Advertisement
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳ ಮಾಹಿತಿ ಸಂಗ್ರಹಿಸಲು ಕಾಲೇಜು ವಿದ್ಯಾರ್ಥಿಗಳನ್ನು ಶನಿವಾರ, ರವಿವಾರ ಎರಡು ದಿನ ಬಳಸಿಕೊಳ್ಳಬೇಕು. ಇದಕ್ಕಾಗಿ ಪ್ರಾಚಾರ್ಯರ ಸಭೆ ಕರೆದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ನೊಡೆಲ್ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಸೂಚಿಸಿದರು. ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲೆಯ ಗ್ರಾಮಗಳ ಇತಿಹಾಸ, ಗ್ರಾಮದ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮಗಳ ಪರಿಚಯ, ಅಧ್ಯಯನದ ಜತೆಗೆ ನಮಗೊಂದು ಅಧ್ಯಯನ ವರದಿ ಸಿಗುತ್ತದೆ. ಮಾಹಿತಿ ಸಂಗ್ರಹಕ್ಕೊಂದು ನಮೂನೆ ಸಿದ್ಧಪಡಿಸಿ ನೀಡಲಾಗುವುದು. ಅದನ್ನು ಭರ್ತಿ ಮಾಡಿಕೊಡಬೇಕು. ಇದರಿಂದ ವಿಕಿಪಿಡಿಯಾ ಮಾದರಿಯಲ್ಲಿ ಗ್ರಾಮಗಳ ಮಾಹಿತಿ ಎಲ್ಲೆಡೆ ಸಿಗುವಂತೆ ವ್ಯವಸ್ಥೆ ಮಾಡಲು ಅವಕಾಶವಾಗುತ್ತದೆ ಎಂದು ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಸಂರಕ್ಷಣಾ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸುತ್ತಿದ್ದು ಜಿಲ್ಲೆಯಲ್ಲಿ ಸಂರಕ್ಷಿಸಬೇಕಾದ ಸ್ಮಾರಕಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಆದೇಶಿಸಿದರು.
Related Articles
Advertisement
ಜಿಲ್ಲಾ ಕೇಂದ್ರದಲ್ಲಿ ನಿವೇಶನ ನೀಡಿದರೆ, ಕಲಾಮಂದಿರಕ್ಕೆ ಅನುದಾನ ನೀಡಲಾಗುವುದು ಎಂದ ಸಚಿವ ಸಿ.ಟಿ. ರವಿ, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಏನು ಬೇಕೋ ಕೇಳಿ ಅನುದಾನ ಕೊಡಲಾಗುವುದು. ಆದರೆ, ಯಾವುದೇ ಮಠ, ಸಂಸ್ಥೆಗೆ ಮೆಚ್ಚಿಸಲು ಕೇಳಿದರೆ ಅನುದಾನ ನೀಡಲ್ಲ ಎಂದು ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.
ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಪಂ ಸಿಇಓ ರಮೇಶ ದೇಸಾಯಿ, ಎಸ್ಪಿ ಕೆ.ಜಿ. ದೇವರಾಜು ಇತರ ಅಧಿಕಾರಿಗಳು ಸಭೆಯಲ್ಲಿದ್ದರು.
ಸಾಮಾನ್ಯ ಮಾಹಿತಿ ಇಲ್ವಾ?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಶಶಿಕಲಾ ಹುಡೇದ ಅವರು ಸಭೆಯಲ್ಲಿ ವರದಿ ನೀಡುವಾಗ ಲಕ್ಷ ಇದ್ದುದನ್ನು ಕೋಟಿ, ಕೋಟಿ ಇದ್ದುದ್ದನ್ನು ತಪ್ಪು ತಪ್ಪಾಗಿ ಹೇಳಿದ್ದರಿಂದ ಸಚಿವ ಸಿ.ಟಿ. ರವಿ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. “ನಿಮಗೆ ಸಾಮಾನ್ಯ ಮಾಹಿತಿಯೂ ಕೊಡಲು ಬರೊದಿಲ್ವಾ? ಯಾವ ಇಲಾಖೆಯಿಂದ ಡೆಪ್ಯೂಟೇಶನ್ ಬಂದಿದ್ದೀರಿ? ಎಂದು ಕೆಂಡಕಾರಿದರು. ಆಗ ಅಧಿಕಾರಿ, “ನನ್ನ ಮೂಲ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಎಂದಾಗ ಮತ್ತಷ್ಟು ಕೆರಳಿ, ಇಷ್ಟು ಸಣ್ಣ ಮಾಹಿತಿ ಸಹ ಕೊಡಲು ಬರಲ್ಲ ಎಂದರೆ ಹೇಗೆ ನಿರ್ವಹಣೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಮಾರ್ಚ್‌ಗೆ ಲೆಕ್ಕ ಬರೆಯೋ ಕೆಲಸ ಆಗಬಾರದು. ವಾಸ್ತವದಲ್ಲಿ ಕೆಲಸ ಆಗಬೇಕು ಎಂದು ಆದೇಶಿಸಿದರು.