Advertisement
ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯಿಂದ ಎರಡು ಹಂತದಲ್ಲಿ ಸಂಸ್ಕರಿಸಿದ ನೀರನ್ನು 114 ಕಿ.ಮೀ. ಉದ್ದ ಅಳವಡಿಸಿರುವ ಪೈಪ್‌ಲೈನ್ ಮೂಲಕ ಬಾಗಲೂರುನಿಂದ ಜಿಲ್ಲೆಯ ಇತರೆ ಕೆರೆಗಳಿಗೆ ನೀರು ಪಂಪ್ ಮಾಡಲು ಪಂಪ್‌ಹೌಸ್ ನಿರ್ಮಿಸಿರುವ ಕಂದವಾರ ಕೆರೆಗೆ ಬಂದಿದ್ದು, ಕೆರೆ ನೀರು ಹರಿಯುವುದನ್ನು ತಾಲೂಕಿನ ಜನತೆ ನೋಡಿ ಸಂತಸ ಪಟ್ಟರು.
Related Articles
Advertisement
ಸಂತಸ, ಆತಂಕದಿಂದಲೇ ವ್ಯಾಲಿ ನೀರಿಗೆ ಸ್ವಾಗತ: ಈ ಹಿಂದೆ ಕೋಲಾರಕ್ಕೆ ಹರಿಸಿದ್ದ ಕೆ.ಸಿ.ವ್ಯಾಲಿ ನೀರು ಬಹುತೇಕ ಕಪ್ಪು ಬಣ್ಣದ ಜೊತೆಗೆ ವಾಸನೆಯಿಂದ ಕೂಡಿದ್ದ ನೀರು ಹರಿದು ಭಾಗದ ರೈತರಲ್ಲಿ, ಸಾರ್ವಜನಿಕರಲ್ಲಿ ಚರ್ಚೆಗೆ, ಆತಂಕಕ್ಕೆ ಕಾರಣವಾಗಿತ್ತು. ಆದರೆ ಜಿಲ್ಲೆಗೆ ಹರಿಸಿರುವ ಹೆಚ್‌ಎನ್ ವ್ಯಾಲಿ ನೀರು ಯಾವುದೇ ವಾಸನೆ ಇಲ್ಲದಿರುವುದು ಈ ಭಾಗದ ಜನರಲ್ಲಿ ಸಮಾಧಾನ ತಂದಿದೆ. ಆದರೆ ಸದ್ಯಕ್ಕೆ ಇದರ ಪರಿಣಾಮ ಏನು ಇಲ್ಲ.
ಚಿಕ್ಕಬಳ್ಳಾಪುರ ತಾಲೂಕಿನ ಜನತೆ ಸಂತಸದ ಜೊತೆಗೆ ಆತಂಕದಿಂದಲೇ ವ್ಯಾಲಿ ನೀರನ್ನು ಸ್ವಾಗತ ಮಾಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನೀರಿನ ಗುಣಮಟ್ಟದ ವಿಚಾರದಲ್ಲಿ ಸಂಸ್ಕೃರಿತ ಕೊಳಚೆ ನೀರು ಜಿಲ್ಲೆಯ ಜನ ಜೀವನದ ಮೇಲೆ ಯಾವ ಪರಿಣಾಮ ದುಷ್ಪರಿಣಾಮ ಬೀರುತ್ತದೆ? ಇಲ್ಲ ಅಂತರ್ಜಲ ವೃದ್ಧಿಯಾಗಿ ಜಿಲ್ಲೆಯ ರೈತಾಪಿ ಜನರ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
2017ರಲ್ಲಿ ಯೋಜನೆಗೆ ಸಿದ್ದರಾಮಯ್ಯ ಶಂಕು: 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಳಂಬ ಆಗುತ್ತದೆ ಎಂದೇಳಿ 2017ರ ಸೆ.18 ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, 883 ಕೋಟಿ ರೂ. ವೆಚ್ಚದ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗಿನ ಜಲ ಸಂಪನ್ಮೂಲ ಸಚಿವರಾಗಿ ಟಿ.ಬಿ.ಜಯಚಂದ್ರ ಇದ್ದು ನಗರದ ಹೊರ ವಲಯದ ಸೋಲಾಲಪ್ಪನ ದಿನ್ನೆ ಸಮೀಪ ಆಗಿನ ಶಾಸಕ ಸದ್ಯ ನೂತನ ಸಚಿವರಾಗಿರುವ ಡಾ.ಕೆ.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಶಂಕುಸ್ಥಾಪನೆಗೊಂಡ ಬರೋಬ್ಬರಿ ಎರಡು ವರ್ಷ 5 ತಿಂಗಳಿಗೆ ಯೋಜನೆ ಪೂರ್ಣಗೊಂಡು ನೀರು ಹರಿಯುತ್ತಿದೆ.
ಪ್ರತಿ ನಿತ್ಯ 210 ದಶಲಕ್ಷ ಲೀ. ಸರಬರಾಜು: ಹೆಬ್ಬಾಳ ನಾಗವಾರ ಸಂಸ್ಕೃರಿತ ತ್ಯಾಜ್ಯ ನೀರಾವರಿ ಯೋಜನೆಯಿಂದ ಜಿಲ್ಲೆಯ ಕಂದವಾರ ಕೆರೆಗೆ ಬಾಗಲೂರು ಕೆರೆಯಿಂದ ಪ್ರತಿ ನಿತ್ಯ 210 ದಶಲಕ್ಷ ಲೀ.ನೀರು ಸರಬರಾಜುಗೊಳ್ಳಲಿದೆ. ವಾರ್ಷಿಕ 2.70 ಟಿಎಂಸಿ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಒಟ್ಟು 65 ಕೆರೆಗಳಿಗೆ ನೀರು ಸರಬರಾಜು ಆಗಲಿದ್ದು ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು 25, ಗೌರಿಬಿದನೂರು 8, ಶಿಡ್ಲಘಟ್ಟ 9, ಗುಡಿಬಂಡೆ 3 ಕೆರೆಗಳಿಗೆ ಈ ನೀರು ಹರಿಯಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ: ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯ ಕಾಮಗಾರಿ ಮುಗಿದು ಕೆರೆಗೆ ನೀರು ಹರಿದಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಭಾಗದ ನೀರಿನ ಸಮಸ್ಯೆ ಪರಿಹರಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ 44 ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ರೂ. ವೆಚ್ಚದ ಹೆಚ್‌ಎನ್ ವ್ಯಾಲಿ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದ್ದೆ. ಯೋಜನೆ ಕಾಮಗಾರಿ ಪೂರ್ಣಗೊಂಡು ಇಂದು ಕಂದವಾರ ಕೆರೆಗೆ ನೀರು ಹರಿಯುತ್ತಿರುವುದು ನನ್ನಲ್ಲಿ ಸಂತಸ ಮೂಡಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ಕಂದವಾರ ಕೆರೆಗೆ ಹೆಚ್‌ಎನ್ ವ್ಯಾಲಿ ನೀರು ಹರಿಯುತ್ತಿರುವ ಛಾಯಾಚಿತ್ರಗಳನ್ನು ಟ್ಯಾಗ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ನೂತನ ಸಚಿವ ಸುಧಾಕರ್‌ರಿಂದ ಕೆರೆಗೆ ಪೂಜೆ: ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸುವ ಕಂದವಾರ ಕೆರೆಗೆ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯಿಂದ ನೀರು ಬರುತ್ತಿದ್ದಂತೆ ಗುರುವಾರವಷ್ಟೇ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ಬಂಡಹಳ್ಳಿಯ ಸಮೀಪ ನೀರು ಹರಿಸಲು ನಿರ್ಮಿಸಿರುವ ಛೇಂಬರ್ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಸುಧಾಕರ್, ಹಿಂದಿನ ಸರ್ಕಾರದಲ್ಲಿ ಸಾಕಷ್ಟು ಹೋರಾಡಿ ರೂಪಿಸಿದ ಈ ಯೋಜನೆ ಇಂದು ಸಕಾರಗೊಂಡು ಕಂದವಾರಕ್ಕೆ ನೀರು ಹರಿದಿರುವುದು ನನಗೆ ಬಹಳ ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಸಚಿವರು ಬೆಂಬಲಿಗರು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ಉದಯವಾಣಿ ವಿಶೇಷ ವರದಿ: 883 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಹೆಬ್ಬಾಳ ನಾಗವಾರ ಸಂಸ್ಕೃರಿತ ತ್ಯಾಜ್ಯ ನೀರಾವರಿ ಯೋಜನೆಯಡಿ ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡು ಕಂದವಾರ ಕೆರೆಗೆ ಗುರುವಾರ ನೀರು ಹರಿಸುವ ಕುರಿತು ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಜ.5 ರಂದೇ “ಕಂದವಾರ ಕೆರೆಗೆ ನಾಳೆ ಹೆಚ್‌ಎನ್ ವ್ಯಾಲಿ ನೀರು’ ಶೀರ್ಷಿಕೆಯಡಿ ವಿಶೇಷವಾಗಿ ಯೋಜನೆಯ ಕುರಿತು ಸಮಗ್ರ ವರದಿಯನ್ನು ಪ್ರಕಟಿಸಿ ಜಿಲ್ಲೆಯ ಜನರ ಗಮನ ಸೆಳೆದಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.