Advertisement

25 ಲಕ್ಷ ರೂ.ಸುಪಾರಿ ನೀಡಿ ತಂದೆ ಹತ್ಯೆ ಮಾಡಿಸಿದ

05:44 AM Jun 20, 2020 | Lakshmi GovindaRaj |

ಬೆಂಗಳೂರು: ನಾಲ್ಕು ತಿಂಗಳ ಹಿಂದೆ ಹಾಡಹಗಲೇ ಗುಬ್ಬಲಾಳು ಮುಖ್ಯರಸ್ತೆ ಸಮೀಪ ನಡೆದಿದ್ದ ಬಳ್ಳಾರಿ ಮೂಲದ ಗಣಿ ಉದ್ಯಮಿ ಸಿಂಗನಮಲೆ ಮಾಧವ್‌ (70) ಕೊಲೆ ಪ್ರಕರಣ ಭೇದಿಸುವಲ್ಲಿ ತಲಘಟ್ಟಪುರ ಪೊಲೀಸರು, ಯಶಸ್ವಿಯಾಗಿದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.  ಕೊಲೆಯಾದ ಮಾಧವ್‌ ಅವರು ಬಳ್ಳಾರಿಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

Advertisement

ಈ ಆಸ್ತಿ ಲಪಟಾಯಿಸಲು ಅವರ ಮಗ ಹರಿಕೃಷ್ಣ, ಸಹೋದರ ಶಿವರಾಮ್‌ ಪ್ರಸಾದ್‌ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮಾಧವ್‌ರನ್ನು ಕೊಲೆ ಮಾಡಿದ ಸುಪಾರಿ ಹಂತಕರಾದ ಗೋವಾದ ರಿಯಾಜ್‌ ಅಬ್ದುಲ್‌ ಶೇಖ್‌, ಶಾರೂಕ್‌ ಮನ್ಸೂರ್‌,  ಕೋಗಿಲು ಕ್ರಾಸ್‌ನ ಶಹಬಾಜ್‌, ಯಶವಂತಪುರದ ಆದಿಲ್‌ ಖಾನ್‌, ಶಾಮನ್‌ ಗಾರ್ಡನ್‌ ನಿವಾಸಿ ಸಲ್ಮಾನ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಹರಿಕೃಷ್ಣ, ಶಿವರಾಮ್‌ ಸದ್ಯ ತಲೆ ಮರೆಸಿಕೊಂಡಿದ್ದು ಅವರ  ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಬ್ಬಲಾಳು ಮುಖ್ಯ ರಸ್ತೆ ಸಮೀಪದ ರಾಯಲ್‌ ಫಾಮ್ಸ್‌ ರಸ್ತೆಯಲ್ಲಿ ಫೆ.14ರ ಮಧ್ಯಾಹ್ನ ಸಿಂಗನಮಲೆ ಮಾಧವ್‌ ಅವರ ಕತ್ತು ಕುಯ್ದು ಹತ್ಯೆ ಮಾಡಲಾಗಿತ್ತು.  ಈ ಸಂಬಂಧ ತನಿಖೆ ಆರಂಭಿಸಿದ ಸುಬ್ರಹ್ಮಣ್ಯಪುರ ಉಪವಿಭಾಗದ 2 ತಂಡಗಳು, ಆರೋಪಿಗಳಿಗಾಗಿ ಮುಂಬೈ, ಪಾಂಡಿಚೇರಿ, ಗೋವಾ, ಪೂನಾ, ಅನಂತಪುರ, ಗೋವಾ ಮತ್ತಿತರ ಕಡೆ ಶೋಧ ನಡೆಸಿದ್ದವು ಎಂದು ದಕ್ಷಿಣ ವಿಭಾಗದ  ಡಿಸಿಪಿ ಡಾ.ರೋಹಿಣಿ ಕಟೋಚ್‌ ಸೆಪಟ್‌ ತಿಳಿಸಿದರು.

25 ಲಕ್ಷ ರೂ.ಗೆ ಸುಪಾರಿ: ಏನು ಮಾಡಿದರೂ ತಂದೆ ಮಾಧವ್‌ ಅವರನ್ನು ಮಣಿಸಲು ಆಗದಿದ್ದಾಗ ಕೊಲೆ ಮಾಡಿಸಲು ಹರಿಕೃಷ್ಣ, ಶಿವರಾಮ್‌ ನಿರ್ಧರಿಸಿ ಎರಡು ಪ್ರತ್ಯೇಕ ತಂಡಗಳಿಗೆ ಸುಪಾರಿ ನೀಡಿದ್ದರು. ಆದರೆ, ಎರಡೂ ತಂಡಗಳು  ಮಾಧವ್‌ರನ್ನು ಹತ್ಯೆ ಮಾಡುವಲ್ಲಿ ವಿಫ‌ಲವಾಗಿ ವಿಳಂಬವಾಗುತ್ತಿತ್ತು. ಅಂತಿಮವಾಗಿ ಗೋವಾದ ರಿಯಾಜ್‌ ನನ್ನು ಸಂಪರ್ಕಿಸಿ ಮಾಧವ್‌ ಅವರ ಹತ್ಯೆಗೆ 25 ಲಕ್ಷ ರೂ.ಗೆ ಸುಪಾರಿ ನೀಡಿ ಮುಂಗಡ ಹಣವಾಗಿ 7.5 ಲಕ್ಷ ರೂ. ನೀಡಿದ್ದರು.

ತನಿಖೆ ಚುರುಕುಗೊಳಿಸಿ ಗೋವಾದ ರಿಯಾಜ್‌ ನನ್ನು ಬಂಧಿಸಿದಾಗ ಮಾಧವ್‌ ಅವರ ಸುಪಾರಿ ಹತ್ಯೆ ವೃತ್ತಾಂತ ಬಯಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು. ತನಿಖಾ ತಂಡದಲ್ಲಿ ಸುಬ್ರಹ್ಮಣ್ಯಪುರ ಉಪ ವಿಭಾಗದ  ಎಸಿಪಿ ಮಂಜುನಾಥ್‌ ಬಾಬು, ತಲಘಟ್ಟಪುರ ಠಾಣೆ ಇನ್ಸ್‌ಪೆಕ್ಟರ್‌ ರಾಮಪ್ಪ ಬಿ.ಗುತ್ತೇದಾರ್‌, ಪಿಎಸ್‌ ಐಗಳಾದ ವಿ.ನಾಗೇಶ್‌, ಶ್ರೀನಿವಾಸ್‌, ಠಾಣೆ ಸಿಬ್ಬಂದಿ ಇದ್ದರು.

Advertisement

100 ಕೋಟಿ ಮೇಲೆ ಕಣ್ಣು!: ಉದ್ಯಮಿ ಸಿಂಗನಮಲೆ ಮಾಧವ್‌ ಬಳ್ಳಾರಿಯಲ್ಲಿ ಸುಮಾರು ಎರಡು ಸಾವಿರ ಎಕರೆಯಲ್ಲಿ ಬಳ್ಳಾರಿ ಸ್ಟೀಲ್ಸ್‌ ಅಂಡ್‌ ಅಲೈ ಲಿಮೆಟೆಡ್‌ ಮೈನ್ಸ್‌ ಹೆಸರಿನ ಕಂಪನಿ ನಡೆಸುತ್ತಿದ್ದಾರೆ. ಈ ಆಸ್ತಿಯ ಮೌಲ್ಯ ಸುಮಾರು  100 ಕೋಟಿ. ರೂ.ಗೂ ಅಧಿಕವಿದೆ. ಬೆಂಗಳೂರಿನ ರಾಯಲ್‌ ಫಾಮ್ಸ್‌ ಲೇಔಟ್‌ನಲ್ಲಿ ಮಾಧವ್‌ ಪತ್ನಿ ಪಾರ್ವತಿ ಹಾಗೂ ಮಾನಸಿಕ ಅಸ್ವಸ್ಥನ ಜತೆ ನೆಲೆಸಿದ್ದರು.

ಅವರ ಹಿರಿಯ ಮಗ ಉದ್ಯಮದ ವ್ಯವಹಾರಗಳ ಕಡೆ ಹೆಚ್ಚಾಗಿ ಗಮನ ಹರಿಸುತ್ತಿರಲಿಲ್ಲ. ಕೊನೇ ಮಗ ಹರಿಕೃಷ್ಣ ಕೆಲ ವರ್ಷ ಉದ್ಯಮ ನೋಡಿಕೊಳ್ಳುತ್ತಿದ್ದ.ಇಡೀ ಕಂಪನಿ ಆಸ್ತಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದ್ದ. ಚಿಕ್ಕಪ್ಪ ಶಿವರಾಮ್‌ ಪ್ರಸಾದ್‌ ಜತೆ ಸೇರಿ ತಂದೆ ಹತ್ಯೆಗೆ ಸಂಚು ರೂಪಿಸಿದ್ದ. ಈ ಸಂಬಂಧ  ಹರಿಕೃಷ್ಣ, ಶಿವರಾಮ್‌ ವಿರುದ ಎಸ್‌.ಜೆ ಪಾರ್ಕ್‌, ಸುಬ್ರಹ್ಮಣ್ಯ ನಗರ, ವಿವೇಕ್‌ ನಗರ, ಜೆ.ಸಿ.ನಗರ, ಬಳ್ಳಾರಿ ಗ್ರಾಮಾಂತರ ಠಾಣೆಗಳಲ್ಲಿ ಕೇಸು ದಾಖಲಾಗಿದ್ದವು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next