ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ರೈತರು ಮುಕ್ತ ಮನಸ್ಸಿನಿಂದ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಭೂಮಿ ನೀಡಲುಸಿದ್ಧರಿದ್ದಾರೆ. ಹಾಗಾಗಿ ತಾಲೂಕಿನ ಕೆರೆಗಳಿಗೆ ಶೀಘ್ರದಲ್ಲೇ ಭದ್ರಾ ನೀರು ಹರಿಯಲಿದೆ ಎಂದು ಶಾಸಕ ಎಂ. ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಚನ್ನಸಮುದ್ರ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಭೂಸ್ವಾಧೀನದಾರರ ಅಹವಾಲು ಸ್ವೀಕಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ನೂರು ವರ್ಷಗಳ ಇತಿಹಾಸದಲ್ಲಿ 76 ವರ್ಷ ಬರಗಾಲವನ್ನು ಕಂಡಿದೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಜಿಲ್ಲೆಗೆ ಭದ್ರಾ ನೀರು ಹರಿಸಬೇಕೆಂದು ಕನಸು ಕಂಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 650 ಕೋಟಿ ರೂ. ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅಧಿಕಾರಿಗಳ ನಿರಾಸಕ್ತಿಯ ಪರಿಣಾಮ ಅನುಷ್ಠಾನದಲ್ಲಿ ವಿಳಂಬವಾಗಿತ್ತು. ಹೊಳಲ್ಕೆರೆ ಕಡೆಗೆ ಹೋಗುವ ಚಾನಲ್ ಕೆಲಸ ಶೇ. 75ರಷ್ಟು ಪೂರ್ಣಗೊಳ್ಳುವ ಹಂತದಲ್ಲಿದೆ. ಜನರು ಭೂಮಿ ನೀಡಿದ ತಕ್ಷಣ ಚಾನಲ್ ಪೂರ್ಣಗೊಳಿಸಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದರು.
ಚನ್ನಸಮುದ್ರ, ಬೊಮ್ಮನಹಳ್ಳಿ ಸೇರಿದಂತೆ ಸುತ್ತಲಿನ ಹಳ್ಳಿಗಳಿಗೆ ಚಾನಲ್ ಹಾದು ಹೊಗುವುದರಿಂದ ಭೂಮಿಗೆ ಬೆಲೆ ಬಂದಿದೆ. ಈಗಿನ ಸರ್ಕಾರ 1/4 ರಷ್ಟು ಪರಿಹಾರ ನೀಡುತ್ತಿದೆ. ಪರಿಹಾರ ಕಡಿಮೆಯಾದರೆ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು. ಮಧ್ಯ ಕರ್ನಾಟಕದ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ. ಹಳ್ಳಿಗಳಲ್ಲಿ ಜನರು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ನೀರಿಲ್ಲ ಎಂದರೆ ರೈತರಿಗೆ ಉಳಿಗಾಲವಿಲ್ಲ. ಹಾಗಾಗಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಅದಕ್ಕಾಗಿ ರೈತರು ಜಮೀನು ನೀಡುವುದು ಅನಿವಾರ್ಯವಾಗಿದೆ. ಸರ್ಕಾರ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಹೊಸದುರ್ಗ ಕ್ಷೇತ್ರದಲ್ಲಿ ರೈತರ ಜಮೀನುಗಳು ಜಾಸ್ತಿ ಪ್ರಮಾಣದಲ್ಲಿ ಭೂಸ್ವಾಧೀನಗೊಂಡಿವೆ. ಹಾಗಾಗಿ ಹೆಚ್ಚಿನ ಪರಿಹಾರಕ್ಕೆ ಹೋರಾಟ ನಡೆಸಬೇಕಿದೆ ಎಂದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಸುಮಾರು 35 ರೈತರ ಜಮೀನುಗಳನ್ನು ಗುರುತಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಗಂಗಮ್ಮ ಅವರ 30 ಗುಂಟೆ, ಶಿವಣ್ಣ ಅವರ 20 ಗುಂಟೆ ಹೊರತುಪಡಿಸಿದರೆ ಬೇರೆ ಎಲ್ಲ ಜಮೀನುಗಳು 10 ರಿಂದ 15 ಗುಂಟೆ ಇದೆ ಎಂದು ತಿಳಿಸಿದರು.
ಜಿಪಂ ಸದಸ್ಯ ಮಹೇಶ್, ಭೂಸ್ವಾಧಿಧೀನಾಧಿಕಾರಿ ಶ್ರೀಧರ್, ಮುಖ್ಯ ಇಂಜಿನಿಯರ್ ಸೋಮಶೇಖರ್, ತಹಶೀಲ್ದಾರ್ ನಾಗರಾಜ್, ಇಂಜಿನಿಯರ್ ಶಶಿಕಿರಣ್, ಎಲ್.ಬಿ. ರಾಜಶೇಖರ್ ಇದ್ದರು.