಾತನಾಡಿ, ರೈತರು, ಗ್ರಾಹಕರು ಬ್ಯಾಂಕ್‌ನ ಜೀವನಾಡಿ. ಬಂಗಾರ ಹರಾಜು ಮಾಡಬೇಕೆಂಬ ಉದ್ದೇಶ ನಮ್ಮಲ್ಲಿಲ್ಲ. ಆದರೆ ಅವರು ಪಡೆದ ಬಂಗಾರದ ಮೇಲಿನ ಸಾಲ ಹಾಗೂ ಬಡ್ಡಿ ವಿಪರೀತವಾಗಿದ್ದು, ಈಗಾಗಲೇ ಹಲವು ಬಾರಿ ಅವರನ್ನು ಭೇಟಿ ಮಾಡಲಾಗಿದೆ. ವಿಷಯ ಕೂಡ ತಿಳಿಸಿದ್ದೇವೆ.

ಹಾಗೆಯೇ ಪತ್ರಿಕಾ ಪ್ರಕಟಣೆ ನೀಡಿದ್ದೇವೆ. ಕೆಲವರು ಬಂದು ಸಾಲ ತೀರಿಸುತಿದ್ದಾರೆ. ಉಳಿದವರಿಗೆ ಸಮಯಾವಕಾಶ ನೀಡುವ ಅಧಿಕಾರ ನಮಗಿಲ್ಲ. ಜಿಎಂ ಅವರಿಗೆ ರೈತರ ಮನವಿ ಕಳಿಸಿಕೊಡುತ್ತೇವೆ. ಎಷ್ಟು ದಿನ ಸಮಯ ನೀಡುತ್ತಾರೆ ಎನ್ನುವುದನ್ನು ತಿಳಿಸುತ್ತೇವೆ ಎಂದರು.

ತಾಲೂಕು ರೈತ ಸಂಘದ ಉಪಾಧ್ಯಕ್ಷರಾದ ಕೊಟ್ರೆ ಶಂಕರಪ್ಪ, ಸದಾಶಿವಪ್ಪ, ಕುನಗಲಿ ಮಹಲಿಂಗಪ್ಪ, ರೈತ ಮುಖಂಡರಾದ ಜೀವನ್‌, ಜಯಪ್ಪ, ರುದ್ರಯ್ಯ, ತಾಳಿಕಟ್ಟೆ ಘಟಕದ ಅಧ್ಯಕ್ಷ ಬಸವರಾಜಪ್ಪ, ರೈತ ಸಂಘದ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next