ಹೊಳಲ್ಕೆರೆ: ಯಾರು ಜೀವನದಲ್ಲಿ ಸತ್ಸಂಗಕ್ಕೆ ಒಳಗಾಗುತ್ತಾರೊ, ಶರಣರ, ಸಜ್ಜನರ ಸಂಗ ಮಾಡುತ್ತಾರೋ ಅಂಥವರು ತಮ್ಮ ದೈನಂದಿನ ಜೀವನದಲ್ಲಿ ಮಹತ್ಕಾರ್ಯಗಳನ್ನು ಮಾಡುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಬಸವಕೇಂದ್ರ ಮುರುಘಾಮಠದ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ತಾಲೂಕು ಅಂತಾಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಭುದೇವರ ಜೀವನದ ಔನ್ನತ್ಯವೆಂದರೆ ಶರಣರ ಸಂಗವಾಗಿತ್ತು. ಲೌಕಿಕ, ಭೌತಿಕ, ಆಸೆ, ಅಪೇಕ್ಷೆಗಳನ್ನು ಅಳಿದು ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಹೋದರು. ಶರಣರ ಸಂಗದಲ್ಲಿ ದೊಡ್ಡ ಶಕ್ತಿಯೇ ಇದೆ. ಶರಣರೆಂದರೆ, ಸಾತ್ವಿಕವಾದ ಸರಳವಾದ ಜೀವನ ಮಾಡುವುದು. ಸತ್ಸಂಗದಲ್ಲಿ ಇದ್ದವರಿಗೆ ಒಳ್ಳೆಯ ಆಲೋಚನೆಗಳು ಬರುತ್ತವೆ. ಬದುಕು ಸುಗಮವಾಗಿ ಸಾಗುತ್ತದೆ. ಸತ್ಸಂಗದಿಂದ ಸತ್ಕಾರ್ಯಗಳು ನೆರವೇರುತ್ತವೆ. ಸತ್‌ಚಿಂತನೆಗಳು ಹೊರಹೊಮ್ಮುತ್ತವೆ. ಸತ್‌ಚಿಂತನೆಗಳಿಂದಾಗಿ ಸಂಸ್ಕಾರವಂತರಾಗಿ ಸತ್ಕಾರ್ಯಗಳನ್ನು ಮಾಡುತ್ತಾರೆ ಎಂದರು.
ಮುರುಘಾಮಠದ ನೂರಾರು ಭಕ್ತರು ಈ ಊರಿನಲ್ಲಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪ್ರತಿಯೊಬ್ಬ ತಂದೆ ತಾಯಿಯ ಆದ್ಯ ಕರ್ತವ್ಯ. ಹಾಗಾಗಿ ಅವರನ್ನು ಕೂಲಿಗೆ ಕಳುಹಿಸಬಾರದು. ಇಂದು ಕಲಿಕೆಯ ಜತೆಗೆ ಗಳಿಸುವಿಕೆಗೂ ತೊಡಗಿ ಇಂದು ಹಲವಾರು ವಿದ್ಯಾರ್ಥಿಗಳು ಉನ್ನತ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಡತನ ಶಿಸ್ತಿನ ಪಾಠ ಕಲಿಸುತ್ತದೆ. ಬಡತನವಿದೆ ಎಂದು ಚಿಂತೆ ಮಾಡಬಾರದು. ನಿಮ್ಮ ರಟ್ಟೆಗಳಿಗೆ ಬಡತನವನ್ನು ಒಧ್ದೋಡಿಸುವ ದಾರಿದ್ರ್ಯತನವನ್ನು ತೊಲಗಿಸುವ ಶಕ್ತಿಯಿದೆ ಎಂದರು.
ಸತತ ಬರಗಾಲದಿಂದ ಈ ನಾಡಿಗೆ ವಿಮೋಚನೆ ನೀಡಬೇಕು. ಬರವಿಲ್ಲದಂತೆೆ ಸಮೃದ್ಧಿ ನಾಡು ಮಾಡಬೇಕು. ಅದರಲ್ಲಿಯೂ ಚಿತ್ರದುರ್ಗ ಜಿಲ್ಲೆಗೆ ನೀರಾವರಿ ವ್ಯವಸ್ಥೆಗೆ ಮುರುಘಾಮಠ 25 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದೆ. ಅಧಿಕಾರದಲ್ಲಿ ಯಾವ ಪಕ್ಷದ ಸರ್ಕಾರವಿದ್ದರೂ ಪರವಾಗಿಲ್ಲ. ಆದರೆ ನಮ್ಮ ಭಾಗದ ಜನರ ಜೀವನಕ್ಕೆ ನೀರಾವರಿ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸುತ್ತಲೇ ಬಂದಿದ್ದೇವೆ ಎಂದರು.
ಸತ್ಕಾರ್ಯಗಳು ವಿಷಯ ಕುರಿತು ವಿಷಯಾವಲೋಕನ ಮಾಡಿದ ವಸಂತಕುಮಾರ್, ಅಜ್ಞಾನದಿಂದ ಜ್ಞಾನದೆಡೆಗೆ ನಮ್ಮನ್ನು ಒಯ್ಯುವ ಕಾರ್ಯಕ್ರಮ ಈ ಕಲ್ಯಾಣ ದರ್ಶನ. ಸತ್ಕಾರ್ಯಗಳು ಎಂದರೆ ಉತ್ತಮವಾದ ಜನಪರವಾದ ಕೆಲಸಗಳನ್ನು ಮಾಡುವುದು. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಹಾಗೆಯೇ ನಾನಾ ವಿಧದ ಸಂಪ್ರದಾಯ, ಸಂಸ್ಕೃತಿಗಳನ್ನು ಒಳಗೊಂಡ ರಾಷ್ಟ್ರ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಗ್ಗೂಡುತ್ತಾರೆ ಆದರೆ ದೇವರ ಹೆಸರಿನಲ್ಲಿ ಬಹಳಷ್ಟು ಜನ ಮೋಸ ಮಾಡುತ್ತಾರೆ. ಕಾರಣ ಮೌಡ್ಯತನದಿಂದಾಗಿ. ಮೌಡ್ಯದಿಂದ ನಾವು ಹೊರಬರಬೇಕು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಜನ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಅಂಥವರಿಗೆ ಸಹಾಯ ಮಾಡುವುದರಿಂದ ಸಹಕಾರ ನೀಡಿದಂತಾಗುವುದು ಎಂದರು.
ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಎಲ್.ಬಿ. ರಾಜಶೇಖರ್, ಪ.ಪಂ ಸದಸ್ಯ ಮುರುಗೇಶ್, ಪರಮೇಶ್ವರಪ್ಪ, ಬಿ.ಸಿ. ರಂಗಪ್ಪ, ತಿಪ್ಪೇಸ್ವಾಮಿ ಮುಂತಾದವರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಎಚ್.ರೇವಣಸಿದ್ದಪ್ಪ ಸ್ವಾಗತಿಸಿದರು.