ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಸರಕಾರವನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ತಾಲೂಕು ಕೃಷಿ ಇಲಾಖೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಲಶಕ್ತಿ ಅಭಿಯಾನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ತೀವ್ರವಾಗಿರುವ ಬರಗಾಲ ಕಾಣಿಸಿಕೊಂಡಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಬರಗಾಲ ಕಾಣಿಸಿಕೊಂಡಿದೆ. ನೂರು ವರ್ಷಗಳ ಇತಿಹಾಸದಲ್ಲಿ 70 ವರ್ಷಗಳ ಕಾಲ ಬರ ಕಾಣಿಸಿಕೊಳ್ಳಲು ನಿಗದಿತವಾಗಿರುವ ಪ್ರಮಾಣದಲ್ಲಿ ಮಳೆಯಾಗದಿರುವುದು. ಜತೆಗೆ ನೀರನ್ನು ಸಂರಕ್ಷಣೆ ಮಾಡಿಕೊಳ್ಳದೆ ನೀರಿನ ಬಗ್ಗೆ ಅರಿವಿಲ್ಲದೆ ಅಪವ್ಯಯ ಮಾಡುವ ಮನೋಭಾವದಿಂದಾಗಿ ನೀರಿಲ್ಲದೆ ಬರಗಾಲ ಅನುಭವಿಸುವಂತಾಗಿದೆ. ಹಾಗಾಗಿ ಪ್ರತಿಯೊಬ್ಬರು ನೀರಿನ ಬಗ್ಗೆ ಜಾಗೃತರಾಗಬೇಕು. ನೀರನ್ನು ಸಾಧ್ಯವಾದಷ್ಟು ಸಂರಕ್ಷಣೆ ಮಾಡುವ ಮೂಲಕ ಉಳಿಸುವ ಕೆಲಸ ಆಗಬೇಕು ಎಂದರು.
ಕೃಷಿ ಇಲಾಖೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ನೀರು ಸಂಗ್ರಹಕ್ಕೆ ಬೇಕಾದ ಯೋಜನೆಗಳನ್ನು ನೀಡುತ್ತಿದೆ. ರೈತರು ಯೋಜನೆ ಪ್ರಯೋಜನ ಪಡೆದು ನೀರು ಸಂರಕ್ಷಣೆ ಮಾಡಿಕೊಳ್ಳಬೇಕು. ಆ ಮೂಲಕ ಕೃಷಿಯನ್ನು ಮಾಡುವ ಕಲೆ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಕೃಷಿ ಕ್ಷೇತ್ರ ಕಣ್ಮರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಸಂಶೋಧಕ ಹಾಗೂ ವಿಜ್ಞಾನಿ ಓಂಕಾರಪ್ಪ ಮಾತನಾಡಿ, ಆಧುನಿಕರಣ ಹೆಚ್ಚಾದಂತೆ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿದೆ. ಕೃಷಿ ಉತ್ಪಾದನೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಜತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಗಿಂತ ಹೊಸ ಪದ್ಧತಿಗಳಿಂದ ಕೃಷಿ ಕ್ಷೇತ್ರ ಹೆಚ್ಚು ಆದಾಯ ತರುವಂತಾಗಿದೆ. ಪ್ರತಿಯೊಬ್ಬರು ಕೃಷಿಯನ್ನು ವ್ಯಾಪಾರೀಕರಣದಿಂದ ನೋಡುವ ಸ್ಥಿತಿ ಹೆಚ್ಚಾಗಿದೆ ಎಂದರು.
ಇಂದು ಕೃಷಿ ಕ್ಷೇತ್ರಕ್ಕೆ ಮಾರಕ ಎನ್ನುವಂತ ರೋಗ ಕಾಣಿಸಿಕೊಳ್ಳುತ್ತಿವೆ. ರೋಗಗಳಿಗೆ ಸೂಕ್ತ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕಾಲಕಾಲಕ್ಕೆ ರೋಗ ನಿಯಂತ್ರಣಕ್ಕೆ ಔಷಧಗಳನ್ನು ಬಳಕೆ ಮಾಡಬೇಕು. ಈ ಭಾಗದಲ್ಲಿ ಕಾಣಿಸಿಕೊಂಡಿರುವ ಸೈನಿಕ ಹುಳು, ಅಡಿಗೆ ಬೆಳೆಗೆ ಕೊಳೆ ರೋಗ, ದಾಳಿಂಬೆಗೆ ಕಾಯಿಕೊರಕ ರೋಗ ಹಲವಾರು ರೋಗಗಳು ಬೆಳೆಯನ್ನು ಬಾಧಿಸುತ್ತಿವೆ. ಅವುಗಳನ್ನು ನಿಯಂತ್ರಿಸಲು ಸೂಕ್ತ ಮಾರ್ಗದರ್ಶನ ಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮಾತನಾಡಿ, ಸರಕಾರ ಕೃಷಿ ಇಲಾಖೆಯ ಮೂಲಕ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕೃಷಿ ಭಾಗ್ಯ, ಬೀಜ, ಗೊಬ್ಬರ, ಕ್ರಿಮಿನಾಶಕ, ಕೃಷಿ ಹೊಂಡ, ತಾಡಪಲ್, ಪೈಂಪು, ಬೇಸಾಯ ಪರಿಕರ, ಟ್ರ್ಯಾಕ್ಟರ್ ಪರಿಕರ ಸೇರಿದಂತೆ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕೃಷಿ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ತಾಪಂ ಸದಸ್ಯರಾದ ಶಿವಕುಮಾರ, ಗಿರಿಜಾ ಅಜ್ಜಯ್, ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಗೋಪಿಕೃಷ್ಣ, ಕೃಷಿಕರಾದ ಈ.ಗಂಗಮ್ಮ, ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ, ರೈತ ಮುಖಂಡ ಗುರುಮೂರ್ತಿ ಮತ್ತಿತರರು ಇದ್ದರು.