Advertisement

ಜೆಡಿಎಸ್‌ ಹೊಣೆ ಹೊತ್ತ ಎಚ್.ಕೆ.ಕುಮಾರಸ್ವಾಮಿ

02:44 AM Jul 05, 2019 | Team Udayavani |

ಬೆಂಗಳೂರು: ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ನಿರೀಕ್ಷೆಯಂತೆ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಹಾಗೂ ಯುವ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ನಿಖೀಲ್ ಕುಮಾರಸ್ವಾಮಿ ನೇಮಕಗೊಂಡಿದ್ದಾರೆ.

Advertisement

ಮಧು ಬಂಗಾರಪ್ಪ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಶಾಸಕ ಗೋಪಾಲಯ್ಯ ಹಾಗೂ ಮಾಜಿ ಸಚಿವ ಎಂ.ಎ.ನಬಿ ಅವರನ್ನು ಹಿರಿಯ ಉಪಾಧ್ಯಕ್ಷರಾಗಿ ಹನೂರು ಮಂಜುನಾಥ್‌ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಷ್ಟೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. ನೂತನ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿಯವರಿಗೆ ನಿರ್ಗಮಿತ ಅಧ್ಯಕ್ಷ ಎಚ್.ವಿಶ್ವನಾಥ್‌ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು. ಯುವ ಘಟಕದ ಅಧ್ಯಕ್ಷ ನಿಖೀಲ್ಕುಮಾರಸ್ವಾಮಿಗೆ ಮಧು ಬಂಗಾರಪ್ಪ ಪಕ್ಷದ ಬಾವುಟ ನೀಡಿ ಶುಭ ಕೋರಿದರು.

ಇದೇ ವೇಳೆ ಪಕ್ಷದ ಅಲ್ಪಸಂಖ್ಯಾತರ ಘಟಕಕ್ಕೆ ಬೆಳಗಾವಿಯ ನಾಸೀರ್‌ ಭಗವಾನ್‌, ಬೂತ್‌ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು, ಯುವ ಘಟಕದ ಕಾರ್ಯಾಧ್ಯಕ್ಷರಾಗಿ ನೂರ್‌ ಅಹ್ಮದ್‌, ಮಹಾಪ್ರಧಾನ ಕಾರ್ಯ ದರ್ಶಿಯಾಗಿ ಶರಣ್‌ಗೌಡ ಕುಂದಕ‌ೂರ್‌, ಉಪಾಧ್ಯಕ್ಷರಾಗಿ ನರಸಿಂಹಮೂರ್ತಿರನ್ನು ನೇಮಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡರು, ಲೋಕಸಭೆ ಸೋಲಿನ ಹಿನ್ನೆಲೆಯಲ್ಲಿ ಎಚ್.ವಿಶ್ವನಾಥ್‌ ಅವರು ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡಿದ್ದರು. ಆ ಸ್ಥಾನಕ್ಕೆ ದಲಿತ ಸಮು ದಾಯದ ಎಚ್.ಕೆ. ಕುಮಾರಸ್ವಾಮಿಯವರನ್ನು ನೇಮಿಸಿದ್ದೇನೆ. ಐದು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕೆಲಸ ಮಾಡಿರುವ ಅವರು ಪಕ್ಷ ಮುನ್ನಡೆಸಲಿದ್ದಾರೆ ಎಂದು ಹೇಳಿದರು. ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶರಣ್‌ಗೌಡ ಅವರನ್ನು ನೇಮಿಸಲು ಬಯಸಿದ್ದೆ. ಆದರೆ, ನಿಖೀಲ್ ಅವರನ್ನೇ ನೇಮಿಸಬೇಕು ಎಂದು ಅವರೆಲ್ಲಾ ಒತ್ತಾಯ ಮಾಡಿದ್ದರಿಂದ ಮಣಿಯಬೇಕಾಯಿತು ಎಂದು ಹೇಳಿದರು.

Advertisement

ಜೆಡಿಎಸ್‌ ರಾಜ್ಯ ಘಟಕಕ್ಕೆ ಮಹಾಪ್ರಧಾನ ಕಾರ್ಯದರ್ಶಿ ನೇಮಕ ಸದ್ಯದಲ್ಲೇ ಮಾಡಲಾಗುವುದು. ಉಳಿದ ಪದಾಧಿಕಾರಿಗಳ ನೇಮಕವನ್ನು ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರು ಮಾಡಲಿದ್ದಾರೆ ಎಂದು ತಿಳಿಸಿದರು.

ಸಮನ್ವಯ ಸಮಿತಿಗೆ ಸೇರಿಸಿ: ನಿರ್ಗಮಿತ ಅಧ್ಯಕ್ಷ ಎಚ್.ವಿಶ್ವನಾಥ್‌ ಮಾತನಾಡಿ, ಪಕ್ಷ ಮತ್ತು ಸರ್ಕಾರ, ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಸಚಿವರ ನಡುವೆ ಸಮನ್ವಯತೆ ಇದ್ದಾಗ ಮಾತ್ರ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಲು ಎರಡೂ ಪಕ್ಷದ ಸಿದ್ಧಾಂತ, ಕಾರ್ಯಕ್ರಮ ಜನರಿಗೆ ತಲುಪಲು ಸಾಧ್ಯ. ಹೊಸ ಅಧ್ಯಕ್ಷರನ್ನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಸೇರ್ಪಡೆ ಮಾಡಲು ಮನವಿ ಮಾಡುತ್ತೇನೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರೂ ಸಮಿತಿಯಲ್ಲಿರಬೇಕು ಎಂದು ಹೇಳಿದರು.

ರಾಜ್ಯಾಧ್ಯಕ್ಷರಿಗೆ ಅಧಿಕಾರ ಬೇಕು: ಪಕ್ಷದ ರಾಜ್ಯಾಧ್ಯಕ್ಷರಿಗೆ ಸಂಪನ್ಮೂಲ, ಸ್ವಾತಂತ್ರ್ಯ, ಅಧಿಕಾರ ಬೇಕು. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ವಿಶ್ವನಾಥ್‌ ತಿಳಿಸಿದರು.

ದೇವೇಗೌಡರನ್ನು ಒಳಗೊಂಡ ಕೋರ್‌ ಕಮಿಟಿ ರಚನೆಯಾಗಲಿದ್ದು ಅದರಲ್ಲಿ ನಾವೆಲ್ಲಾ ಇದ್ದು ಮಾರ್ಗದರ್ಶನ ನೀಡುತ್ತೇವೆ ಎಂದು ಹೇಳಿದರು.

ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಪಕ್ಷವು ನನಗೆ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿತ್ತು. ಪ್ರಾಮಾಣಿಕವಾಗಿ ನನ್ನ ಕೆಲಸ ನಾನು ಮಾಡಿದ್ದೆ. ಇದೀಗ ಕಾರ್ಯಾಧ್ಯಕ್ಷ ಹೊಣೆಗಾರಿಕೆ ನೀಡಿದೆ. ಹಿರಿಯರಾದ ಎಚ್.ಕೆ.ಕುಮಾರಸ್ವಾಮಿ ಯವರ ಜತೆಗೂಡಿ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.

ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಳ್ಳಲು ನಿಖೀಲ್ ಅವರಿಗೆ ಇಷ್ಟ ಇರಲಿಲ್ಲ. ನಾವೇ ಒತ್ತಾಯ ಮಾಡಿದೆವು. ಅವರ ನೇಮಕಕ್ಕೆ ಬೇರೆ ರೀತಿ ಅರ್ಥ ಕಲ್ಪಿಸಬೇಕಿಲ್ಲ. ಅವರ ಅಗತ್ಯತೆ ಪಕ್ಷಕ್ಕೆ ಇದೆ ಎಂದು ಹೇಳಿದರು.

ಸರ್ಕಾರಕ್ಕೆ ಅಪಾಯ ಇಲ್ಲ: ಎಚ್‌ಡಿಡಿ
ಸಮ್ಮಿಶ್ರ ಸರ್ಕಾರಕ್ಕೆ ಆಪಾಯ ಇಲ್ಲ. ಹಾಗೆಂದು ಸಮಸ್ಯೆಯೇ ಇಲ್ಲ ಎಂದಲ್ಲ, ಅಲ್ಪಸ್ವಲ್ಪ ಸಮಸ್ಯೆ ಇವೆ, ಅವೆಲ್ಲವನ್ನೂ ನಿಭಾಯಿಸುವ ಶಕ್ತಿ ನನಗೆ, ಸಿದ್ದರಾಮಯ್ಯ ಅವರಿಗೆ ಹಾಗೂ ಎರಡೂ ಪಕ್ಷದ ನಾಯಕರಿಗೆ ಇದೆ. ಹೀಗಾಗಿ ಸರ್ಕಾರ ಸುಸೂತ್ರವಾಗಿ ನಡೆಯಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು. ಹಿಂದೂಸ್ಥಾನದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರೈತರ ಸಾಲ ಸಹಕಾರ ಸಂಘ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಮನ್ನಾ ಮಾಡಿದ್ದು ಸಮ್ಮಿಶ್ರ ಸರ್ಕಾರ. ಶುಕ್ರವಾರ ನರೇಂದ್ರಮೋದಿ ಅವರ ಎರಡನೇ ಅವಧಿಯ ಸರ್ಕಾರದ ಮೊದಲ ಕೇಂದ್ರ ಬಜೆಟ್ ಮಂಡನೆಯಾಗಲಿದೆ, ಏನೇನೂ ಕೊಡ್ತಾರೋ ನೋಡೋಣ ಎಂದರು.

ಮಾಹಿತಿ ಇಲ್ಲ: ಪ್ರಜ್ವಲ್

ನಿಖೀಲ್ ಕುಮಾರಸ್ವಾಮಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕ ಗೊಂಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ದೆಹಲಿಯಲ್ಲಿ ಗುರುವಾರ ಬೆಳಗ್ಗೆ ಹೇಳಿಕೆ ನೀಡಿದ ಸಂಸದ ಪ್ರಜ್ವಲ್ ರೇವಣ್ಣ , ಆ ನಂತರ ಮಧ್ಯಾಹ್ನದ ವೇಳೆಗೆ ನೇಮಕಾತಿ ಬಗ್ಗೆ ಮೊದಲೇ ನನಗೆ ಗೊತ್ತಿರಲಿಲ್ಲ. ಪಕ್ಷದ ನಾಯಕರ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡೆ. ನಿಖೀಲ್ ನೇಮಕದಿಂದ ನನಗೇನೂ ಬೇಸರ ಅಥವಾ ಅಸಮಾಧಾನ ಇಲ್ಲ. ಎಲ್ಲರೂ ಸೇರಿ ಪಕ್ಷ ಕಟ್ಟಲಿದ್ದೇವೆ ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next