Advertisement

ಸ್ವಚ್ಛ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ

01:23 PM Aug 18, 2019 | Naveen |

ಹೊಳಲ್ಕೆರೆ: ಸ್ವಚ್ಛ ಭಾರತ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಆಗ ಮಾತ್ರ ಪ್ರತಿಯೊಂದು ಸ್ಥಳವನ್ನು ಸ್ವಚ್ಛವಾಗಿಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಪಟ್ಟಣ ಪಂಚಾಯತ್‌ ಸಹಯೋಗದಲ್ಲಿ ಆಯೋಜಿಸಿದ್ದ ‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಐತಿಹಾಸಿಕ ಕಾಲಬೈರವೇಶ್ವರ ಪುಷ್ಕರಣಿ ಸ್ವಚ್ಛತೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಐತಿಹಾಸಿಕ ಪುಷ್ಕರಣಿಯನ್ನು ಉಳಿಸುವ ಕೆಲಸ ಮಾಡಬೇಕು. ಜಲಮೂಲಗಳಾಗಿರುವ ಬಾವಿ, ಹೊಂಡಗಳನ್ನು ಉಳಿಸಿಕೊಳ್ಳುವುದರ ಜತೆ ಅವುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವ ಕೆಲಸ ಆಗಬೇಕು. ನಮ್ಮ

ಸುತ್ತ ಜಲಮೂಲಗಳಾದ ಪುಷ್ಕರಣಿಗಳು, ಹೊಂಡಗಳು, ಬಾವಿಗಳು ಇದ್ದರೂ, ಅವುಗಳನ್ನು ಅಶುದ್ಧಗೊಳಿಸಿ ಬೇರೆ ಕಡೆಯಿಂದ ನೀರು ತರುವಂತೆ ಬಯಸುವುದು ಸರಿಯಾದ ಕ್ರಮವಲ್ಲ. ನಮ್ಮಲ್ಲಿರುವ ನೀರನ್ನು ಸಮರ್ಪಕವಾಗಿ ಉಳಿಸಿಕೊಳ್ಳಲು ಚಿಂತಿಸಬೇಕು. ಇರುವ ನೀರಿನ ಸೌಲಭ್ಯಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದರು.

ಸ್ಥಳೀಯ ಜಲಮೂಲ ಸಂಪತ್ತು ರಕ್ಷಣೆ ಮಾಡಿಕೊಳ್ಳಲು ಸ್ಥಳೀಯವಾಗಿರುವ ಸಂಘಟನೆಗಳ ಸಹಕಾರ ಪಡೆಯಬೇಕು. ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ ಎನ್ನುವ ಭಾವನೆಯನ್ನು ತೊರೆದು ನಮ್ಮ ಗ್ರಾಮದ ಸ್ವಚ್ಛತೆ ನಮ್ಮದೇ ಹೊಣೆ ಎನ್ನುವ ಭಾವನೆ ಬೆಳೆಸಿಕೊಂಡು ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.

Advertisement

ನ್ಯಾಯವಾದಿ ಎಸ್‌. ವೇದಮೂರ್ತಿ ಮಾತನಾಡಿ, ಐತಿಹಾಸಿಕ ಕಾಲಬೈರವೇಶ್ವರ ಪುಷ್ಕರಣಿಗೆ ಸಾವಿರಾರು ವರ್ಷಗಳ ಐತಿಹಾಸವಿದೆ. ಪಟ್ಟಣವನ್ನು ಕಟ್ಟುವಾಗ ನಿರ್ಮಾಣಗೊಂಡಿದೆ. ಪುಷ್ಕರಣಿ ಸಂಪೂರ್ಣ ಶಿಥಿಲಾವವಸ್ಥೆಯಲ್ಲಿದ್ದು, ಸುತ್ತಲೂ ಗೋಡೆ ನಿರ್ಮಾಣ ಮಾಡಬೇಕು. ಅದರ ಮೇಲೆ ಕಬ್ಬಿಣದ ಕಂಬಿಗಳನ್ನು ಹಾಕುವ ಮೂಲಕ ಸಾರ್ವಜನಿಕರು ಪ್ರವೇಶ ನಿಲ್ಲಿಸಬೇಕು. ತಗಡಿನ ಛಾವಣಿ ಮಾಡುವ ಮೂಲಕ ಮಳೆ ಕೊಯ್ಲು ಮಾಡಲು ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ವಾಸಿಂ ಮಾತನಾಡಿ, ಪಟ್ಟಣದ ಸ್ವಚ್ಛತೆ ನಿಟ್ಟಿನಲ್ಲಿ ಈಗಾಗಲೆ ಮೊದಲ ಮತ್ತು ನಾಲ್ಕನೇ ಶನಿವಾರ ‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಕಾರ್ಯಕ್ರಮವನ್ನು ರೂಪಿಸಿಕೊಂಡು ಸ್ವಚ್ಛತೆ, ಸಸಿ ನೆಡುವ ಹಾಗೂ ಬಾವಿ, ಹೊಂಡ, ಪುಷ್ಕರಣಿ ಶುದ್ಧಗೊಳಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪಟ್ಟಣದಲ್ಲಿರುವ ಕೊಳಚೆಯನ್ನು ಸಂಪೂರ್ಣ ಶುದ್ಧಗೊಳಿಸಲು ಪೌರ ಕಾರ್ಮಿಕರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸ್ವಚ್ಛತಾ ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಪಪಂ ಮಾಜಿ ಸದಸ್ಯ ಬಿ. ಶಿವರುದ್ರಪ್ಪ ಮಾತನಾಡಿ, ಅನಾದಿ ಕಾಲದಿಂದ ಜನರು ಈ ಪುಷ್ಕರಣಿಯ ನೀರನ್ನು ಆಶ್ರಯಿಸಿಕೊಂಡು ಜೀವನ ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಘನತ್ಯಾಜ್ಯ ಪುಷ್ಕರಣಿಯನ್ನು ಸೇರುತ್ತಿದೆ. ಇದರಿಂದಾಗಿ ಜನರು ನೀರನ್ನು ಬಳಕೆ ಮಾಡುವುದನ್ನು ನಿಲ್ಲಿಸಿದ್ದಾರೆ. ಶುದ್ಧಗೊಳಿಸಿದಲ್ಲಿ ಉತ್ತಮ ಕುಡಿಯುವ ನೀರಾಗಿ ಬಳಕೆ ಮಾಡಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಯೋಜನಾಧಿಕಾರಿ ರಾಜಶೇಖರ್‌, ತಹಶೀಲ್ದಾರ್‌ ನಾಗರಾಜ್‌, ಇಂಜನಿಯರ್‌ ಸ್ವಾಮಿ, ವೆಂಕಟೇಶ್‌, ರೋಟರಿ ಕ್ಲಬ್‌ ಅಧ್ಯಕ್ಷ ಹರೀಶ್‌, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಸಿ. ಗಂಗಾಧರಪ್ಪ, ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸುಮಿತ್ರಕ್ಕ, ಬಿ.ಪಿ. ಕಾಲೇಜು ಪ್ರಾಚಾರ್ಯ ಮಹೇಂದ್ರಪ್ಪ, ಡಾ| ತಿಪ್ಪೇಸ್ವಾಮಿ, ಪಿಎಸ್‌ಐ ಮಹೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next