Advertisement

ಜಲಮೂಲ ರಕ್ಷಣೆಗೆ ಪಣ ತೊಡಿ

04:02 PM Apr 15, 2019 | Team Udayavani |

ಹೊಳಲ್ಕೆರೆ: ನಾಡಿನ ಐತಿಹಾಸಿಕ ಜಲಮೂಲಗಳಾದ ಪುಷ್ಕರಣಿ ಹಾಗೂ ಕಲ್ಯಾಣಿಗಳನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

Advertisement

ಪಟ್ಟಣದ ಒಂಟಿಕಂಬದ ಮುರುಘಾ ಮಠದಲ್ಲಿ ಎಸ್‌. ಜೆ.ಎಂ ವಿದ್ಯಾಪೀಠ ಹಾಗೂ ಬೆಂಗಳೂರಿನ ಎಂ.ಸಿ.ಕೆ.ಸಿ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಲ್ಯಾಣಿ ಕಾಯಕಲ್ಪ’ ಕಾರ್ಯಕ್ರಮದಲ್ಲಿ ಮುರುಘಾ ಮಠದಲ್ಲಿರುವ ಪುರಾತನ ಪುಷ್ಕರಣಿಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಶರಣರು ಮಾತನಾಡಿದರು.

ರಾಜ ಮಹಾರಾಜರ ಕಾಲಗಳಲ್ಲಿ ನಿರ್ಮಾಣವಾಗುತ್ತಿದ್ದ ಕಲ್ಯಾಣಿಗಳಿಗೂ, ಪರಿಸರಕ್ಕೂ ಅವಿನಾಭಾವ ಸಂಬಂಧವಿದೆ. ಕಲ್ಯಾಣಿಗಳು ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದವು. ಜೀವಜಲಕ್ಕಾಗಿ ಜನರು ಪರಿತಪಿಸುವುದನ್ನು ತಡೆಗಟ್ಟಲು ಬೇಕಾದ ಸುಂದರ ಪರಿಕಲ್ಪನೆಯೊಂದಿಗೆ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಕಲ್ಯಾಣಿಗಳೂ ಜನರಿಗಲ್ಲದೆ ಪರಿಸರದ ಒಡನಾಡಿಯಾಗಿರುವ ಹಕ್ಕಿ ಪಕ್ಷಿಗಳಿಗೂ ನೀರಿನ ಅಸರೆಯನ್ನು ನೀಡುತ್ತಿದ್ದವು. ಆದರೆ ಅವುಗಳಲ್ಲಿ ಇಂದು ಕೊಳೆ, ಹೂಳು ತುಂಬಿಕೊಂಡಿವೆ.

ಅದನ್ನು ಶುದ್ಧಗೊಳಿಸಿ ಕಲ್ಯಾಣಿಗೆ ಶುದ್ಧ ನೀರು ಹರಿಯುವಂತೆ ಮಾಡಬೇಕು ಎಂದರು. ಮೊದಲು ಕಲ್ಯಾಣಿಗಳು, ಬಾವಿಗಳು, ಕೆರೆಗಳು ಜನರಿಗೆ ಭೂಮಿಯ ಅಳದ ಐದತ್ತು ಅಡಿಗಳಲ್ಲಿ ನೀರಿನ ಸೌಲಭ್ಯ ಕಲ್ಪಿಸುತ್ತಿದ್ದವು. ಇತ್ತಿಚೆಗೆ ಕೊಳವೆಬಾವಿಗಳ ಹೊಡೆತಕ್ಕೆ ಸಿಕ್ಕಿರುವ ಕಲ್ಯಾಣಿಗಳು ನೀರಿಲ್ಲದೆ ಒಣಗುತ್ತಿವೆ. ಜತೆಗೆ ಸಾವಿರಾರು ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗದಂತಾಗಿದೆ. ಆದ್ದರಿಂದ ಜನರು ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಮುರುಘಾ ಮಠದಲ್ಲಿರುವ ಕೊಳವೆಬಾವಿಗಳಿಗೆ ನೀರು ಇಂಗಿಸುವ ಮಳೆಕೊಯ್ಲು ಮಾಡಲು ಒತ್ತು ನೀಡಲಾಗಿದೆ. ಹಾಗಾಗಿ ಕೊಳವೆಬಾವಿಗಳು ಇಂದಿಗೂ ಬತ್ತಿಲ್ಲ ಎಂದು ತಿಳಿಸಿದರು.

ಮುರುಘಾ ಮಠದ ಶ್ರೀ ಬಸವಾನಂದ ಸ್ವಾಮೀಜಿ, ಪರಮಶಿವಯ್ಯ, ಪಪಂ ಮಾಜಿ ಸದಸ್ಯ ಪಿ.ಎಚ್‌. ಮುರುಗೇಶ್‌, ರೋಟರಿ ಅಧ್ಯಕ್ಷ ಎ.ಸಿ. ಗಂಗಾಧರಪ್ಪ, ಹರೀಶ್‌, ಮಾರುತೇಶ್‌, ರುದ್ರಪ್ಪ, ನಟರಾಜ್‌ ಆಚಾರ್‌, ಪತ್ರಕರ್ತ ಎಸ್‌.ಬಿ. ಶಿವರುದ್ರಪ್ಪ, ನ್ಯಾಯವಾದಿ ಎಸ್‌. ವೇದಮೂರ್ತಿ, ಶಿಕ್ಷಕ ಕಾಂತರಾಜ್‌, ಕೆ.ಎಸ್‌. ರಘು, ರಮೇಶ ಯಾದವ್‌ ಭಾಗವಹಿಸಿದ್ದರು.

Advertisement

ಮಳೆಗಾಲದಲ್ಲಿ ಹರಿದು ಹಳ್ಳ ಸೇರುವ ನೀರನ್ನು ತಡೆದು ನಿಲ್ಲಿಸಿ ಕೊಳವೆಬಾವಿ ಸುತ್ತ ಕೃಷಿ ಹೊಂಡ, ಇಂಗುಗುಂಡಿ ಮಾಡಿಸಿ ಇಂಗಿಸುವ ಕೆಲಸ ಮಾಡಿದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ನೀರಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇಲ್ಲವಾದಲ್ಲಿ ರೈತರು ಆಕಾಶದ ಕಡೆಗೆ ನೋಡುತ್ತ ಕೂರುವ ಸ್ಥಿತಿ ನಿರ್ಮಾಣವಾಗುತ್ತದೆ.
. ಡಾ| ಶಿವಮೂರ್ತಿ ಮುರುಘಾ ಶರಣರು

Advertisement

Udayavani is now on Telegram. Click here to join our channel and stay updated with the latest news.

Next