ಉಡುಪಿ: ದೇಶದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರಿಂದ ಹಿಡಿದು ಉಡುಪಿಗೆ ಗುರುವಾರ ಆಗಮಿಸುವ ಈಗಿನ 14ನೇ ರಾಷ್ಟ್ರಪತಿ ರಾಮನಾಥ ಕೋವಿಂದರವರೆಗೆ ಸಂಪರ್ಕ ಹೊಂದಿದ ಸಮಕಾಲೀನ ಅಪರೂಪದ ಸ್ವಾಮಿಗಳು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು.
ಗ್ಯಾನಿ ಜೈಲ್ ಸಿಂಗ್ ರಾಷ್ಟ್ರಪತಿಗಳಾಗಿದ್ದ ಸಂದರ್ಭ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದಾಗ ಪೇಜಾವರ ಶ್ರೀಗಳ ವಿದ್ಯಾಗುರು ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರು ಪರ್ಯಾಯ ಪೀಠಾರೂಢರಾಗಿದ್ದರು (1986-87). ಈಗ ರಾಮನಾಥ ಕೋವಿಂದರು ಬರುವಾಗ ಶ್ರೀ ವಿದ್ಯಾ ಮಾನ್ಯರ ಪಟ್ಟಶಿಷ್ಯ ಶ್ರೀ ವಿದ್ಯಾಧೀಶ ತೀರ್ಥರು ಪರ್ಯಾಯ ಸ್ವಾಮಿಗಳು. ಹಿಂದಿನ ವಿವಿಧ ರಾಷ್ಟ್ರಪತಿಗಳು ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದರೂ, ಆ ಸಂದರ್ಭ ಪೇಜಾವರ ಶ್ರೀಗಳು ಉಪಸ್ಥಿತರಿದ್ದರೂ ಪೇಜಾವರ ಪರ್ಯಾಯದ ಅವಧಿಯಲ್ಲಿ ರಾಷ್ಟ್ರಪತಿಗಳಾಗಿ ಶ್ರೀಕೃಷ್ಣಮಠಕ್ಕೆ ಬಂದದ್ದು ಪ್ರಣವ್ ಮುಖರ್ಜಿ ಮಾತ್ರ. ಇದು 2017ರ ಜೂನ್ 18ರಂದು. ಮುಖರ್ಜಿಯವರು ಪೇಜಾವರ ಶ್ರೀಗಳ ಐದನೆಯ ಐತಿಹಾಸಿಕ ಪರ್ಯಾಯದ ಉತ್ತರಾರ್ಧ ಅವಧಿಯಲ್ಲಿ ಆಗಮಿಸಿದ್ದರು.
ಪೇಜಾವರ ಶ್ರೀಗಳ ವಿದ್ಯಾಗುರು ಶ್ರೀ ವಿದ್ಯಾಮಾನ್ಯತೀರ್ಥರು 1960ರ ದಶಕದಲ್ಲಿ ದಿಲ್ಲಿಯಲ್ಲಿ ನಡೆಸಿದ ಯಾಗದಲ್ಲಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಪಾಲ್ಗೊಂಡಿದ್ದರು. ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಯಾದಾಗ ಪೇಜಾವರ ಶ್ರೀಗಳು ಹೈದರಾಬಾದ್‌ನಲ್ಲಿ ಆಯೋಜಿಸಿದ ತಣ್ತೀಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿದ್ದರು.
ಇಂದಿರಾಗಾಂಧಿ, ಪಿ.ವಿ.ನರಸಿಂಹ ರಾವ್, ವಿ.ಪಿ.ಸಿಂಗ್, ಎಚ್.ಡಿ.ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿರುವಾಗ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಪೇಜಾವರ ಶ್ರೀಗಳು ಭೇಟಿ ಮಾಡಿದ್ದರು. ಇವರಲ್ಲಿ ಬಹುತೇಕರು ಉಡುಪಿಗೆ ಆಗಮಿಸಿದ್ದರು. ಪೇಜಾವರ ಶ್ರೀಗಳ ಪರ್ಯಾಯ ಅವಧಿಯಲ್ಲಿ (2000-01) ಪ್ರಧಾನಿಯಾಗಿದ್ದ ವಾಜಪೇಯಿಯವರು ರಾಜಾಂಗಣ ಉದ್ಘಾಟಿಸಿದ್ದರು.ಈಗ ರಾಮನಾಥ ಕೋವಿಂದ್ ಆಗಮಿಸುತ್ತಿರುವುದು ವಿಶೇಷವಾಗಿ ಕೇಂದ್ರ ಸಚಿವೆ ಉಮಾಶ್ರೀ ಭಾರತಿಯವರ ಪ್ರಯತ್ನದಿಂದ. ಪೇಜಾವರ ಶ್ರೀಗಳಿಂದ ಸನ್ಯಾಸ ಸ್ವೀಕರಿಸಿದ ಉಮಾಶ್ರೀ ಭಾರತಿಯವರು ಗುರುಭಕ್ತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ರಾಷ್ಟ್ರಪತಿಗಳಾಗಿದ್ದ ಆರ್. ವೆಂಕಟ್ರಾಮನ್ ಉಪರಾಷ್ಟ್ರಪತಿಗಳಾಗಿದ್ದಾಗ ಪೇಜಾವರ ಶ್ರೀಗಳ ಮೂರನೆಯ ಪರ್ಯಾಯದಲ್ಲಿ (1984-85 ಅವಧಿ, 7-12- 1985ರಂದು) ಶ್ರೀಕೃಷ್ಣಧಾಮ ಛತ್ರ ಉದ್ಘಾಟಿಸಿದ್ದರು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುವಾಗ ದಿಲ್ಲಿಯಲ್ಲಿ ಶ್ರೀಗಳನ್ನು ಭೇಟಿ ಮಾಡಿದ್ದರು. ಡಾ| ಶಂಕರದಯಾಳ್ ಶರ್ಮ ಅವರು ಪುತ್ತಿಗೆ ಮಠದ ಪರ್ಯಾಯದಲ್ಲಿ (1992-93) ಗೀತಾ ಮಂದಿರಕ್ಕೆ ಶಿಲಾನ್ಯಾಸ ನಡೆಸಿದ್ದರು. ಅದಕ್ಕೂ ಹಿಂದೆ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ.ಜತ್ತಿ, ಕೃಷ್ಣಕಾಂತ್, ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಡಾ|ಅಬ್ದುಲ್ ಕಲಾಂ (ಕಾಣಿಯೂರು ಮಠದ ಪರ್ಯಾಯ 2014-15) ಉಡುಪಿಗೆ ಆಗಮಿಸಿದ್ದರು. ಪೇಜಾವರ ಶ್ರೀಗಳವರನ್ನು ಡಾ| ಶಂಕರದಯಾಳ್ ಶರ್ಮ ದಿಲ್ಲಿಯಲ್ಲಿ, ಡಾ|ಕಲಾಂ ಬೆಂಗಳೂರಿನ ವಿದ್ಯಾಪೀಠದಲ್ಲಿ, ವಿ.ವಿ.ಗಿರಿಯವರು ಹೈದರಾಬಾದ್‌ನಲ್ಲಿ ರಾಷ್ಟ್ರಪತಿಯಾಗಿರುವಾಗ ಭೇಟಿ ಮಾಡಿದ್ದರು.