Advertisement
ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡೇ ಸರಕಾರ ರಂಗಕ್ಕಿಳಿದಿರುವುದು ಅದರ ನಡೆಯಿಂದ ಸ್ಪಷ್ಟವಾಗುತ್ತದೆ. ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಹೀಗೊಂದು ಬಹುದೊಡ್ಡ ನಿರ್ಧಾರವನ್ನು ಕೈಗೊಂಡ ಮೋದಿ ಸರಕಾರವನ್ನು ಅಭಿನಂದಿಸಲೇಬೇಕು. ಇದರ ಶ್ರೇಯಸ್ಸಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರೂ ಸಮಾನ ಪಾಲುದಾರರಾಗುತ್ತಾರೆ. ಮೋದಿ-ಶಾ ಜೋಡಿ ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡಿ ತೋರಿಸಿದೆ.
Related Articles
Advertisement
370ನೇ ವಿಧಿ ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ನೀಡುವ ಸಲುವಾಗಿ ಸೇರ್ಪಡೆಗೊಳಿಸಲಾಗಿತ್ತು. ಈ ವಿಧಿಯನ್ವಯ ಕೇಂದ್ರಕ್ಕೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ ಮಾತ್ರ ಕೇಂದ್ರದ ನಿಯಂತ್ರಣದಲ್ಲಿತ್ತು. ಈ ವಿಧಿಯನ್ನು ಬಳಸಿಕೊಂಡೇ ಕಾಶ್ಮೀರಕ್ಕೆ ಪ್ರತ್ಯೇಕವಾದ ಸಂವಿಧಾನವನ್ನು ರಚಿಸಲಾಗಿತ್ತು. 1965ರ ತನಕ ಜಮ್ಮು-ಕಾಶ್ಮೀರಕ್ಕೆ ಸದ್ರ್-ಇ-ರಿಯಾಸತ್ ಹೆಸರನಲ್ಲಿ ರಾಜ್ಯಪಾಲರನ್ನು ಮತ್ತು ಪ್ರತ್ಯೇಕ ಪ್ರಧಾನಿಯನ್ನು ನೇಮಿಸುವ ಸಂಪ್ರದಾಯವಿತ್ತು.
ಇದರ ವಿರುದ್ಧ ತೀವ್ರವಾಗಿ ಹೋರಾಡಿದವರು ಜನಸಂಘದ ಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ. ಈ ವಿಧಿಯನ್ನು ನಿಷ್ಪ್ರಯೋಜಕಗೊಳಿಸುವ ಮೂಲಕ ಮುಖರ್ಜಿಯವರ ಕನಸನ್ನು ಬಿಜೆಪಿ ಸರಕಾರ ಅವರು ತೀರಿಹೋದ ಬಹುಕಾಲದ ಬಳಿಕ ನನಸು ಮಾಡಿದೆ. ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಮತ್ತು ಅವರನ್ನು ಬೆಂಬಲಿಸುತ್ತಿರುವ ರಾಜಕೀಯ ನಾಯಕರಿಗೆ ಶ್ರೀರಕ್ಷೆಯಾಗಿದ್ದದ್ದೇ ವಿಶೇಷ ಸ್ಥಾನಮಾನ.
ಸಮೃದ್ಧ ಸಂಪನ್ಮೂಲ, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂಥ ರಾಜ್ಯವಾಗಿದ್ದರೂ ವಿಶೇಷ ಸ್ಥಾನಮಾನದ ಕಾರಣ ಈ ರಾಜ್ಯ ಹಿಂದುಳಿದಿತ್ತು. ವಿಶೇಷ ಸ್ಥಾನಮಾನ ರಾಜ್ಯವನ್ನು ಅಭಿವೃದ್ಧಿಪಡಿಸುವುದರ ಬದಲು ಶತಮಾನದಷ್ಟು ಹಿಂದಕ್ಕೊ ಯ್ಯಿತು. ಭಯೋತ್ಪಾದನೆ ವಿಫುಲವಾಗಿ ಬೆಳೆಯಲು ಪರೋಕ್ಷವಾಗಿ ಇದುವೇ ಸಹಕಾರಿಯಾಗಿತ್ತು. ಆದರೆ ಅಲ್ಲಿನ ಜನರನ್ನು ಕೆಲವು ಸ್ಥಾಪಿತ ಹಿತಾಸಕ್ತಿ ಹೊಂದಿರುವ ರಾಜಕೀಯ ನಾಯಕರು ವಿಶೇಷ ಸ್ಥಾನಮಾನವೊಂದೇ ನಿಮಗೆ ಶ್ರೀರಕ್ಷೆ.
ಅದು ಹೋದರೆ ನಿಮಗೆ ಯಾವುದೇ ಅಸ್ತಿತ್ವ ಇಲ್ಲ ಎಂದು ನಂಬಿಸಿಕೊಂಡು ಬಂದು ತಮ್ಮ ಬೇಳೆ ಬೇಯಿಸಿಕೊಂಡಿದ್ದರು. ಈಗ ಅವರ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ಇನ್ನೀಗ ಕೇಂದ್ರ ಸರಕಾರ ರಾಜ್ಯವನ್ನು ಸಂರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಇನ್ನೆಂದೂ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಸೊಲ್ಲೇ ಕೇಳದಂತೆ ಜನಪರವಾದ ಆಡಳಿತವನ್ನು ನೀಡುವ ದೊಡ್ಡ ಸವಾಲು ಕೇಂದ್ರದ ಮುಂದಿದೆ.