Advertisement

ತಕ್ಷಣ ಗಡಿ ಉಸ್ತುವಾರಿಗೆ ಸಚಿವರ ನೇಮಿಸಿ: ಎಚ್‌.ಕೆ. ಪಾಟೀಲ್

09:23 PM Nov 30, 2022 | Team Udayavani |

ಗದಗ: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಮುಖ್ಯಮಂತ್ರಿಗಳು ಕೂಡಲೇ ಗಡಿ ಉಸ್ತುವಾರಿಗೆ ಸಚಿವರನ್ನು ನೇಮಿಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿಯೂ ಆಗಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಎಚ್‌.ಕೆ. ಪಾಟೀಲ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಯಥಾಸ್ಥಿತಿ ಇಲ್ಲವೇ ಮಹಾಜನ ವರದಿಯೇ ಅಂತಿಮ. ಈ ನಿಟ್ಟಿನಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ.

ಮಾತುಕತೆ ಸಾಧ್ಯವೇ ಇಲ್ಲ. ಸದ್ಯಕ್ಕೆ ಮತ್ತೆ ಚರ್ಚೆಯಾಗುತ್ತಿರುವ ಗಡಿ ಕ್ಯಾತೆ ವಿವಾದ ಎದ್ದ ಸಂದರ್ಭದಲ್ಲಿ ಸರ್ಕಾರದವರು ನಿರ್ಧಾರ ತೆಗೆದುಕೊಳ್ಳಲಿ. ಸರ್ಕಾರದ ಬದಲಾಗಿ ಎರಡೂ ರಾಜ್ಯಗಳ ರಾಜ್ಯಪಾಲರು ಮಾತನಾಡಲು ಅನುಮತಿ ನೀಡಿದವರಾರು? ಉಭಯ ರಾಜ್ಯಪಾಲರ ಮಧ್ಯೆ ಗಡಿ ಕುರಿತು ನಡೆದ ಮಾತುಕತೆಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದರು.

ಗಡಿ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವಿದೆ. ಆದರೆ, ಅದನ್ನು ವಿಚಾರಣೆಗೆ ತೆಗೆದುಕೊಳ್ಳಬೇಕೋ ಅಥವಾ ಬಿಡಬೇಕೋ ಎಂಬುದೇ ಚರ್ಚೆ ನಡೆಯುತ್ತಿದೆ. ಅಂತಹ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರದ ಕೆಲವರು ಖ್ಯಾತೆ ತೆಗೆದಿದ್ದಾರೆ. ಗಡಿಗೆ ಸಂಬಂಧಿಸಿದಂತೆ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಒಟ್ಟು ನಿರ್ಣಯ ಮಾಡಿದ್ದೇವೆ.

ಯಥಾಸ್ಥಿತಿ ಇಲ್ಲವೇ ಮಹಾಜನ ವರದಿ ಎಂಬುದು ಸರ್ವಾನುಮತದ ನಿರ್ಣಯವಾಗಿದೆ. ಅದನ್ನು ಬಿಟ್ಟು ಯಾವುದೋ ಒಂದು ಹಳ್ಳಿಯಲ್ಲಿ ಠರಾವ್‌ ಅಥವಾ ಪ್ರತಿಭಟನೆ ಮೂಲಕ ಮತ್ತೊಂದು ರಾಜ್ಯ ಸೇರುತ್ತೇವೆ ಎಂಬುದರ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂಬ ಸಿಎಂ ಹೇಳಿಕೆ ಸಲ್ಲದು. ಈ ರೀತಿಯ ಮಾತುಕತೆ ಸದನದಲ್ಲಿ ಕೈಗೊಂಡ ನಿರ್ಣಯಕ್ಕೆ ವಿರುದ್ಧವಾದುದು.

Advertisement

ಮಹಾಜನ್‌ ವರದಿಯಿಂದ ನಮಗೂ ಕೆಲವು ನಷ್ಟವಾದರೂ ಅಂತಿಮವಾಗಿ ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಯಥಾಸ್ಥಿತಿ. ಅದನ್ನು ಬಿಟ್ಟು ಚರ್ಚೆ, ಮಾತುಕತೆ ಸಾಧ್ಯವೇ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.