Advertisement

ಆದರ್ಶ ಜೀವನ ಕಲ್ಯಾಣ ದರ್ಶನದ ಧ್ಯೇಯ

04:16 PM Aug 28, 2019 | Naveen |

ಹೊಳಲ್ಕೆರೆ: ಹನ್ನೆರಡನೇ ಶತಮಾನದಲ್ಲಿ ಶರಣರ ಆದರ್ಶ ರಾಜ್ಯ ಉದಯವಾಗಿತ್ತು. 21ನೇ ಶತಮಾನದಲ್ಲಿ ಕಲ್ಯಾಣ ದರ್ಶನದ ಮೂಲಕ ಆದರ್ಶ ಜೀವನ ಕಟ್ಟಿಕೊಡುವ ಕೆಲಸ ಆಗಬೇಕಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಕಾಳಘಟ್ಟ ವಡ್ಡರಹಟ್ಟಿಯಲ್ಲಿ ಚಿತ್ರದುರ್ಗ ಮುರುಘಾ ಮಠದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಬಸವಣ್ಣ ಹನ್ನೆರಡನೇ ಶತಮಾನದಲ್ಲಿ ಮಾನವೀಯ ಮೌಲ್ಯ ಹಾಗೂ ಆದರ್ಶಗಳನ್ನು ಶರಣರಲ್ಲಿ ಬಿತ್ತಿದ್ದಾರೆ. ಅವರು ಬಿತ್ತಿದ್ದ ಕಾಯಕ ಪ್ರಧಾನವಾಗಿರುವ ಆದರ್ಶಮಯ ಚಿಂತನೆ ಹಾಗೂ ಬದುಕನ್ನು ರೂಢಿಸಿಕೊಳ್ಳಬೇಕು. ಕಾಯಕವೇ ಜೀವನ, ಆದರ್ಶ ಎನ್ನುವಂತಹ ಕಾಲವದು. ಸತ್ಯಕ್ಕ ಎನ್ನುವ ಶರಣೆ ಕಸ ಗುಡಿಸುವ ಕಾಯಕದಿಂದ ಬದುಕು ಕಟ್ಟಿಕೊಂಡಿದ್ದಳು. ಆವಳಲ್ಲಿದ್ದ ಕಾಯಕದ ಆದರ್ಶಗಳು ಅವಳ ಬದುಕನ್ನು ಸಾಕ್ಷಾತ್ಕರಿಸಿತ್ತು. ಅದು ಶರಣರ ಚಿಂತನೆ. ಅಂತಹ ಚಿಂತನೆಯನ್ನು ಜನರಲ್ಲಿ ಮೂಡಿಸುವುದು ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಉದ್ದೇಶ ಎಂದರು.

ಬಸವಣ್ಣನವರು ಜಾತಿ ಸಂಕೋಲೆಗಳಿಂದ ನಲುಗಿ ಶೋಷಣೆ ಅನುಭವಿಸುತ್ತಿದ್ದ ಜನರಲ್ಲಿ ಕಾಯಕದ ಧ್ವನಿ ನೀಡಿದರು. ಕುಲ ಕಸುಬುಗಳಿಗೆ ಕಾಯಕ ಸ್ವರೂಪದ ಜೀವ ಕೊಟ್ಟರು. ಬದುಕಿನ ಕೌಶಲ್ಯಗಳನ್ನು ಅರಿತು ಕಾಯಕ ಮಾಡುವ ಜಾಗೃತಿ ಮೂಡಿಸಿದ್ದರು. ಕಾಯಕವೇ ಅಂದು ಪ್ರಧಾನವಾಗಿತ್ತು. ಜೀವ, ಭಾವ, ಪ್ರಾಣ ಎನ್ನದೆ ಕಾಯಕವನ್ನು ಕೈಗೊಳ್ಳುವ ಶರಣ ಪರಂಪರೆ ಅಂದು ಪ್ರಧಾನವಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ವಿದ್ಯಾ ಗೊಡೆಮನೆ, ಭೋವಿ ನಿಗಮದ ಮಾಜಿ ಸದಸ್ಯ ಹನುಮಂತಪ್ಪ ಗೊಡೆಮನೆ, ಚಿಕ್ಕಜಾಜೂರು ಗ್ರಾಪಂ ಅಧ್ಯಕ್ಷ ಡಿ.ಸಿ. ಮೋಹನ್‌, ಪಪಂ ಸದಸ್ಯ ಪಿ.ಎಚ್. ಮುರುಗೇಶ್‌, ರೈತ ಸಂಘದ ನಾಯಕಿ ಈ. ಗಂಗಮ್ಮ, ಕಾಕಾನೂರು ನಾಗರಾಜ, ಶೇಷಣ್ಣ, ಎಸ್‌.ಜಿ.ಎಂ ಕಾರ್ಯದರ್ಶಿ ಪರಮಶಿವಯ್ಯ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next