Advertisement

ಸೌಲಭ್ಯ ಕೇಳ್ಳೋದು ಜನರ ಹಕ್ಕು: ಶಾಂತವೀರ ಸ್ವಾಮೀಜಿ

03:19 PM Jun 14, 2019 | Naveen |

ಹೊಳಲ್ಕೆರೆ: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮುದಾಯಗಳ ಸಂಘಟನೆ ಅನಿವಾರ್ಯ ಎಂದು ಹೊಸದುರ್ಗದ ಕುಂಚಿಟಿಗ ಮಠದ ಡಾ| ಶಾಂತವೀರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತಾಲೂಕು ಕುಂಚಿಟಿಗ ಸೇವಾ ಸಮಿತಿ ಟ್ರಸ್ಟ್‌ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.

ಹೊಳಲ್ಕೆರೆ ತಾಲೂಕಿನಲ್ಲಿ ಕುಂಚಿಟಿಗ ಸಮುದಾಯದವರು 25 ಸಾವಿರದಷ್ಟಿದ್ದು, ಸರಿಯಾದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಚುನಾವಣೆಯಲ್ಲಿ ಕುಂಚಿಟಿಗರ ಮತಗಳೇ ನಿರ್ಣಾಯಕವಾದರೂ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಮತ ಹಾಕುವುದು ಹೇಗೆ ಸಂವಿಧಾನಬದ್ಧ ಹಕ್ಕಾಗಿದೆಯೋ ಅದೇ ರೀತಿ ಸೌಲಭ್ಯ ಕೇಳುವುದೂ ಜನರ ಹಕ್ಕು ಎಂದರು.

ತಾಲೂಕಿನಲ್ಲಿ ಕುಂಚಿಟಿಗ ಸಮುದಾಯದ‌ ಜನರಲ್ಲಿ ಸಂಘಟನೆಯ ಕೊರತೆ ಇತ್ತು. ಇದನ್ನು ಮನಗಂಡು ಕುಂಚಿಟಿಗರು ಇರುವ ತಾಲೂಕಿನ 59 ಹಳ್ಳಿಗಳಿಂದ ಒಬ್ಬ ಸದಸ್ಯರಂತೆ 59 ಸದಸ್ಯರನ್ನು ಟ್ರಸ್ಟ್‌ಗೆ ಆಯ್ಕೆ ಮಾಡಿದ್ದೇವೆ. ಜನಸೇವೆಯೇ ಟ್ರಸ್ಟ್‌ನ ಮೂಲ ಆಶಯವಾಗಿದ್ದು, ಸದಸ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಇಲ್ಲಿ ಪ್ರತಿಷ್ಠೆ, ಪ್ರತಿಸ್ಪರ್ಧೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.

ಕುಂಚಿಟಿಗ ಸಮಾಜಕ್ಕೆ ತಾಲೂಕಿನಲ್ಲಿ ಸ್ವಂತ ನಿವೇಶನವಿಲ್ಲ. ಅದಕ್ಕಾಗಿ ಸಮುದಾಯ ಭವನ, ವಿದ್ಯಾರ್ಥಿನಿಲಯವನ್ನು ನಿರ್ಮಿಸಬೇಕಿದ್ದು, ಇದಕ್ಕೆ ಜಮೀನಿನ ಅಗತ್ಯವಿದೆ. ಕುಂಚಿಟಿಗ ಸಮುದಾಯದಲ್ಲಿ ಕುಂಚಿಟಿಗ ಲಿಂಗಾಯತ, ಕುಂಚಿಟಿಗ ಒಕ್ಕಲಿಗ, ಕುಂಚಿಟಿಗ ಕಮಾಟಿ, ಕುಂಚಿಟಿಗ ನಾಮಧಾರಿ ಎಂಬ ನಾಲ್ಕು ಪಂಗಡಗಳಿದ್ದು, ಎಲ್ಲರ ಮೂಲವೂ ಒಂದೇ ಆಗಿದೆ. ಈ ಎಲ್ಲಾ ಪಂಗಡಗಳ ಆಚರಣೆಗಳು ಬೇರೆಯಾಗಿದೆ. ಇದನ್ನೇ ನೆಪ ಮಾಡಿಕೊಂಡು ಸಮಾಜವನ್ನು ಒಡೆಯುವ ಪ್ರಯತ್ನ ಮಾಡಬಾರದು ಎಂದರು.

Advertisement

ಕುಂಚಿಟಿಗ ಸೇವಾ ಸಮಿತಿ ಟ್ರಸ್ಟ್‌ ಗೌರವಾಧ್ಯಕ್ಷರಾಗಿ ಜಿ.ಎಚ್. ಶಿವಕುಮಾರ್‌, ಅಧ್ಯಕ್ಷರಾಗಿ ಟಿ.ಎಸ್‌. ರಾಜಪ್ಪ, ಕಾರ್ಯಾಧ್ಯಕ್ಷರಾಗಿ ಪಿ.ಆರ್‌. ಶಿವಕುಮಾರ್‌, ರಂಗಸ್ವಾಮಿ, ಉಪಾಧ್ಯಕ್ಷರಾಗಿ ತಿಮ್ಮಣ್ಣ, ಅಜ್ಜಣ್ಣ, ಜಗದೀಶ್‌, ಆನಂದ್‌, ಪ್ರಧಾನ ಕಾರ್ಯದ‌ರ್ಶಿಗಳಾಗಿ ಈಶ್ವರ ದಗ್ಗೆ, ಸುಮಂತ್‌, ಕಾರ್ಯದರ್ಶಿಗಳಾಗಿ ಶ್ರೀನಿವಾಸ್‌, ಮುರಿಗೇಂದ್ರಪ್ಪ, ತೇಕಲವಟ್ಟಿ ನಾಗರಾಜ್‌, ಎಚ್.ಡಿ. ಪುರದ ನಾಗರಾಜ್‌ ಅವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ನವೀನ್‌, ವೆಂಕಟೇಶ್‌, ಜಿ.ಎಸ್‌.ಎಸ್‌. ಕುಮಾರ್‌ ಖಚಾಂಜಿಯಾಗಿ ಅರುಣೇಂದ್ರ ಕುಮಾರ್‌, ಸಂಘಟನಾ ಕಾರ್ಯದರ್ಶಿಯಾಗಿ ರುದ್ರಮುನಿ ನಿಯುಕ್ತಿಗೊಂಡಿದ್ದಾರೆ.

ಕುಂಚಿಟಿಗ ಮಠದ ಸಲಹೆ-ಸಹಕಾರದಿಂದ ಕುಂಚಿಟಿಗ ಸೇವಾ ಸಮಿತಿ ಟ್ರಸ್ಟ್‌ ಸ್ವತಂತ್ರವಾಗಿ ಕೆಲಸ ಮಾಡಲಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಸಮುದಾಯದ ಏಳ್ಗೆಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಳ್ಳಲಿದೆ. ಸದಸ್ಯರು ಸಮಾಜದ ಆಶಯಗಳನ್ನು ಅರಿತು ನಡೆಯಬೇಕು. ಪ್ರತಿಷ್ಠೆಯನ್ನು ಬದಿಗೊತ್ತಿ ಜನರೊಂದಿಗೆ ಬೆರೆಯಬೇಕು.
•ಡಾ| ಶಾಂತವೀರ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next