ಹ್ಯಾಮಿಲ್ಟನ್: ಭಾರತ ಕ್ರಿಕೆಟ್ ತಂಡದ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಅತೀ ಹೆಚ್ಚು ಏಕದಿನ ಶತಕಗಳ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಗಂಗೂಲಿ 308 ಏಕದಿನ ಪಂದ್ಯಗಳಿಂದ 22 ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮ 200 ಏಕದಿನ ಪಂದ್ಯಗಳಿಂದ 22 ಶತಕ ಸಿಡಿಸಿದ್ದಾರೆ. ಸದ್ಯ ಇವರಿಬ್ಬರು ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯರಲ್ಲಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (49 ಶತಕ) ಮೊದಲ ಹಾಗೂ ವಿರಾಟ್ ಕೊಹ್ಲಿ (39 ಶತಕ)ಎರಡನೇ ಸ್ಥಾನದಲ್ಲಿದ್ದಾರೆ. 5ನೇ ಏಕದಿನ ಪಂದ್ಯದ ವೇಳೆ ಭಾರತ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ನಾಯಕನಾಗಿ ತಂಡ ಮುನ್ನಡೆಸಿದ ರೋಹಿತ್ ಶರ್ಮಗೆ ದಾಖಲೆ ಬರೆಯುವ ಅವಕಾಶವಿತ್ತು. ಆದರೆ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರೋಹಿತ್ ಕೇವಲ 7 ರನ್‌ಗೆ ಔಟಾಗಿ ನಿರಾಶೆ ಮೂಡಿಸಿದ್ದರು. ಇದೀಗ ಭಾನುವಾರ ನಡೆಯಲಿರುವ ಅಂತಿಮ ಏಕದಿನ ಪಂದ್ಯದ ವೇಳೆ ಶತಕ ಬಾರಿಸಿ ದಾಖಲೆ ಮುರಿಯುವ ಅವಕಾಶ ಇದೆ.