ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್‌ನ ಪೋಸ್ಟರ್ ಬಾಯ್ ಸಮೀರ್ ಭಟ್ ಸೇರಿದಂತೆ ಇಬ್ಬರು ಹಿಜ್ಬುಲ್ ಉಗ್ರರನ್ನು ಹತ್ಯೆಗೈಯಲಾಗಿದೆ. ಇದೇ ವೇಳೆ, ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತಡೆಯಲು ಸ್ಥಳೀಯರು ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಸೇನೆ ನಡೆಸಿದ ಗುಂಡಿನ ದಾಳಿಗೆ ಓರ್ವ ಬಲಿಯಾಗಿದ್ದಾನೆ. ಭಾರತೀಯ ಸೇನೆಯ ಇಬ್ಬರು ಯೋಧರಿಗೆ ಹಾಗೂ ಕಲ್ಲು ತೂರಿದ ಹಲವರಿಗೂ ಗಾಯಗಳಾಗಿವೆ.
ಪುಲ್ವಾಮಾದ ದ್ರಬ್‌ಗಾಂವ್‌ನಲ್ಲಿನ ಮನೆಯೊಂದರಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಗುಪ್ತಚರ ದಳದಿಂದ ಲಭ್ಯವಾಗಿತ್ತು. ಈ ಮಾಹಿತಿ ಆಧಾರದಲ್ಲಿ ಶೋಧ ಕಾರ್ಯಾಚಾರಣೆ ನಡೆಸುತ್ತಿದ್ದಾಗ, ಮನೆಯೊಂದರ ಸಮೀಪ ಬರುತ್ತಿದ್ದಂತೆ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸೇನೆಯ ಇಬ್ಬರು ಅಧಿಕಾರಿಗಳಿಗೆ ಗಾಯವಾಗಿದೆ. ಈ ಕಾರ್ಯಾಚರಣೆಗೆ ರಾಜ್ಯ ಪೊಲೀಸರು ಹಾಗೂ ಸಿಆರ್‌ಪಿಎಫ್ ಕೂಡ ನೆರವಾಗಿತ್ತು.
ಕಾರ್ಯಾಚರಣೆ ವೇಳೆ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲದೆ, ದಾಳಿ ನಡೆಸುತ್ತಿರುವ ಮನೆಗೆ ನುಗ್ಗಲು ಪ್ರಯತ್ನಿಸಿದರು. ಪ್ರತಿಭಟ ನಾಕಾರರು ಮನೆಗೆ ನುಗ್ಗಿದರೆ, ಉಗ್ರರು ತಪ್ಪಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರ ಮೇಲೆ ಸೇನೆ ಗುಂಡಿನ ದಾಳಿ ನಡೆಸಬೇಕಾಯಿತು. ಅಲ್ಲದೆ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಬೇಕಾಗಿ ಬಂದ ಸನ್ನಿವೇಶದ ಬಗ್ಗೆ ವಿಷದವಾಗಿ ತನಿಖೆ ನಡೆಸಲಾಗುತ್ತದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಬಂದ್ ಎಚ್ಚರಿಕೆ ಕಲ್ಲು ತೂರಾಟ ನಡೆಸಿದ ಯುವಕನನ್ನು ಹತ್ಯೆ ಗೈದಿದ್ದಕ್ಕೆ ಪ್ರತ್ಯೇಕತಾವಾದಿ ಮುಖಂಡರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸೈಯದ್ ಅಲಿ ಶಾ ಗಿಲಾನಿ, ಮೀರ್ವೇಜ್ ಉಮರ್ ಫಾರೂಕ್, ಯಾಸೀನ್ ಮಲಿಕ್ ಈ ಬಗ್ಗೆ ಮಾತ ನಾ ಡಿದ್ದು, ಮಂಗಳವಾರ ಶ್ರೀನಗರ ಬಂದ್‌ಗೆ ಕರೆ ನೀಡಿದ್ದಾರೆ.
ಹೆಚ್ಚುತ್ತಿದೆ ಗನ್ ಹಿಡಿಯುವವರ ಸಂಖ್ಯೆ: ಜಮ್ಮು ಕಾಶ್ಮೀರದಲ್ಲಿ ಉಗ್ರವಾದಕ್ಕೆ ಮೊರೆಹೋಗುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಏಪ್ರಿಲ್ ಒಂದರಂದು ತೀವ್ರ ದಾಳಿ ನಡೆಸಿದ ಸೇನೆ 13 ಉಗ್ರರನ್ನು ಸದೆಬಡಿದಿತ್ತು. ಆಗ ಇದು ಉಗ್ರರಿಗೆ ಒಂದು ಪಾಠವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಉಗ್ರ ಸಂಘಟನೆ ಸೇರುವ ಯುವಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಏಪ್ರಿಲ್‌ನಲ್ಲೇ ಒಟ್ಟು 20 ಯುವಕರು ಉಗ್ರ ಸಂಘಟನೆ ಸೇರಿದ್ದಾರೆ ಎನ್ನಲಾಗಿದೆ. ಇದು ಸೇನೆಗೆ ಭಾರಿ ಆತಂಕದ ವಿಷಯವಾಗಿದೆ.
ಯಾರು ಈ ಸಮೀರ್ ಭಟ್?
ಸಮೀರ್ ಭಟ್ ಅಲಿಯಾಸ್ ಸಮೀರ್ ಟೈಗರ್ ಕಾಶ್ಮೀರದಲ್ಲಿ ಕುಖ್ಯಾತ ಹೆಸರು. ಈತ 2016ರಲ್ಲಿ ಹಿಜ್ಬುಲ್ ಮುಜಾಹಿದೀನ್ ಸೇರಿದ್ದ. ಅದಕ್ಕೂ ಮುನ್ನ ಈತ ಕಲ್ಲು ತೂರಾಟಗಾರ. ಕಲ್ಲು ತೂರಿದ ಪ್ರಕರಣದಲ್ಲಿ 2016ಕ್ಕೂ ಮುನ್ನ ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದ. ಪ್ರತಿ ಬಾರಿಯೂ ನಾಲ್ಕೈದು ದಿನಗಳಲ್ಲೇ ಈತನನ್ನು ಬಿಡುಗಡೆ ಮಾಡಲಾಗುತ್ತಿತ್ತು. ಎ.7 ರಂದು ಈತ ಮನೆ ಬಿಟ್ಟು ಹೋದಾಗ, ಪೊಲೀಸರ ಹಿಂಸೆಯನ್ನು ತಾಳದೇ ಈತ ಮನೆ ಬಿಟ್ಟಿದ್ದಾನೆ ಎಂದು ಈತನ ತಂದೆ ಮೊಹಮ್ಮದ್ ಮಕೂºಲ್ ಭಟ್ ಹೇಳಿದ್ದರು. ಸಮೀರ್ ಭಟ್ ಸಾಮಾಜಿಕ ಮಾಧ್ಯಮ ಗಳಲ್ಲೂ ಸಕ್ರಿಯನಾಗಿದ್ದ. ಈತ ಹಲವು ಫೋಟೋ ತೆಗೆಸಿ ಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದ. ಇತ್ತೀಚೆಗೆ ಉಗ್ರರ ಮಾಹಿತಿ ನೀಡಿದ ಸ್ಥಳೀಯ ಯುವಕನನ್ನು ಥಳಿಸಿದ್ದ ವಿಡಿಯೋ ಬಹಿರಂಗವಾಗಿತ್ತು. ಅಷ್ಟೇ ಅಲ್ಲ, ತನ್ನ ವಿರುದ್ಧ ಸೇನೆ ದಾಳಿ ನಡೆಸಲಿ ಎಂದು ಸವಾಲನ್ನೂ ಹಾಕಿದ್ದ. ಅಚ್ಚರಿಯ ಸಂಗತಿಯೆಂದರೆ ಸಮೀರ್ ದ್ರುಬ್‌ಗಾಂವ್‌ನ ನಿವಾಸಿಯಾಗಿದ್ದ. ಅದೇ ಗ್ರಾಮದಲ್ಲೇ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.