Advertisement

ವಿವಿ ಸಾಗರದಿಂದ ನೀರು ಪೂರೈಕೆ ಸ್ಥಗಿತ

12:36 PM Jul 03, 2019 | Naveen |

ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯದಿಂದ ನೀರು ಪಂಪ್‌ ಮಾಡುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ವಿವಿ ಸಾಗರ ಹೋರಾಟ ಸಮಿತಿ ವತಿಯಿಂದ ಮಂಗಳವಾರ ವಿವಿ ಪುರ ಗ್ರಾಮದ ಕಣಿವೆ ಮಾರಮ್ಮ ದೇವಿ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಲಾಯಿತು. ರೈತರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ, ವಿವಿ ಸಾಗರ ಜಲಾಶಯದಿಂದ ನೀರು ಪಂಪ್‌ ಮಾಡುವುದನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿದೆ.

Advertisement

ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು, ಮುಖಂಡರು, ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಈ ಭಾಗದ ರೈತರು ಮಳೆ ಅಭಾವವನ್ನು ಅರಿತು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಕಳೆದ ಎರಡು ವರ್ಷಗಳಿಂದ ನೀರಿನ ಸಮಸ್ಯೆ ತೀವ್ರಗೊಂಡು ಸಾವಿರಾರು ರೈತರು ಜಮೀನು ಮತ್ತು ತೋಟಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರ ಸಂಕಷ್ಟ ನೋಡಲು ಆಗುತ್ತಿಲ್ಲ. ಇಂತಹ ಪರಿಸ್ಥಿತಿತಿಯಲ್ಲಿ ಸರ್ಕಾರ ರೈತರ ಸಹಾಯಕ್ಕೆ ಧಾವಿಸಬೇಕು. ಆದಷ್ಟು ಬೇಗ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಬೇಕು. ವಿವಿ ಸಾಗರಕ್ಕೆ ನೀರು ಬರುವವರೆಗೂ ನೀರು ಪಂಪ್‌ ನಿಲುಗಡೆ ಮಾಡಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಆರನಕಟ್ಟೆ ಶಿವಕುಮಾರ್‌ ಮಾತನಾಡಿ, ರೈತರು ಹೋರಾಟ ಮಾಡುತ್ತಿದ್ದಾರೆಂದು ಕೇವಲ ಒಂದು ದಿನ ತಾತ್ಕಾಲಿಕವಾಗಿ ನೀರು ಪಂಪ್‌ ಮಾಡುವುದನ್ನು ನಿಲ್ಲಿಸಬಾರದು. ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಯುವವರೆಗೂ ಜಿಲ್ಲಾಡಳಿತ ಮತ್ತು ಸರ್ಕಾರ ನೀರು ಪಂಪ್‌ ಮಾಡುವದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದರು.

ವಿವಿ ಸಾಗರ ಹೋರಾಟ ಸಮಿತಿಯ ಕಸವನಹಳ್ಳಿ ರಮೇಶ್‌ ಮಾತನಾಡಿ, ಹೋರಾಟದ ಫಲವಾಗಿ ಇಂದು ನಾವು ಮೊದಲ ಜಯವನ್ನು ಸಾಧಿಸಿದ್ದೇವೆ. ಈ ಹೋರಾಟ ವಿವಿ ಸಾಗರ ಜಲಾಶಯಕ್ಕೆ ಶಾಶ್ವತ ನೀರು ತರುವವರೆಗೂ ನಡೆಯಬೇಕು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.

ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ವಿಜಯಕುಮಾರ್‌ ಮಾತನಾಡಿ, ನೀರಿನ ಅಭಾವ ಮತ್ತು ರೈತರ ಹೋರಾಟವನ್ನು ಗಮನಿಸಿ ಜಲಾಶಯದಿಂದ ನೀರು ಪಂಪ್‌ ಮಾಡುವುದನ್ನು ನಿಲ್ಲಿಸಲಾಗಿದೆ, ಪಂಪ್‌ ಮಾಡುವ ಕೊಠಡಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆಂದು ತಿಳಿಸಿದರು. ನಂತರ ನೀರು ಪಂಪ್‌ ಮಾಡುತ್ತಿದ್ದ ಸ್ಥಳಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೈತ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಗಾಂವಿ, ಡಿವೈಎಸ್‌ಪಿ, ನೀರಾವರಿ ಇಲಾಖೆ ಇಂಜಿನಿಯರ್‌ ಉಪಸ್ಥಿತರಿದ್ದರು.

Advertisement

ಪ್ರತಿಭಟನೆಗೆ ಬಸ್‌, ಬೈಕ್‌ ಮತ್ತಿತರ ವಾಹನಗಳಲ್ಲಿ ರೈತರು ವಿವಿ ಸಾಗರದ ಜಲಾಶಯದ ಮುಂದೆ ಇರುವ ಕಣಿವೆ ಮಾರಮ್ಮ ದೇವಿ ದೇವಸ್ಥಾನದ ಬಳಿ ಆಗಮಿಸಿದರು. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್‌. ತಿಮ್ಮಯ್ಯ, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಹೊರಕೇರಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ. ಯಶೋಧರ, ವಿವಿ ಪುರ ಗ್ರಾಪಂ ಸದಸ್ಯರಾದ ಉಮೇಶ್‌, ಎನ್‌.ಎಲ್. ಬಸವರಾಜ್‌, ಬಿ.ಕೆ. ಉಗ್ರಮೂರ್ತಿ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎನ್‌.ಆರ್‌. ಲಕ್ಷ್ಮೀಕಾಂತ್‌, ಬಬ್ಬೂರು ಸುರೇಶ್‌, ತಾಪಂ ಸದಸ್ಯ ಯಶವಂತ್‌, ನಗರಸಭೆ ಸದಸ್ಯರಾದ ಪಾಂಡು, ಶಿವರಂಜಿನಿ, ರೈತ ನಾಯಕಿ ವೇದಾ ಶಿವಕುಮಾರ್‌, ರೈತ ಮುಖಂಡ ಸಿದ್ದರಾಮಣ್ಣ, ವಕೀಲರಾದ

ಸಂಜಯ್‌, ಕೆ.ಟಿ. ತಿಪ್ಪೇಸ್ವಾಮಿ, ವೀರಣ್ಣ, ಮಹಂತೇಶ್‌, ಅರುಣ್‌ಕುಮಾರ್‌, ವಂದೇಮಾತರಂ ವೇದಿಕೆ ತಾಲೂಕು ಅಧ್ಯಕ್ಷ ಎಂ.ಎಲ್. ಗಿರಿಧರ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಎಚ್.ಆರ್‌. ಶಂಕರ್‌, ಸಿಪಿಐನ ಎಸ್‌.ಸಿ. ಕುಮಾರ್‌, ಜಿ.ಎಲ್. ಮೂರ್ತಿ, ಆದಿವಾಲ ಚಮನ ಶರೀಫ್‌, ಬಬ್ಬೂರು ಸುರೇಶ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next