Advertisement

ಅನುಭವಕ್ಕಿದೆ ಜೀವನ ಪರಿಪಕ್ವಗೊಳಿಸುವ ಶಕ್ತಿ

01:28 PM Aug 21, 2019 | Naveen |

ಹೊಳಲ್ಕೆರೆ: ಕುಳಿತ ವ್ಯಕ್ತಿಗೆ ಅನುಭವಗಳಾಗುವುದಿಲ್ಲ. ಅನನ್ಯ ಅನುಭವಗಳಾಗಬೇಕಾದರೆ ಜಗತ್ತಿನ ಪರ್ಯಟನೆ ಮಾಡಬೇಕು. ಆಗ ಮಾತ್ರ ಅನುಭವ ಪಡೆಯಲು ಸಾಧ್ಯ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮುರುಘಾ ಮಠದ ಬಸವ ಕೇಂದ್ರದ ವತಿಯಿಂದ ಶ್ರಾವಣಮಾಸದ ಅಂಗವಾಗಿ ತಾಲೂಕಿನ ನಾರಾಯಣಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಶರಣರ ಸಿದ್ಧಾಂತಗಳು ಅನುಭವದ ಸಿದ್ಧಾಂತ. 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಸವ ತತ್ವವನ್ನು ಪ್ರಚಾರ ಮಾಡಲಾಗಿದೆ. ಸಾಕಷ್ಟು ಅನುಭವಗಳು ಈ ಸಂದರ್ಭದಲ್ಲಿ ಆಗಿವೆ. ಅನುಭವ ಎಂದರೆ ವಿಚಾರ. ಅನುಭವಗಳಿಗೆ ಜೀವನವನ್ನು ಪರಿಪಕ್ವಗೊಳಿಸುವ ಶಕ್ತಿಯಿದೆ. ಅನುಭವದ ಪ್ರಭಾವದಿಂದಾಗಿ ಸಾತ್ವಿಕತೆ, ಸೌಜನ್ಯ, ಸನ್ನಡತೆಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.

ಅನುಭವದಿಂದ ಜೀವನಕ್ಕೆ ಮೂರ್ತ ಸ್ವರೂಪ ಸಿಗಲಿದೆ. ಅನುಭವ ವ್ಯಕ್ತಿಯನ್ನು ಅರಳಿಸುತ್ತದೆ. ವ್ಯಕ್ತಿತ್ವವನ್ನು ಮಾಗಿಸುತ್ತದೆ. ಕಲ್ಯಾಣದರ್ಶನ ಕಾರ್ಯಕ್ರಮದ ಮೂಲಕ ನಾವುಗಳೆಲ್ಲ ಅರಳುವಂತಾಗಬೇಕು. ಹಣ, ಅಧಿಕಾರ, ಸೌಂದರ್ಯ ಅಲ್ಪಕಾಲಿಕವಾದವು. ಯಾರು ಅನುಭವದ ಮಾರ್ಗವನ್ನು ಅನುಸರಿಸುತ್ತಾರೆಯೋ ಅಂಥವರು ಜೀವನದಲ್ಲಿ ಇತಿಹಾಸವನ್ನು ನಿರ್ಮಿಸುತ್ತಾರೆ. ಯಶಸ್ಸು ಅನುಭವದ ಮುಖಾಂತರ ಬರುತ್ತದೆ. ಅನುಭವದದಿಂದ ಯಶಸ್ವಿ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.

ಶರಣ ಏಕತಾ ಮೇಳವನ್ನು ಈ ಬಾರಿ ಸಾವಿರಾರು ಜನರ ಸಮ್ಮುಖದಲ್ಲಿ ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಏರ್ಪಡಿಸಲಾಗುವುದು. ಕಾಗೆ ಕೆಲವರಿಗೆ ಶೂದ್ರ ಪಕ್ಷಿ, ಇನ್ನು ಕೆಲವರಿಗೆ ದಾಸೋಹ ಪಕ್ಷಿ. ಕಾಗೆ ಸಂಸ್ಕೃತಿಯು ಕರೆದುಣ್ಣುವ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.

Advertisement

‘ಯಶಸ್ಸಿನ ಹೆಜ್ಜೆಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಬಿ.ಎಂ. ಸಿದ್ದಪ್ಪ, ವಿಧೇಯತೆ ಒಂದು ನಿರಹಂಕಾರಿ ಗುಣವುಳ್ಳದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತಿದೆ. ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಂತರ ತನ್ನ ಕಾರ್ಯವನ್ನು ತನ್ನ ಸಮಾಜವನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಜ್ಞಾನ ಯಶಸ್ಸಿನ ಹೆಜ್ಜೆಗಳಲ್ಲಿ ಮಹತ್ವದ್ದು. ಸಮ್ಯಕ್‌ ಜ್ಞಾನ ಅವಶ್ಯವಾದುದು. ಸಮ್ಯಕ್‌ ಜ್ಞಾನ ಎಂದರೆ ಉತ್ತಮ ಜ್ಞಾನ. ಆಲಿಸುವುದು ಯಶಸ್ಸಿಗೆ ಮತ್ತೂಂದು ಮಹತ್ವದ ಹೆಜ್ಜೆ. ಕಲಿಯುವುದಕ್ಕೆ ತಿಳಿಯುವುದಕ್ಕೆ ಆಲಿಸಬೇಕು. ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಯಾರು ಕೆಲಸ ನಿರ್ವಹಿಸುತ್ತಾನೋ ಅವನು ಯಶಸ್ಸು ಗಳಿಸುತ್ತಾನೆ. ಸದಾ ಆಶಾವಾದಿಗಳಾಗಿರಬೇಕು. ಆಸೆ ಪಡುವುದು ತಪ್ಪಲ್ಲ, ಆದರೆ ದುರಾಸೆ ಪಡುವುದು ತಪ್ಪು. ಪ್ರಬುದ್ಧತೆಯೂ ಯಶಸ್ಸಿನ ಹೆಜ್ಜೆಗಳಲ್ಲೊಂದು ಎಂದು ಅಭಿಪ್ರಾಯಪಟ್ಟರು.

ಗ್ರಾಮದ ಮುಖಂಡರಾದ ಶಿವಪ್ರಕಾಶ್‌, ಗುರುಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್‌ ಮತ್ತಿತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಅಂಗವಾಗಿ ಗ್ರಾಮವನ್ನು ಗ್ರಾಮಸ್ಥರು ಸ್ವಚ್ಛಗೊಳಿಸಿ ಸ್ವಚ್ಚತಾ ಜಾಗೃತಿ ಮೂಡಿಸಿದರು. ವಚನ ಕಿರುಹೊತ್ತಿಗೆಯನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿ ಡಾ| ಶಿವಮೂರ್ತಿ ಮುರುಘಾ ಶರಣರನ್ನು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next