Advertisement

ಕಾಯಕ ತತ್ವ ಅಳವಡಿಸಿಕೊಳ್ಳಿ

12:16 PM Jun 26, 2019 | Naveen |

ಹೊಳಲ್ಕೆರೆ: ಶಿವಶರಣ ನುಲಿಯ ಚಂದಯ್ಯನವರ ‘ಕಾಯಕವೇ ಕೈಲಾಸ’ ಎನ್ನುವ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

Advertisement

ತಾಲೂಕಿನ ಆರ್‌. ನುಲೇನೂರಿನಲ್ಲಿ ನಡೆದ ವಚನಕಾರ ನುಲಿಯ ಚಂದ್ರಯ್ಯನವರ ಸ್ಮರಣೋತ್ಸವ ಹಾಗೂ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.

ಮಹಾಪುರುಷರ ತತ್ವಗಳನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತರದೆ ಅವರ ಮೂರ್ತಿಗಳನ್ನು ಇಟ್ಟುಕೊಂಡು ಪೂಜೆ ಮಾಡುವುದು ದೇಶದ ದೊಡ್ಡ ದುರಂತ. ಶರಣರು ಪ್ರತಿಮಾ ಸಂಸ್ಕೃತಿಯ ಪ್ರತಿಪಾದಕರಲ್ಲ. ತಮ್ಮ ಚಿಂತನೆಗಳನ್ನು ಕಾಯಕದ ಮೂಲಕ ಜಾರಿಗೆ ತಂದವರು ಎಂದರು.

ಇಂದು ಎಲ್ಲರೂ ಸಂಪತ್ತಿನ ಹಿಂದೆ ಓಡುತ್ತಿದ್ದಾರೆ. ಸಂಪತ್ತಿನ ಮೋಹದಿಂದ ಹೊರಬರಬೇಕು. ಸಜ್ಜನರಾಗಿ ಬದುಕುವ ಚಿಂತನೆ ಬೆಳೆಸಿಕೊಳ್ಳಬೇಕು. ನುಲಿಯ ಚಂದಯ್ಯ ಕಾಯಕ ಮುಖ್ಯವೇ ವಿನಃ ದೇವರಲ್ಲ ಎಂದು ಪ್ರತಿಪಾದಿಸಿದರು. ದೇವರಿಗೆ ಕಾಯಕವನ್ನು ಕಲಿಸಿದರು. ಹಾಗಾಗಿ ಕಾಯಕದ ಮೂಲಕ ಸಾಮಾಜಿಕ ಬದಲಾವಣೆ ಶ್ರಮಿಸಬೇಕು ಎಂದು ಹೇಳಿದರು.

ಇಂದು ಪ್ರಕೃತಿಯ ಮೇಲೆ ಮಾನವ ಎಸಗುತ್ತಿರುವ ದ್ರೋಹದಿಂದ ಬರಗಾಲ ಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಸಸಿ ನೆಟ್ಟು ಮರವನ್ನಾಗಿ ಬೆಳೆಸಬೇಕು. ಸ್ವಾರ್ಥ ಮನೋಭಾವದಿಂದ ಮನೆ ಮುಂದಿನ ಕಸವನ್ನು ಗ್ರಾಪಂ ಸದಸ್ಯ ಬಂದು ಹೊಡೆಯಬೇಕೆನ್ನುವ ಸ್ಥಿತಿ ನಿರ್ಮಾಣವಾಗಿದೆ. ಶರಣರು ನಮ್ಮ ಮನೆಯ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಎಂದಿದ್ದರು. ಆದ್ದರಿಂದ ನಮ್ಮ ಮನಸ್ಸಿನ ಕೊಳೆಯನ್ನು ತೊಳೆಯಲು ಸತ್ಸಂಗ, ವಚನಗಳ ಸಂದೇಶವನ್ನು ಅರಿತುಕೊಳ್ಳಬೇಕೆಂದರು.

Advertisement

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ನುಲೇನೂರು ಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ. ಕೆರೆಯಲ್ಲಿರುವ ಮುಳ್ಳಿನ ಗಿಡಗಳನ್ನು ತೆರವುಗೊಳಿಸಲಾಗುತ್ತದೆ. ನಂತರ ಹೂಳು ತೆಗೆದು ನೀರು ತುಂಬಿಸಲಾಗುವುದು. ಬಸಾಪುರ ಗೇಟ್ನಿಂದ ರಾಮಗಿರಿ ಮಾರ್ಗದ ರಸ್ತೆ ಡಾಂಬರಿಕರಣಕ್ಕೆ 1.5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಸಾಹಿತಿ ಈಶ್ವರ ಮಂಟೂರು ಉಪನ್ಯಾಸ ನೀಡಿದರು. ಜಿಪಂ ಸದಸ್ಯ ಮಹೇಶ್‌, ತಾಪಂ ಅಧ್ಯಕ್ಷೆ ಸುಜಾತಾ ಧನಂಜಯ, ಸಾಹಿತಿ ಜಿ.ಎನ್‌. ಬಸವರಾಜ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next