ಹೊಳಲ್ಕೆರೆ: ಸೂರ್ಯನುದಯ ತಾವರೆಗೆ ಜೀವಾಳ. ಸೂರ್ಯ ಭೂಮಿಯ ಮೇಲಿನ ಕತ್ತಲೆಯನ್ನು ನಿವಾರಿಸಿ ಬಹಿರಂಗದ ಪ್ರಪಂಚವನ್ನು ಬೆಳಗುತ್ತಾನೆ. ಆದರೆ ಶರಣರ ವಚನಗಳು ಅಂತರಂಗದ ಲೋಕವನ್ನು ಬೆಳಗಿಸುತ್ತವೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗ ಮುರುಘಾ ಮಠದ ವತಿಯಿಂದ ಭಾನುವಾರ ತಾಲೂಕಿನ ಅಂದನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.
ಮಾನವನ ಅಂತರಂಗ ಶುದ್ಧಿಯಾಗಬೇಕು. ಶರಣರು ವಚನಗಳಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿ ಬಗ್ಗೆ ಹೇಳಿದ್ದಾರೆ. ಸೂರ್ಯನುದಯದಂತೆ ನಮ್ಮ ಆಂತರಂಗದಲ್ಲಿಯೂ ಜ್ಞಾನದ ಬೆಳಕಿನ ಉದಯವಾಗಬೇಕು ಆಗ ಸಮಾಜವನ್ನು ಬೆಳಗಿಸಲು ಸಾಧ್ಯ. ಸಮಾಜ ಬೆಳಗಿಸಲು ಬಸವ ಚಿಂತನೆಯ ಉದಯ ಪ್ರತಿಯೊಬ್ಬರ ಮನಸ್ಸಿನಲ್ಲೂ ಆಗಬೇಕು ಎಂದರು.
ಗುರುಗಳ ಸಂಗದಿಂದ ಅಂತರಂಗದ ಬೆಳಕನ್ನು ಪಡೆಯಬೇಕು. ಒಬ್ಬ ಮಹಾನ್ ಗುರು ಲಕ್ಷೋಪಲಕ್ಷ ಜನರಿಗೆ ಅಂತರಂಗ ಶುದ್ಧಿಗೆ ಮಾರ್ಗದರ್ಶನ ಮಾಡಿ ಬದುಕಿನ ದರ್ಶನ ನೀಡಿರುತ್ತಾರೆ. ಬಸವಾದಿ ಶರಣರು ಬಸವಣ್ಣನ ವಿಚಾರಗಳನ್ನು ಮನುಕುಲದ ಮನಸ್ಸಿನಲ್ಲಿ ಬಿತ್ತಿ ಕಲ್ಯಾಣದ ದರ್ಶನ ಮಾಡಿಸಿದ್ದಾರೆ. ಅನುಭವ ಮಂಟಪದ ಮೂಲಕ ಕಲ್ಯಾಣ ರಾಜ್ಯವನ್ನು ಕಟ್ಟಿದ್ದಾರೆ. ಅದರೆ ಗುರುವೇನ್ನುವ ಸೂಕ್ತ ವ್ಯಕ್ತಿಗಾಗಿ ಕಾಯುತ್ತಿದ್ದಾಗ ಬಸವಣ್ಣನವರಿಗೆ ಕಂಡಿದ್ದು ಅಲ್ಲಮಪ್ರಭುಗಳು. ಅವರೇ ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿ ಬಸವಾದಿ ಚಿಂತನೆಗಳನ್ನು ಜನರಲ್ಲಿ ಬಿತ್ತುವ ಮೂಲಕ ಸಮ ಸಮಾಜ ಕಟ್ಟಲು ಶ್ರಮಿಸಿದರು ಎಂದು ಸ್ಮರಿಸಿದರು.
ಅಂದದ ಊರೇ ಅಂದನೂರು. ಸಾತ್ವ್ವಿಕತ್ವ ನೆಲೆ ನಿಂತ ಊರು ಕೂಡ ಆಗಿದೆ. ಅಂದನೂರು ಎಂದರೆ ಪ್ರೀತಿಯ ಬದುಕು ಕಟ್ಟಿಕೊಳ್ಳುವ ಊರು. ಇಲ್ಲಿ ಸಾಮಾಜಿಕ ಸಾಮರಸ್ಯವಿದೆ. ಸಾತ್ವಿಕತೆ ಇಲ್ಲಿನ ಜನರ ಬದುಕನ್ನು ಶ್ರೀಮಂತಗೊಳಿಸಿದೆ ಎಂದು ಬಣ್ಣಿಸಿದರು.
‘ಹೊಸತನ’ ವಿಷಯದ ಕುರಿತು ಶಿಕ್ಷಕ ಎಂ.ಜಿ. ವೆಂಕಟೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹನುಮಂತಪ್ಪ ಗೋಡೆಮನೆ, ಪಿ.ಎಚ್. ಮುರುಗೇಶ್, ಎಸ್.ಜೆ.ಎಂ ಕಾರ್ಯದರ್ಶಿ ಪರಮಶಿವಯ್ಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ ನಾಗರಾಜ್, ನಾಗರಾಜ್ ಕಾಕನೂರು ಮತ್ತಿತರರು ಭಾಗವಹಿಸಿದ್ದರು.