ಬೆಂಗಳೂರು: ಕರ್ಮಯೋಗಿ, ನವಮುರುಡೇಶ್ವರದ ನಿರ್ಮಾಪಕ, ಆರ್.ಎನ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಆರ್.ಎನ್ ಶೆಟ್ಟಿ ಇಂದು ನಿಧನರಾಗಿದ್ದಾರೆ.
1928ರಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಜನಿಸಿದ ಇವರ ಪೂರ್ಣ ಹೆಸರು ರಾಮ ನಾಗಪ್ಪ ಶೆಟ್ಟಿ. ಕೃಷಿ ಕುಟುಂಬದಲ್ಲಿ ಜನಿಸಿದ ಇವರ ತಂದೆ ಮುರುಡೇಶ್ವರ ದೇವಾಲಯದ ಅನುವಂಶೀಯ ನಿರ್ವಾಹಕರಾಗಿ, ಆಡಳಿತಾಧಿಕಾರಿಯಾಗಿ ಶಿವನಿಗೆ ಸೇವೆ ಸಮರ್ಪಿಸುತ್ತಿದ್ದರು. ಪ್ರೌಢಶಿಕ್ಷಣ ಮುಗಿಸಿದ ನಂತರ, ಶೆಟ್ಟಿರವರು ಶಿರಸಿಯ ನಾಗರಿಕ ಗುತ್ತಿಗೆದಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.
ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಕಾಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಆರ್.ಎನ್ ಶೆಟ್ಟಿಯವರದು. ಮಾತ್ರವಲ್ಲದೆ ಮುರುಡೇಶ್ವರದ ಸಮುದ್ರ ತೀರದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು. ಇದಲ್ಲದೆ ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ವಸತಿ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲ ಸೌಕರ್ಯ, ವಿದ್ಯುತ್, ನೀರಾವರಿ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದರು.
ಇದನ್ನೂ ಓದಿ: ಖ್ಯಾತ ಉದ್ಯಮಿ, ಶಿಕ್ಷಣ ತಜ್ಞ ಆರ್.ಎನ್ ಶೆಟ್ಟಿ ನಿಧನ; ಮುಖ್ಯಮಂತ್ರಿ ಬಿಎಸ್ ವೈ ಸಂತಾಪ
ಆರ್ ಎನ್ ಶೆಟ್ಟಿ ಅವರು ಉದ್ಯಮಿಯಾಗಿ ದೇಶವಿದೇಶಗಳಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. 1967ರಲ್ಲಿ ಪಾಲುದಾರ ಕಂಪೆನಿಯಾದ ಆರ್ ಎನ್ ಶೆಟ್ಟಿ ಆಂಡ್ ಕಂಪೆನಿ ಆರಂಭಿಸಿದ್ದರು. ಕಂಪೆನಿ ಮೂಲಕ ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟು, ವಾರಾಹಿ ಜಲ ವಿದ್ಯುತ್ ಯೋಜನೆ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮೊದಲಾದ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಮೋಟಾರ್ಸ್ ಕಂಪೆನಿ, ಫೈನಾನ್ಸ್ ಕಂಪೆನಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದರು. ಅವರ ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಕರ್ನಾಟಕದ ಅತಿ ದೊಡ್ಡ ಕ್ಯಾಂಪಸ್ ಎನಿಸಿಕೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯ 2009-10ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. 2004 ರಲ್ಲಿ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ವಾಣಿಜ್ಯ ಮತ್ತು ಕರ್ನಾಟಕ ಕೈಗಾರಿಕಾ ಚೇಂಬರ್ಸ್ ಒಕ್ಕೂಟದವರು ಶೆಟ್ಟಿಯವರಿಗೆ ನೀಡಿ ಸನ್ಮಾನಿಸಿದ್ದಾರೆ.