Advertisement

ಎಚ್‌ಐವಿ ಸೋಂಕಿತ ರಕ್ತ ಗರ್ಭಿಣಿಗೆ!​​​​​​​

06:00 AM Dec 27, 2018 | Team Udayavani |

ಚೆನ್ನೈ: ತಮಿಳುನಾಡಿನ ಸರ್ಕಾರಿ ಆಸ್ಪತ್ರೆ ಹಾಗೂ ಬ್ಲಿಡ್‌ ಬ್ಯಾಂಕ್‌ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಓರ್ವ ಮಹಿಳೆ ಹಾಗೂ ಮಗು ಜೀವನ ಪೂರ್ತಿ ಕಣ್ಣೀರು ಸುರಿಸುವಂತಾಗಿದೆ. 24 ವರ್ಷದ ಗರ್ಭಿಣಿಗೆ ತಮಿಳುನಾಡಿನ ವಿರುದುನಗರ ಜಿಲ್ಲೆ ಆಸ್ಪತ್ರೆಯ ಸಿಬ್ಬಂದಿ ಎಚ್‌ಐವಿ ಸೋಂಕಿತ ರಕ್ತವನ್ನು ನೀಡಿದ್ದಾರೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಈಗ ರಕ್ತ ಪಡೆಯುವುದಕ್ಕೇ ರೋಗಿಗಳು ಹೆದರುವಂತಾಗಿದೆ.

Advertisement

ಇಡೀ ರಾಜ್ಯದ 10 ಸರ್ಕಾರಿ ಹಾಗೂ ನಾಲ್ಕು ಖಾಸಗಿ ಬ್ಲಿಡ್‌ ಬ್ಯಾಂಕ್‌ಗಳ ರಕ್ತದ ಮಾದರಿಯನ್ನು ಮರು ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಏನಿದು ಘಟನೆ?: ಕಳೆದ ನವೆಂಬರ್‌ 30ರಂದು ದಾನಿಯೊಬ್ಬ ರಕ್ತವನ್ನು ನೀಡಿದ್ದ. ಈತನ ರಕ್ತವನ್ನು ಸರಿಯಾಗಿ ತಪಾಸಣೆ ಮಾಡದೇ ಆಸ್ಪತ್ರೆ ಸಿಬ್ಬಂದಿ ಪಡೆದಿದ್ದರು. ಎಚ್‌ಐವಿ ಸೋಂಕು ಇರುವುದು ರಕ್ತದಾನ ಮಾಡಿದ ವ್ಯಕ್ತಿಗೂ ತಿಳಿದಿರಲಿಲ್ಲ. ಆದರೆ ನಂತರ ವಿದೇಶದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ, ಮೆಡಿಕಲ್‌ ಚೆಕಪ್‌ ಮಾಡಿಸಿಕೊಳ್ಳಲು ಬಂದಾಗ ಎಚ್‌ಐವಿ ಪಾಸಿಟಿವ್‌ ಇರುವುದು ಕಂಡುಬಂದಿತ್ತು. ಇದು ತಿಳಿಯುತ್ತಿದ್ದಂತೆಯೇ ತಾನು ರಕ್ತ ನೀಡಿದ ಆಸ್ಪತ್ರೆಗೆ ಈ ವ್ಯಕ್ತಿ ಆಗಮಿಸಿ ಮಾಹಿತಿ ನೀಡಿದ. ಅಲ್ಲಿಯೂ ಮತ್ತೂಂದು ತಪಾಸಣೆ ಮಾಡಿದಾಗ ಎಚ್‌ಐವಿ ಪಾಸಿಟಿವ್‌ ಸಾಬೀತಾಗಿದೆ. ಆಗ ಈ ರಕ್ತವನ್ನು ಯಾರಿಗೆ ನೀಡಲಾಗಿದೆ ಎಂದು ಹುಡುಕಿದಾಗ ಶಿವಕಾಶಿ ಆಸ್ಪತ್ರೆಯಲ್ಲಿನ ಗರ್ಭಿಣಿಗೆ ನೀಡಿರುವುದು ತಿಳಿದುಬಂದಿದೆ. ಆಗ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿದಾಗ ಆಕೆ ಎಚ್‌ಐವಿ ಪಾಸಿಟಿವ್‌ ಆಗಿರುವುದು ತಿಳಿದುಬಂತು.

ಇನ್ನೊಂದು ಮೂಲಗಳ ಪ್ರಕಾರ, 2016 ರಲ್ಲೇ ಈತನಿಗೆ ಎಚ್‌ಐವಿ ಕಾಣಿಸಿಕೊಂಡಿತ್ತು. ಆದರೂ ಆತ ರಕ್ತದಾನ ಮಾಡುವಾಗ ಮಾಹಿತಿ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಈಗ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಗರ್ಭಿಣಿ ಹಾಗೂ ಆಕೆಯ ಪತಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ಶಿವಕಾಶಿ ಆಸ್ಪತ್ರೆಯ ಮೂವರು ಲ್ಯಾಬ್‌ ಟೆಕ್ನೀಶಿಯನ್‌ಗಳನ್ನು ಅಮಾನತು ಮಾಡಲಾಗಿದೆ. ಮಹಿಳೆಗೆ ಎಆರ್‌ಟಿ ಆರಂಭಿಸಲಾಗಿದ್ದು, ಆರಂಭದಲ್ಲೇ ಎಚ್‌ಐವಿ ಸೋಂಕು ಪತ್ತೆಯಾಗಿರುವುದರಿಂದ ನಿಯಂತ್ರಣದಲ್ಲಿಡಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ಆದರೆ ಮಗುವಿಗೆ ಎಚ್‌ಐವಿ ಸೋಂಕು ತಗುಲಿದೆಯೇ ಎಂಬುದನ್ನು ಪ್ರಸವದ ನಂತರವೇ ತಿಳಿಯಬೇಕಿದೆ. ಮಹಿಳೆಗೆ ಪರಿಹಾರ ಹಾಗೂ ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next