Advertisement

ನ್ಯಾಯದ ನಿರೀಕ್ಷೆಯಲ್ಲಿ ಅಲೆದಾಡುತ್ತಿರುವ ರೋಹಿತ್‌ ಪೋಷಕರು

12:41 PM Mar 28, 2017 | Team Udayavani |

ಮಹಾನಗರ: ತಣ್ಣೀರುಬಾವಿಯಲ್ಲಿ  ಸ್ಥಳೀಯ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿ ರೋಹಿತ್‌ ರಾಧಾಕೃಷ್ಣನ್‌ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಮೂರು ವರ್ಷಗಳಾದರೂ ನಿಗೂಢವಾಗಿ ಉಳಿದಿದೆ. 

Advertisement

ಇನ್ನೂ  ತನಿಖೆ ಪೂರ್ಣ ಗೊಳ್ಳದ ಕಾರಣ ಸತ್ಯಾಂಶ ಹೊರ ಬಂದಿಲ್ಲ. ರೋಹಿತ್‌ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕೋಳಂಚೇರಿ ತಾಲೂಕಿನ ಮಲ್ಲಪುಸೇರಿ ಗ್ರಾಮದವನಾಗಿದ್ದ. ಅವನ ಹೆತ್ತವರು ತಮಗೆ ನ್ಯಾಯದಾನ ಮರೀಚಿಕೆಯೇ  ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ.  

2014 ಮಾರ್ಚ್‌ 22ರ ರಾತ್ರಿ ರೋಹಿತ್‌ ರಾಧಾಕೃಷ್ಣನ್‌ ಸಾವನ್ನಪ್ಪಿದ್ದು, ಮರುದಿನ (ಮಾ. 23) ಮುಂಜಾನೆ ಅವರ ಮೃತ ದೇಹ ತಣ್ಣೀರುಬಾವಿ ಬಳಿ ರಸ್ತೆಯ ಬದಿ ರುಂಡದಿಂದ ಬೇರ್ಪಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿತ್ತು. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. 

ಪ್ರಾರಂಭದಲ್ಲಿ  ಇದೊಂದು ಅಪಘಾತ ಪ್ರಕರಣ ಎಂಬುದಾಗಿ ಪಣಂಬೂರು ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ವಿದ್ಯಾರ್ಥಿಯ ಹೆತ್ತವರು ಪ್ರಕರಣವನ್ನು ಗೃಹ ಸಚಿವರ ಬಳಿಗೆ ಕೊಂಡೊಯ್ದ ಅಸಹಜ ಸಾವು/ಶಂಕಾಸ್ಪದ ಕೊಲೆ ಪ್ರಕರಣ ಎಂಬುದಾಗಿ ದೂರು ನೀಡಿದಾಗ, ಪ್ರಕರಣ ಹೊಸ ತಿರುವು ಪಡೆದಿತ್ತು. ಆದರೆ ವಿದ್ಯಾರ್ಥಿಯ ಸಾವಿಗೆ ನೈಜ ಕಾರಣಗಳಿನ್ನೂ ತಿಳಿದು ಬಂದಿಲ್ಲ.

ತಮ್ಮ ಪುತ್ರನ ಸಾವು ಅನೇಕ ಸಂಶಯಗಳನ್ನು ಹುಟ್ಟು  ಹಾಕಿದ್ದರಿಂದ ಇದೊಂದು ಅಪಘಾತ ಅಲ್ಲ; ಕೊಲೆ ಪ್ರಕರಣ ಆಗಿರಬೇಕೆಂದು ಹೆತ್ತವರು ಸಂದೇಹ ವ್ಯಕ್ತಪಡಿಸಿದ್ದರು. ಮೃತ ದೇಹವು ರುಂಡದಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಸುಮಾರು 7 ಮೀಟರ್‌ ದೂರ ಚದುರಿ ಬಿದ್ದಿತ್ತು. ರಸ್ತೆ ಬದಿಯ ಮರಗಳಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿತ್ತು. ಎದೆಗೂಡು ಒಡೆದು ಕರುಳು, ಪಿತ್ತ ಜನಕಾಂಗ ಹೊರಗೆ ಬಂದಿತ್ತು. ಆತ ಚಲಾಯಿಸುತ್ತಿದ್ದನೆನ್ನಲಾದ ಬಜಾಜ್‌ ಪಲ್ಸರ್‌ 200 ಸಿಸಿ ಮೋಟಾರ್‌ ಬೈಕ್‌ ದೇಹಕ್ಕಿಂತ 7 ಮೀಟರ್‌ ದೂರ ಫುಟ್‌ಪಾತ್‌ಗೆ ಒರಸಿ ಪುಡಿಯಾಗಿ ಬಿದ್ದಿತ್ತು. ರಸ್ತೆ ಬದಿಯ ಎರಡು ಮೇ ಫ್ಲವರ್‌ ಮರಗಳಲ್ಲಿ ರಕ್ತದ ಕಲೆಗಳಿದ್ದವು. ದೇಹದಲ್ಲಿ ಗುದ್ದಿದ ಕುರುಹುಗಳಿದ್ದವು.

Advertisement

ತಡ ರಾತ್ರಿಯಲ್ಲಿ  ಬೀಚ್‌ ವಿಹಾರಕ್ಕೆಂದು ಎರಡು ಬೈಕ್‌ಗಳಲ್ಲಿ ವಿದ್ಯಾರ್ಥಿಗಳು ಹೋಗಿದ್ದು, ಪೈಪೋಟಿಯಲ್ಲಿ  ಬೈಕ್‌ ಚಲಾಯಿಸಿದ್ದರಿಂದ ಹೀಗಾಗಿರಬಹುದು ಅಥವಾ ಹಿಂಬದಿಯಿಂದ‌ ಬಂದ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದ ರಭಸಕ್ಕೆ ಅಪಘಾತವಾಗಿಧಿರಬೇಕೆಂದು ಭಾವಿಸಿದ ಪೊಲೀಸರು ಶ್ವಾನ ದಳ, ಬೆರಳಚ್ಚು ತಜ್ಞರ ಸಹಾಯದಿಂದ ಪ್ರಾಥಮಿಕ ತನಿಖೆ ನಡೆಸಿ ಅಪಘಾತವೆಂಬ ತೀರ್ಮಾನಕ್ಕೆ ಬಂದಿದ್ದರು. 

ಆದರೆ ದೇಹದಿಂದ ರುಂಡ ಬೇರ್ಪಟ್ಟ  ಕಾರಣ ಅಪಘಾತದಿಂದ ಇಂತಹ ಸ್ಥಿತಿ ನಿರ್ಮಾಣ ಸಾಧ್ಯವಿಲ್ಲ, ಇದೊಂದು ಕೊಲೆ ಪ್ರಕರಣವೇ ಆಗಿರಬೇಕು ಎಂದು ವಿದ್ಯಾರ್ಥಿಯ ಪೋಷಕರು ಸಂದೇಹ ವ್ಯಕ್ತಪಡಿಸಿದ್ದರು. ಆಗಲೂ, ಒಂದೊಮ್ಮೆ ಕೊಲೆಯಾಗಿದ್ದರೆ ಎದೆಯ ಗೂಡನ್ನು ಹರಿದು ಹಾಕುತ್ತಿರಲಿಲ್ಲ ಎಂದು ಪೊಲೀಸರು ಅಪಘಾತ ಪ್ರಕರಣವನ್ನೇ ದಾಖಲಿಸಿದ್ದರು.

ಬಳಿಕ ಹೆತ್ತವರು ನಗರಕ್ಕೆ ಬಂದು ಕಾಲೇಜಿನ ಆಡಳಿತ, ಶಿಕ್ಷಕರು ಮತ್ತು ವಿದ್ಯಾರ್ಥಿ ಸಹಪಾಠಿಗಳ ಜತೆ ಮಾತುಕತೆ ನಡೆಸಿ ಕೊಲೆ ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ವಿಶೇಷ ತಂಡ ರಚನೆ ಕೋರಿ ವಿದ್ಯಾರ್ಥಿಯ ತಂದೆ  ಎಂ.ಎಸ್‌. ರಾಧಾಕೃಷ್ಣನ್‌ ಆಗಿನ ಗೃಹ ಸಚಿವ ಕೆ. ಜೆ. ಜಾರ್ಜ್‌ ಅವರಿಗೆ 2014 ಮಾ. 29 ರಂದು ಮನವಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಪ್ರಕರಣದ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಬಳಿಕ ಪೋಷಕರ ಒತ್ತಡ ಜಾಸ್ತಿಯಾದಾಗ ಸಚಿವರು ಕೊಲೆ ಪ್ರಕರಣವನ್ನಾಗಿಸಿ ತನಿಖೆ ನಡೆಸಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ   2014ರ ಎಪ್ರಿಲ್‌ 5 ರಂದು ಪಣಂಬೂರು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದರು.  ಆದರೂ ಫ‌ಲ ಸಿಗದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಆದರೆ ಸಿಐಡಿ ಪೊಲೀಸರಿಂದಲೂ ತನಿಖೆಯನ್ನು ದಡ ಮುಟ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ ಸಿಬಿಐ ತನಿಖೆಯ ಕೋರಿ ಹೈಕೋರ್ಟ್‌ ನಲ್ಲಿ  ರಿಟ್‌ ಅರ್ಜಿ ದಾಖಲಿಸಿದರು. ಹೈಕೋರ್ಟ್‌  ಕಾಲಮಿತಿಯೊಳಗೆ ತನಿಖೆ ನಡೆಸುವಂತೆ ರಾಜ್ಯ ಸರಕಾರಕ್ಕೆ, ಪೊಲೀಸ್‌ ಇಲಾಖೆಗೆ, ಸಿಐಡಿ ಮತ್ತು ಸಿಬಿಐಗೆ ನೋಟಿಸ್‌ ಕಳುಹಿಸಿ ಒಂದು ವರ್ಷ ಕಳೆದರೂ ಪ್ರಗತಿ ಆಗಿಲ್ಲ. 

ವಿಚಾರಣೆಗೆ ಬಾಕಿ ಇರುವ ಅರ್ಜಿ
ರೋಹಿತ್‌ ತಂದೆ ಎಂ. ಎಸ್‌. ರಾಧಾಕೃಷ್ಣನ್‌ ಅವರು ಪುತ್ರನ ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿ, ಸ್ಥಳ ತನಿಖೆಯ ಮಹಜರು, ವಾಹನ ಮಹಜರು ಹಾಗೂ ಮರಣೋತ್ತರ ಪರೀಕ್ಷೆಯ ವಿಡಿಯೊ ಮತ್ತು ಫೋಟೋಗಳನ್ನು ಒದಗಿಸುವಂತೆ ಕೋರಿ ಹೈಕೋರ್ಟಿನಲ್ಲಿ  ರಿಟ್‌ ಅರ್ಜಿ ದಾಖಲಿಸಿದ್ದು, ವಿಚಾರಣೆಗೆ ಬಾಕಿ ಇದೆ. ಇದಕ್ಕೆ ಮೊದಲು ಇವುಗಳನ್ನು ಪೊಲೀಸರನ್ನು ಕೋರಿದ್ದರೂ, ಸ್ಪಂದಿಸಿ ರಲಿಲ್ಲ. ಹಾಗಾಗಿ ಹೈಕೋರ್ಟಿನ ಮೊರೆ ಹೋಗಿದ್ದರು. 

ಸಿಗದ ನ್ಯಾಯ
ಮೂರು ವರ್ಷಗಳಿಂದ ರೋಹಿತ್‌ ನ ಪೋಷಕರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಎಲ್ಲಿಯೂ ಅವರಿಗೆ ಸಾಂತ್ವನ ದೊರೆತಿಲ್ಲ. ರಾಜ್ಯ /ಕೇಂದ್ರ ಸರಕಾರಗಳ ಉನ್ನತ ಮಟ್ಟದ ನಾಯಕರಿಗೆ, ಅಧಿಕಾರಿಗಳಿಗೆ, ತನಿಖಾ ಸಂಸ್ಥೆಗಳಿಗೆ ಹಲವು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ದೇವರಾಜ್‌ ಸಿ. ಸತ್ಯದೇವನ್‌, ರೋಹಿತ್‌ ಸಂಬಂಧಿ.

ಮಾಸಿ ಹೋಗದ ನೆನಪು
ಮೂರು ವರ್ಷಗಳಿಂದ ಸರಿಯಾಗಿ ನಿದ್ರೆ ಬರುತ್ತಿಲ್ಲ. ದಿನಾಲೂ ಅವನದ್ದೇ ನೆನಪು. ನಮ್ಮ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂಬ ವಾದವನ್ನು ಒಪ್ಪಲು ನಾವು ತಯಾರಿಲ್ಲ. ತನಿಖಾ ಸಂಸ್ಥೆಗೆ ಸಲ್ಲಿಸಿದ ಸಾಕ್ಷ್ಯಗಳಲ್ಲಿ ಮರಣೋತ್ತರ ಪರೀಕ್ಷೆಯ ವಿಡಿಯೋ ಯಾಕಿಲ್ಲ? ಸಾವು ಸಂಭವಿಸಿದ ಬಳಿಕ 12 ಗಂಟೆ ತನಕವೂ ರೋಹಿತ್‌ನ ಸ್ನೇಹಿತರು ಎನ್ನಲಾದವರು ರೋಹಿತ್‌ನನ್ನು ಹುಡುಕಾಟ ನಡೆಸಿಲ್ಲ ಏಕೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಪುತ್ರನ ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿ ಮತ್ತಿತರ ಸಂಗತಿಗಳ ದಾಖಲೆಗಳನ್ನು ಕೋರಿ ಹೈಕೋರ್ಟಿನಲ್ಲಿ  ಸಲ್ಲಿಸಿದ ರಿಟ್‌ ಅರ್ಜಿ ವಿಚಾರಣೆ ಇನ್ನೂ ಆಗಿಲ್ಲ. 
ಎಂ.ಎಸ್‌. ರಾಧಾಕೃಷ್ಣನ್‌, ರೋಹಿತ್‌ ತಂದೆ. 

Advertisement

Udayavani is now on Telegram. Click here to join our channel and stay updated with the latest news.

Next