ಹೊಳಲ್ಕೆರೆ: ಕೋವಿಡ್ ವೈರಸ್‌ನಿಂದ ಜನರನ್ನು ಕಾಪಾಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ನಿರ್ಧಾರ ಕೈಗೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸುವ ಮೂಲಕ ಮಹಾಮಾರಿ ಕೋವಿಡ್ ವೈರಸ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಶಾಸಕ ಎಂ. ಚಂದ್ರಪ್ಪ ಮನವಿ ಮಾಡಿದರು.
ತಾಲೂಕಿನ ಬ್ರಹ್ಮಪುರ, ಬಂಜನಗೊಂಡನಹಳ್ಳಿ, ಪಂಪಾಪುರ, ರಾಮೇನಹಳ್ಳಿ, ಟಿ. ನುಲೇನೂರು, ತೊಡರನಹಾಳ್, ಲಿಂಗದಹಳ್ಳಿ, ತಿರುಮಲಾಪುರದಲ್ಲಿ ಕೋವಿಡ್ ಜಾಗೃತಿ ಸಭೆ ನಡೆಸಿ ಅವರು ಮಾತನಾಡಿದರು. ಪ್ರಧಾನಿ ಲಾಕ್‌ಡೌನ್ ಘೋಷಿಸಿ ಕ್ಷೇತ್ರಾದ್ಯಂತ ಸುತ್ತಾಡಿ ಗ್ರಾಮಸ್ಥರಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ತುರ್ತು ಸಂದರ್ಭ ಇದ್ದಲ್ಲಿ ಹೊರಗೆ ಹೋಗಬೇಕೆನ್ನುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ವೈಯಕ್ತಿಕವಾಗಿ ಸ್ವತ್ಛವಾಗಿರುವುದೇ ಕೊರೊನಾ ವೈರಸ್‌ಗೆ ಮದ್ದು ಎಂದರು.
ಬಡವರು ಹಸಿವಿನಿಂದ ನರಳಬಾರದೆನ್ನುವ ಉದ್ದೇಶದಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ತಿಂಗಳಿಗಾಗುವಷ್ಟು ಪಡಿತರ ಧಾನ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಪಡಿತರ ಚೀಟಿಗೆ ಅರ್ಜಿ ಹಾಕದವರಿಗೂ ಪಡಿತರ ಧಾನ್ಯಗಳನ್ನು ವಿತರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರುಗಳಿಗೆ ಸೂಚಿಸಲಾಗಿದೆ. ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿಗಳು, ಪಿಡಿಒಗಳು ಪ್ರತಿ ಗ್ರಾಮಗಳಿಗೆ ಹೋಗಿ ಜನರ ಅಹವಾಲುಗಳನ್ನು ಆಲಿಸಬೇಕು. ಕುಡಿಯುವ ನೀರಿಗೆ ಎಲ್ಲಿಯೂ ತೊಂದರೆಯಾಗಬಾರದು. ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಸುಮ್ಮನಿರಲ್ಲ ಎಂದು ತಾಕೀತು ಮಾಡಿದರು.
ಟಿ. ನುಲೇನೂರು ಗ್ರಾಮದ ರೈತರು, ದಿನಕ್ಕೆ ಒಂದೂವರೆ ಗಂಟೆಯಾದರೂ ಪಂಪ್‌ಸೆಟ್ ಗೆ ವಿದ್ಯುತ್ ಪೂರೈಕೆ ಮಾಡದ ಕಾರಣ ತೋಟಗಳನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಲಾಕ್‌ಡೌನ್ ಮುಗಿದ ನಂತರ 60 ಮೆಗಾವ್ಯಾಟ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಐದು ತಾಸು ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದರು. ಜಿಪಂ ಮಾಜಿ ಸದಸ್ಯ ಎಲ್.ಬಿ. ರಾಜಶೇಖರ್, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಮಿಲ್ಟ್ರಿ ನಾಗರಾಜಪ್ಪ, ನುಲೇನೂರು ಈಶ್ವರಪ್ಪ, ನಂಜುಂಡಪ್ಪ, ಗ್ರಾಪಂ ಅಧ್ಯಕ್ಷ ಮಹಂತೇಶ್, ಅರುಣ್ ನುಲೇನೂರ್, ವಿಜಯಕುಮಾರ್, ಜಗದೀಶ್ ಲಿಂಗದಹಳ್ಳಿ, ಟಿ.ಸಿ. ರಾಜಪ್ಪ ಇತರರು ಇದ್ದರು.