ಬೆಂಗಳೂರು: ಸಚಿವ ಸ್ಥಾನ ತ್ಯಜಿಸುವ ಕುರಿತಾಗಿ ಕೆಲವು ಸಚಿವರು ನೀಡಿರುವ ಹೇಳಿಕೆ ಅವರವರ ವೈಯಕ್ತಿಕ ಅಭಿಪ್ರಾಯವಾಗಿದೆ. ಸರ್ಕಾರದ ಮುಂದೆ ಈ ರೀತಿಯ ಯಾವ ಪ್ರಸ್ತಾವನೆಯೂ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ಬಿಡಲು ಸಿದ್ಧ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ನೀಡಿದ್ದ ಹೇಳಿಕೆಯು, ಅವರ ವೈಯಕ್ತಿಕ ಅಭಿಪ್ರಾಯ. ಈ ಸಂಬಂಧ ಸರ್ಕಾರದ ಹಂತದಲ್ಲಿ ಯಾವುದೇ ಚರ್ಚೆಯಾಗಿಲ್ಲ ಮತ್ತು ಪ್ರಸ್ತಾವನೆಯೂ ಇಲ್ಲ. ಮುಖ್ಯಮಂತ್ರಿಗಳು ಕೂಡ ಈ ವಿಚಾರವಾಗಿ ಏನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸಂಪುಟ ವಿಸ್ತರಣೆ ಸದ್ಯವೇ ಆಗಲಿದೆ.
ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ದು, ಸಂಪುಟಕ್ಕೆ ಯಾರ್ಯಾರು ಸೇರಲಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರ ಜತೆಗೆ ಮಾತುಕತೆ ನಡೆಸಿ, ರಾಜ್ಯಪಾಲರ ಕಾಲಾವಕಾಶ ಸೇರಿದಂತೆ ಇನ್ನಿತರೆ ವಿಷಯಗಳನ್ನು ಆಧರಿಸಿ ದಿನಾಂಕ ನಿರ್ಧಾರ ಮಾಡಲಿದ್ದಾರೆ ಎಂದರು.
ಡೀಸಿ ವರದಿ ಪಡೆಯಲಾಗುವುದು: ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ಸಂಬಂಧ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು. ಯಾವುದೇ ರೀತಿಯ ಒತ್ತಡ ಹಾಕಿಲ್ಲ. ವರದಿ ಬಂದ ನಂತರ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.
118 ಅಡಿ ಪ್ರತಿಮೆ ನಿರ್ಮಿಸುವ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆಯು ಟ್ರಸ್ಟ್‌ನಿಂದ ಕೇಳಿದೆ. ಕಾನೂನು ಬಾಹಿರವಾಗಿ ಅನೇಕ ರೀತಿಯ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಯಾವುದೇ ಇಲಾಖೆಯಿಂದಲೂ ಯೇಸು ಪ್ರತಿಮೆಗಾಗಿ ಜಾಗ ಪಡೆದಿರುವ ಮಾಹಿತಿ ಇಲ್ಲ ಎಂದು ಸಚಿವರು ಹೇಳಿದರು.