ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ದಯನೀಯ ಸ್ಥಿತಿಯಲ್ಲಿದ್ದು, ನೀರಾವರಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಇಲ್ಲಿನ ವಕೀಲರು ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುವ ಮೂಲಕ ರೈತರ ಸಂಕಷ್ಟದಲ್ಲಿ ಭಾಗಿಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೇಮಾ ವಸಂತ ರಾವ್ ಪವಾರ್ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸತತ ಬರಕ್ಕೆ ತುತ್ತಾಗುತ್ತಿರುವ ಜಿಲ್ಲೆಯ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ನೀರಾವರಿ ಯೋಜನೆ ಅನುಷ್ಠಾನದ ಅಗತ್ಯವಿದೆ ಎಂದರು.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಅಂದು ದೇಶದಲ್ಲಿದ್ದ ವಕೀಲರ ಸಮೂಹ ಸಾಕಷ್ಟು ಹೋರಾಟ ನಡೆಸಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಬಹುತೇಕ ನಾಯಕರು ನ್ಯಾಯವಾದಿಗಳೇ ಆಗಿದ್ದರು. ಅವರು ಹೊಂದಿದ್ದ ತ್ಯಾಗ ಮನೋಭಾವ, ನಿಸ್ವಾರ್ಥ ಹೋರಾಟ, ಗುರಿ ಮುಟ್ಟುವ ಛಲ ಇಂದಿನ ವಕೀಲರ ಸಮುದಾಯದಲ್ಲಿ ಕಾಣ ಸಿಗದು. ಹಾಗಾಗಿ ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಸಮಾಜಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಚಿಂತನೆ ವಕೀಲ ಸಮುದಾಯದಲ್ಲಿ ಬರಬೇಕು. ಜನರಿಗೆ ನ್ಯಾಯಿಕ ಸೌಲಭ್ಯ ಕಲ್ಪಿಸುವುದರ ಜತೆಗೆ ಪರಿಸರ ಜಾಗೃತಿ, ಸಾಮಾಜಿಕ ಕಾಳಜಿ, ನೆಲ, ಜಲ, ಭಾಷೆಯ ರಕ್ಷಣೆಗೂ ಮುಂದಾಗಬೇಕು ಎಂದು ತಿಳಿಸಿದರು.
ನ್ಯಾಯಾಧಿಧೀಶ ನಾಗೇಶ್ ಮಾತನಾಡಿ, ದಶದ ಪ್ರಜೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕು. ಆ ಮೂಲಕ ವಿಶ್ವದಲ್ಲಿ ಬಲಿಷ್ಠ ಪ್ರಜಾಪಭುತ್ವವನ್ನು ರಕ್ಷಿಸಿ ಮಾದರಿಯಾಗಬೇಕು ಎಂದರು.
ಹಿರಿಯ ವಕೀಲ ಜಿ.ಎಚ್. ಹನುಮಂತೇ ಗೌಡ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ ಅಧ್ಯಕ್ಷ ಜಿ.ಈ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆರ್. ಜಗದೀಶ್, ಕಾರ್ಯದರ್ಶಿ ಪ್ರದೀಪ್‌ಕುಮಾರ್, ಅಪರ ಸಿವಿಲ್ ಅಭಿಯೋಜಕ ಜಯಣ್ಣ ಹಾಗೂ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.