Advertisement

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

04:59 PM Nov 08, 2024 | Team Udayavani |

ಉದಯವಾಣಿ ಸಮಾಚಾರ
ಕಾರವಾರ: ಸಹ್ಯಾದ್ರಿ ಪರ್ವತಗಳ ಸಾಲುಗಳ ನಡುವೆ ಬಯಲು ಪ್ರದೇಶದಂತಿರುವ ಮುಡಗೇರಿ ಗ್ರಾಮ ಪ್ರಾಕೃತಿಕ ಸುಂದರ ತಾಣ. ಹೆಜ್ಜೆ ಹೆಜ್ಜೆಗೂ ಮೂರು ಶತಮಾನದ ಹಿಂದಿನ ಸೋದೆ ಅರಸರ ಸಾಮ್ರಾಜ್ಯದ ಕುರುಹುಗಳನ್ನು ಉಳಿಸಿಕೊಂಡಿರುವುದು ಕುತೂಹಲದ ಜತೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯಕ್ಕೆ ತುತ್ತಾದ ಗಡಿಗ್ರಾಮವಾಗಿದೆ.

Advertisement

ಗ್ರಾಮದ ಕೆಲ ಮನೆಗಳ ಆವರಣದಲ್ಲಿ ಸೋದೆ ಅರಸರ ಕಾಲದ ಬಾವಿಗಳಿವೆ. ಅಲ್ಲಿನ ಶುದ್ಧ ನೀರನ್ನೇ ಜನರು ಇಂದಿಗೂ ಬಳಸುತ್ತಿದ್ದಾರೆ. ಅವಾಸನದ ಸ್ಥಿತಿಗೆ ತಲುಪಿದ ಕೋಟೆಯ ಅವಶೇಷಗಳು, ನೀರಾವರಿ ವ್ಯವಸ್ಥೆಯ ಕುರುಹುಗಳು, ದೇಗುಲಗಳು ಮುಡಗೇರಿ ಸೋದೆ ರಾಜ್ಯದ ಭಾಗವಾಗಿತ್ತು ಎಂಬುದನ್ನು ಸಾರಿ ಹೇಳುತ್ತಿದೆ.

ರಾಜ್ಯದ ಗಡಿಭಾಗದಲ್ಲಿರುವ ಈ ಗ್ರಾಮದಿಂದ ಸ್ವಲ್ಪ ದೂರದಲ್ಲೇ ಗೋವಾ ರಾಜ್ಯದ ಗಡಿ ಭಾಗ ಆರಂಭಗೊಳ್ಳುತ್ತದೆ. ಸೋದೆ ಅರಸರ ಸಾಮ್ರಾಜ್ಯದಲ್ಲಿ ಮುಡಗೇರಿ, ಮಾಜಾಳಿ ಗಡಿ ಭಾಗ ಇರಬಹುದು ಎಂಬ ಊಹೆ ಸ್ಥಳೀಯರಲ್ಲಿಯೂ ಇದೆ.

ಗಡಿಭಾಗವಾಗಿದ್ದ ಕಾರಣದಿಂದಲೇ ಇಲ್ಲಿ ಕೋಟೆ, ಕುದುರೆ ಲಾಯ, ಶಸ್ತ್ರಾಸ್ತ್ರ ಕೊಠಡಿ ಸೇರಿದಂತೆ ರಾಜ್ಯದ ರಕ್ಷಣೆಗೆ ಬೇಕಿದ್ದ ಸೌಲಭ್ಯಗಳನ್ನೆಲ್ಲ ಅಳವಡಿಸಿದ್ದಿರಬಹುದು ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿ ಎತ್ತರ ಪ್ರದೇಶವೊಂದರಲ್ಲಿ ಕೋಟೆಯ
ಅವಶೇಷವೊಂದಿದೆ. ದೊಡ್ಡ ಗಾತ್ರದ ಚಿರೇಕಲ್ಲುಗಳಿಂದ ಇದು ನಿರ್ಮಾಣವಾಗಿತ್ತು. ಕೋಟೆ ಮಧ್ಯದಲ್ಲಿ ಎರಡು ಎತ್ತರದ ಸ್ತಂಭದಂತ ನಿರ್ಮಾಣ ಬಿದ್ದ ಸ್ಥಿತಿಯಲ್ಲಿದ್ದು, ಅದರ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಇದು ಅರಸರ ಕೋಟೆ ಆಗಿದ್ದಿರಬಹುದು ಎನ್ನುತ್ತಾರೆ ಮುಡುಗೇರಿ ಗ್ರಾಮದ ನಿವಾಸಿ ವಿಲಾಸ ದೇಸಾಯಿ.

ಇದೇ ಕೋಟೆಯ ಬಳಿ ನಿಂತು ನೋಡಿದರೆ ಸೋಮನಾಥ ದೇವಾಲಯವೊಂದು ಕಾಣಿಸುತ್ತಿದೆ. ಇದನ್ನು ಅರಸರು ಕಟ್ಟಿಸಿದ್ದು ಎಂಬುದಾಗಿ ಇತಿಹಾಸ ಹೇಳುತ್ತಿದೆ. ಕೋಟೆಯ ಪಳಿಯುಳಿಕೆ ನಡುವೆಯೇ ದೊಡ್ಡ ಗಾತ್ರದ ಬಾವಿಯೊಂದಿದೆ. ಬಾವಿಯ ಆಳದಲ್ಲಿ ಸುರಂಗ ಮಾರ್ಗ ಇರುವುದಾಗಿ ಪೂರ್ವಜರು ಹೇಳುತ್ತಿದ್ದರು ಎಂದು ಅವರು ವಿವರಿಸಿದರು. ಅರಸರ ಕುದುರೆ ಲಾಯ, ವಾಸಸ್ಥಳ ಗ್ರಾಮದಲ್ಲಿತ್ತು ಎಂದು ಹೇಳಲಾಗುತ್ತದೆ. ಕುದುರೆಗಳಿಗೆ ನೀರು ಕುಡಿಸಲು ಅಲ್ಲಲ್ಲಿ ಬಾವಿಗಳನ್ನು ನಿರ್ಮಿಸಿದ್ದರು.

Advertisement

ಚಿರೇಕಲ್ಲಿನಿಂದ ಕಟ್ಟಿದ ಬಾವಿಗೆ ಇಳಿದು ಸಾಗಲು ಮೆಟ್ಟಿಲುಗಳೂ ಇವೆ. ಮೆಟ್ಟಿಲುಗಳ ಮೂಲಕ ಬಾವಿಯ ಆಳದವರೆಗೆ ಕುದುರೆಗಳನ್ನು ಕರೆದೊಯ್ಯುವ ವ್ಯವಸ್ಥೆಯೂ ಇತ್ತೆಂಬ ಪ್ರತೀತಿ ಇದೆ. ಈಗ ಇದೇ ಬಾವಿಯ ನೀರನ್ನು ಉಪಯೋಗಿಸುತ್ತಿದ್ದೇವೆ. ಇದು ನಮ್ಮ ಮನೆಯ ಆವರಣದಲ್ಲಿದೆ ಎನ್ನುತ್ತಾರೆ ಸದಾನಂದ ಗಾಂವಕರ.

ಸೋದೆ ಅರಸರು ತಮ್ಮ ಸಾಮ್ರಾಜ್ಯದ ಅಲ್ಲಲ್ಲಿ ಕೊತ್ತಲಗಳನ್ನು ನಿರ್ಮಿಸಿದ್ದರು. ಅಲ್ಲಿ ಯುದ್ಧಕ್ಕೆ ಅಗತ್ಯವಿರುವ ಪರಿಕರಗಳು,
ಕುದುರೆಗಳನ್ನು ಇರಿಸಿದ್ದರು. ಸೈನಿಕರೂ ಇಲ್ಲಿ ವಾಸ ಇರುತ್ತಿದ್ದರು. ಅಂತಹ ಕೊತ್ತಲಗಳ ಪೈಕಿ ಮುಡಗೇರಿ ಗ್ರಾಮದ್ದು ಒಂದಾಗಿದೆ. ಕುದುರೆಗಳಿಗೆ ನೀರು ಕುಡಿಸಲು ಅನುಕೂಲವಾಗವಂತೆ ಇಲ್ಲಿ ಮೆಟ್ಟಿಲು ಸಹಿತ ಬಾವಿ ನಿರ್ಮಿಸಲಾಗಿತ್ತು.
● ಲಕ್ಷ್ಮೀಶ ಸೋಂದಾ, ಇತಿಹಾಸ ಅಧ್ಯಯನಕಾರ.

Advertisement

Udayavani is now on Telegram. Click here to join our channel and stay updated with the latest news.

Next