Advertisement

ಭರಪೂರ ಮಳೆಗೆ ಕೆರೆಗಳೆಲ್ಲ ಭರ್ತಿ

07:03 PM Nov 11, 2019 | Naveen |

„ಎಸ್‌. ವೇದಮೂರ್ತಿ
ಹೊಳಲ್ಕೆರೆ:
‘ಕೆರೆ ನಾಡು’ ಎಂದು ಖ್ಯಾತಿ ಪಡೆದಿರುವ ಹೊಳಲ್ಕೆರೆ ಪಟ್ಟಣದ ಸುತ್ತಮುತ್ತಲಿನ ಕೆರೆಗಳು ಧುಮ್ಮಿಕ್ಕಿ ಹರಿಯುತ್ತಿವೆ. ಹಿರೇಕೆರೆ, ಸಣ್ಣಕೆರೆ, ಹೊನ್ನೆಕೆರೆಗೆ ಮಳೆ ಜೀವಕಳೆಯನ್ನುಂಟು ಮಾಡಿದೆ.

Advertisement

ದಾವಣಗೆರೆ ರಸ್ತೆಯ ಹಿರೇಕೆರೆ ಸುಮಾರು 380 ಎಕರೆ ಪ್ರದೇಶದಲ್ಲಿ ಜಲರಾಶಿಯನ್ನು ಹಿಡಿದಿಟ್ಟುಕೊಂಡಿದ್ದರೆ, ಹೊನ್ನಕೆರೆ ಸುಮಾರು 200 ಎಕರೆ ಪ್ರದೇಶದಲ್ಲಿದೆ. ಇನ್ನು 150 ಎಕರೆಯ ಸಣ್ಣಕೆರೆ ಈ ವರ್ಷದ ಮಳೆಗೆ ದಶಕಗಳ ಬಳಿಕ ತುಂಬಿ ಕೋಡಿ ಹರಿಯುವುದು ಹೊಸ ಐತಿಹಾಸ ಸೃಷ್ಟಿಸಿದೆ.

ಕೆರೆ ಸುತ್ತ ಇರುವ ಸುಮಾರು 25 ಹಳ್ಳಿಗಳಿಗೆ ಕೆರೆ ನೀರಿನ ಅಸರೆ ಸಿಕ್ಕಿದೆ. ಬರದಿಂದ ತತ್ತರಿಸುತ್ತಿದ್ದ ತೋಟಗಾರಿಕೆ ಹಾಗೂ ಕೃಷಿ ಚೇತರಿಕೆ ಕಂಡಿವೆ. ಕೊಳವೆಬಾವಿಗೆಂದು ಲಕ್ಷಾಂತರ ರೂ. ವ್ಯಯಿಸುತ್ತಿದ್ದ ಕೃಷಿಕರು ಕೆರೆ ಭರ್ತಿಯಾಗಿದ್ದನ್ನು ಕಂಡು ಸಂತಸಗೊಂಡಿದ್ದಾರೆ.

ಕೆರೆ ಪಾತ್ರದ ಗ್ರಾಮಗಳಾದ ಹೊಳಲ್ಕೆರೆ, ಚೀರನಹಳ್ಳಿ, ಕಂಬದೇವರಹಟ್ಟಿ, ಆಡನೂರು, ಮಲ್ಕಾಪುರ, ಅಗ್ರಹಾರ, ಜೈಪುರ, ಅರೆಹಳ್ಳಿ, ಪುಣಜೂರು, ಶಿವಪುರ, ಕುನುಗಲಿ, ಮಲ್ಲಾಡಿಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜಲಮೂಲಕ್ಕೆ ಪುನಶ್ಚೇತನ ದೊರೆತಿದೆ. ಮುಚ್ಚಿ ಹೊಗಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿದೆ.

ಗುಡ್ಡದಲ್ಲಿ ಮಳೆ ಸುರಿದರೆ ನೀರೆಲ್ಲ ಪಟ್ಟಣ ಮೂರು ಕೆರೆಗಳಿಗೂ ಹರಿಯುತ್ತಿತ್ತು. ನಂತರ ಗುಡ್ಡದ ಶ್ರೇಣಿಯಲ್ಲಿ ಕುಡಿನೀರುಕಟ್ಟೆ ಕೆರೆ ನಿರ್ಮಾಣದ ನಂತರ ನೀರಿನ ಹರಿವು ಕಡಿಮೆಯಾಯಿತು. ಮಳೆ ಜಾಸ್ತಿಯಾದಾಗ ಕುಡಿನೀರುಕಟ್ಟೆ ಕೆರೆ ತುಂಬಿ ಕೋಡಿ ಹರಿಯುತ್ತದೆ. ಹೊನ್ನಕೆರೆ, ಸಣ್ಣಕೆರೆ ಹಾಗೂ ಹಿರೇಕೆರೆಗಳು ತುಂಬಲು ಮಳೆ ನೀರನ್ನೇ ಅವಲಂಬಿಸಿವೆ.

Advertisement

ಶಿಥಿಲಗೊಂಡ ಕೆರೆ ಏರಿ: ಪಟ್ಟಣದ ಮೇಲ್ಭಾಗದಲ್ಲಿರುವ ಹೊನ್ನಕೆರೆ ಭರ್ತಿಯಾಗಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದ್ದರೂ, ಕೆರೆ ಏರಿಗಳೂ ಸಂಪೂರ್ಣ ಶಿಥಿಲಗೊಂಡು ನೀರೆಲ್ಲ ಅಲ್ಲಲ್ಲಿ ಜಿನುಗುತ್ತಿದೆ. ಹತ್ತಾರು ವರ್ಷ ಖಾಲಿ ಇದ್ದ ಹಿನ್ನಲೆಯಲ್ಲಿಕೆರೆ ಏರಿ ಬಿರುಕು ಬಿಟ್ಟಿದೆ. ನೀರಿನ ಒತ್ತಡದಿಂದಾಗಿ ಏರಿ ಒಡೆದು ನೀರು ಪಟ್ಟಣದೊಳಗೆ ನುಗ್ಗುವ ಭೀತಿ ಎದುರಾಗಿದೆ.

ಧಾರಾಕಾರ ಮಳೆಗೆ ಕೆರೆಗಳು ಧುಮ್ಮಿಕ್ಕಿ ಹರಿಯುತ್ತಿದ್ದರೂ ಸಣ್ಣ ನೀರಾವರಿ ಇಲಾಖೆ ಕೆರೆ ಕೋಡಿಯಲ್ಲಿ ಬೆಳೆದು ನಿಂತ ಗಿಡ-ಮರಗಳು, ಘನತ್ಯಾಜ್ಯ, ಕೊಚ್ಚೆಯನ್ನು ಸ್ವಚ್ಚಗೊಳಿಸದೆ ನಿರ್ಲಕ್ಷ್ಯ ವಹಿಸಿತ್ತು. ಕೋಡಿಯಲ್ಲಿರುವ ನೂರಾರು ಮನೆಗಳು ನೀರಿನಲ್ಲಿ ಕೊಚ್ಚಿ ಹೊಗುವ ಸ್ಥಿತಿ ನಿರ್ಮಾಣವಾಗುತ್ತಿದ್ದರೂ ಕೋಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪಟ್ಟಣ ಪಂಚಾಯತ್‌ ಕೋಡಿ ನೀರು ಹರಿಯುವ ನೀರಿನ ಹಳ್ಳಗಳನ್ನು ಸ್ವತ್ಛಗೊಳಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರವಾಗಿದೆ.

ದಾವಣಗೆರೆ ರಸ್ತೆ ಕೆರೆ ಏರಿ ಮೇಲೆ ಹಾದು ಹೋಗಿದ್ದು ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೆರೆ ಏರಿ ಮಟ್ಟಕ್ಕೆ ನೀರು ನಿಂತಿದ್ದು, ಹತ್ತಾರು ಅಡಿ ಅಳದಲ್ಲಿ ನೀರಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಏರಿ ಮೇಲೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next