Advertisement

ಹೊಳಲ್ಕೆರೆಯಲ್ಲಿ ಹನಿ ನೀರಿಗೂ ತತ್ವಾರ

11:39 AM Jul 11, 2019 | Naveen |

ಎಸ್‌. ವೇದಮೂರ್ತಿ
ಹೊಳಲ್ಕೆರೆ:
ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮಟ್ಟಿದೆ. ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪಟ್ಟಣ ಪಂಚಾಯತ್‌ ವಿಫಲವಾಗಿದೆ.

Advertisement

ಪಟ್ಟಣದ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕಲ್ಪಿಸುವ ಉದ್ದೇಶದಿಂದ ಶಾಂತಿಸಾಗರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲಿಂದ ನಿತ್ಯ ಪಟ್ಟಣದ ಟ್ಯಾಂಕ್‌ಗಳಿಗೆ ನೀರು ಹರಿಸಬೇಕಿದೆ. ಆದರೆ ಪಟ್ಟಣ ಪಂಚಾಯತ್‌ ಅಧಿಕಾರಿಗಳ ಹಾಗೂ ನೌಕರರ ನಿರ್ಲಕ್ಷ್ಯದಿಂದ ಕುಡಿಯುವ ನೀರು ಚರಂಡಿ, ಕೆರೆಗಳಿಗೆ ಸೇರುತ್ತಿದೆ.

ಒಟ್ಟು 16 ವಾರ್ಡ್‌ಗಳಲ್ಲಿ ಸುಮಾರು 13 ಸಾವಿರ ಜನಸಂಖ್ಯೆ ಇದೆ. ಪ್ರತಿ ವಾರ್ಡ್‌ನಲ್ಲಿ 700-800 ನಿವಾಸಿಗಳಿದ್ದಾರೆ. ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಜನರಿಗೆ ಶಾಂತಿಸಾಗರದಿಂದ ಚಿಕ್ಕಕಂದವಾಡಿಗೆ ನೀರು ಹರಿಸಲಾಗುತ್ತದೆ. ಬಳಿಕ ಚಿಕ್ಕಕಂದವಾಡಿಯ ನೀರು ಶುದ್ಧೀಕರಣ ಘಟಕದಿಂದ ಶಾಂತಿಸಾಗರದ ನೀರನ್ನು ಶುದ್ಧೀಕರಣ ಮಾಡಿ ಶುದ್ಧ ನೀರನ್ನು ಪಟ್ಟಣದ ನಿವಾಸಿಗಳಿಗೆ ಪೂರೈಕೆ ಮಾಡುವುದು ಪಟ್ಟಣ ಪಂಚಾಯತ್‌ ಜವಾಬ್ದಾರಿ. ಆದರೆ ಕಳೆದ ಐದಾರು ವರ್ಷಗಳಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಆಗಾಗ ಒಡೆದು ಹೋಗುವ ಪೈಪ್‌ಲೈನ್‌ನಿಂದಲೂ ನೀರು ಸೋರಿಕೆಯಾಗುತ್ತಿದೆ.

ಚಿಕ್ಕಕಂದವಾಡಿ-ಹೊಳಲ್ಕೆರೆ ಮಾರ್ಗದಲ್ಲಿರುವ ದಾವಣಗೆರೆ ರಸ್ತೆಯ ಹಿರೆಕೆರೆಯಲ್ಲಿ ಪೈಪ್‌ಲೈನ್‌ ಒಡೆದು ಹೋಗಿದೆ. ಅದನ್ನು ದುರಸ್ತಿಗೊಳಿಸಲು ಸಂಬಂಧಿಸಿದವರು ಮುಂದಾಗಿಲ್ಲ. ಪ್ರತಿನಿತ್ಯ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಶಾಂತಿಸಾಗರದ ನೀರಿನ ಪೈಪ್‌ ಒಡೆದು ಲಕ್ಷಾಂತರ ಲೀಟರ್‌ ನೀರು ಕೆರೆಯಂಗಳ ಸೇರುತ್ತಿದೆ. ಪೈಪ್‌ಲೈನ್‌ ದುರಸ್ತಿ ಮಾಡಿಸಿ ಅಪವ್ಯಯವಾಗುವ ನೀರನ್ನು ತಡೆದಲ್ಲಿ ಪಟ್ಟಣಕ್ಕೆ ಮೂರ್‍ನಾಲ್ಕು ದಿನಗಳಿಗೊಮ್ಮೆಯಾದರೂ ನೀರು ಪೂರೈಕೆ ಮಾಡಬಹುದು. ಆದರೆ ಪಟ್ಟಣ ಪಂಚಾಯತ್‌ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ಇಚ್ಛಾಶಕ್ತಿ ಇದ್ದಂತಿಲ್ಲ. ಇನ್ನಾದರೂ ಎಚ್ಚೆತ್ತು ನೀರಿನ ಬವಣೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next