ಲಾಸನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್)ನ ನೂತನ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತದ ಪುರುಷರ ತಂಡವು ಮೂರನೇ ಸ್ಥಾನಕ್ಕೇರಿದ್ದರೆ ವನಿತೆಯರ ತಂಡ ಏಳನೇ ಸ್ಥಾನ ಪಡೆದಿದೆ.
ಒಟ್ಟಾರೆ 2771 ಅಂಕ ಗಳಿಸಿರುವ ಭಾರತ ಒಂದು ವರ್ಷದ ಬಳಿಕ ಮರಳಿ ಅಗ್ರ ಮೂರರೊಳಗಿನ ಸ್ಥಾನ ಪಡೆಯಿತು. ಕಳೆದ ತಿಂಗಳು ಚೆನ್ನೈ ಯಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಸಾಧನೆ ಯಿಂದಾಗಿ ಭಾರತ ಈ ಸ್ಥಾನಕ್ಕೆ ಮರಳಲು ಸಾಧ್ಯವಾಯಿತು. ಭಾರತ ಈ ಕೂಟದಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಿತ್ತು. ಆರು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಇನ್ನೊಂದು ಪಂದ್ಯವನ್ನು ಡ್ರಾಗೊಳಿಸಿತ್ತು.
ಇದೇ ವೇಳೆ ಸ್ವಲ್ಪದರಲ್ಲಿ ಯುರೋ ಹಾಕಿ ಪ್ರಶಸ್ತಿ ಗೆಲ್ಲಲು ವಿಫಲ ವಾದ ಇಂಗ್ಲೆಂಡ್ ತಂಡವು ಅಗ್ರ ಮೂರ ರೊಳಗಿನ ಸ್ಥಾನದಿಂದ ಕೆಳಗೆ ಜಾರಿತು. ಫೈನಲ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ 1-2 ಗೋಲುಗಳಿಂದ ಸೋಲನ್ನು ಕಂಡಿದ್ದ ಇಂಗ್ಲೆಂಡ್ 2745 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಾರಿತು. ಬೆಲ್ಜಿಯಂ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಸೋತಿದ್ದರೂ ಅಮೋಘ ನಿರ್ವಹಣೆ ನೀಡಿ ಫೈನಲಿಗೇರಿದ್ದ ಇಂಗ್ಲೆಂಡ್ ತಂಡವು ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಸೋತ ಕಾರಣ ಹಿನ್ನೆಡೆ ಅನುಭವಿಸಿತು.
ಯುರೋಹಾಕಿ ಚಾಂಪಿಯನ್ಸ್ ನೆದರ್ಲೆಂಡ್ಸ್ ತಂಡವು 3113 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಹಾಕಿ ಪ್ರೊ ಲೀಗ್‌ನ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್ಸ್ ತಂಡವು ಈ ವರ್ಷದ ಎಫ್ಐಎಚ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ ಸಾಧನೆ ಮಾಡಿದೆ. ರ್‍ಯಾಂಕಿಂಗ್‌ನಲ್ಲಿ ನೆದರ್ಲೆಂಡ್ಸ್ ತಂಡದ ಪ್ರಾಬಲ್ಯದಿಂದಾಗಿ ಬೆಲ್ಜಿಯಂ ದ್ವಿತೀಯ ಸ್ಥಾನ ಪಡೆಯಿತು. ಜರ್ಮನಿ ಮತ್ತು ಆಸ್ಟ್ರೇಲಿಯ ಅನುಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದರೆ ಆರ್ಜೆಂಟೀನಾ ಏಳನೇ ಸ್ಥಾನದಲ್ಲಿದೆ.
ವನಿತೆಯರ ರ್‍ಯಾಂಕಿಂಗ್
ನೆದರ್ಲೆಂಡ್ಸ್‌ಗೆ ಅಗ್ರಸ್ಥಾನ
ದಾಖಲೆ 12ನೇ ಬಾರಿ ಯುರೋ ಹಾಕಿ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್ಸ್ ತಂಡವು ವನಿತೆಯರ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯ ದ್ವಿತೀಯ ಮತ್ತು ಆರ್ಜೆಂಟೀನಾ ಮೂರನೇ ಸ್ಥಾನದಲ್ಲಿದೆ. ಯುರೋಹಾಕಿಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಬೆಳ್ಳಿಯ ಪದಕ ಜಯಿಸಿದ್ದ ಬೆಲ್ಜಿಯಂ ಜರ್ಮನಿಯನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ. ಭಾರತೀಯ ವನಿತಾ ತಂಡವು ಒಂದು ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನದಲ್ಲಿದೆ.