ಹಿರಿಯೂರು: ತಾಲೂಕಿನ ವಾಣಿವಿಲಾಸ ಜಲಾಶಯದ ಅಚ್ಚುಪಟ್ಟು ಪ್ರದೇಶಕ್ಕೆ ಫೆಬ್ರವರಿ ತಿಂಗಳೊಳಗೆ ನಾಲೆಗಳ ಮೂಲಕ ನೀರು ಹರಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಮುಖಂಡ ಆರನಕಟ್ಟೆ ಶಿವಕುಮಾರ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ನಗರದ ತೇರು ಮಲ್ಲೇಶ್ವರ ದೇವಸ್ಥಾನದಲ್ಲಿ ತಾಲೂಕು ರೈತ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಕೆ.ಸಿ. ಹೊರಕೇರಪ್ಪ ಮಾತನಾಡಿ, ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ತಕ್ಷಣ ಪತ್ರ ಬರೆಯಬೇಕು. ಅಷ್ಟರೊಳಗೆ ಎರಡೂ ನಾಲೆಗಳನ್ನು ದುರಸ್ತಿ
ಪಡಿಸಬೇಕು. ನಾಲೆಗಳ ತೂಬುಗಳನ್ನು ಸರಿಪಡಿಸಬೇಕು ಎಂಬುದಾಗಿ ಸಭೆಯಲ್ಲಿ ಹಾಜರಿದ್ದ ನಿಗಮದ ಕಿರಿಯ ಇಂಜಿನಿಯರ್ ಶಿವಪ್ಪ ಅವರಿಗೆ ಮನವಿ ಮಾಡಿದರು.
ಬಳಿಕ ಇಂಜಿನಿಯರ್ ಶಿವಪ್ಪ ಮಾತನಾಡಿ, ವಿವಿ ಸಾಗರದ ಎರಡು ನಾಲೆಗಳ ದುರಸ್ತಿಗೆ ಸುಮಾರು 35ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ತಯಾರಿಸಿ ಕಳಿಸಿದ್ದೇವೆ. ಡಿ.12ರಂದು ಯೋಜನೆ ಪರಿಶೀಲನಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಅನುಮೋದನೆಗೊಂಡರೆ ಟೆಂಡರ್ ಕರೆಯುತ್ತೇವೆ. ಅಕ್ರಮವಾಗಿ ಪೈಪ್ ಜೋಡಣೆ ಮಾಡಿರುವ ರೈತರಿಗೆ ನೋಟಿಸ್ ಜಾರಿ ಮಾಡುತ್ತೇವೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ರೈತರಲ್ಲಿ ಬೆಳೆ ವಿಮೆ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ವಿಮಾ ಕಂಪನಿ ಅಧಿಕಾರಿಗಳನ್ನು ಕರೆಸಿ ರೈತರ ಸಭೆ ನಡೆಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮುಖ್ಯಸ್ಥರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಅಂತಿಮವಾಗಿ ಹಿರಿಯೂರು ತಾಲೂಕನ್ನು ಸರ್ಕಾರ ಡಿಸೆಂಬರ್ 25ರೊಳಗೆ ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ಡಿ.26 ರಂದು ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಶಾಸಕರ ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಲಾಯಿತು. ಸಭೆ ಆರಂಭಕ್ಕೆ ಮೊದಲು ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ನೂರು ಅಡಿ ತಲುಪಿದ ಹಿನ್ನೆಲೆಯಲ್ಲಿ ತೇರುಮಲ್ಲೇಶ್ವರ ಸ್ವಾಮಿಗೆ ರೈತ ಸಂಘದ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಆಲೂರು ಸಿದ್ದರಾಮಣ್ಣ, ಬ್ಯಾಡರಹಳ್ಳಿ ಶಿವಕುಮಾರ್, ಎಚ್.ಆರ್.ತಿಮ್ಮಯ್ಯ, ಕೆ.ಟಿ.ರುದ್ರಮುನಿ, ಕಲ್ಪನಾ, ತಿಮ್ಮಕ್ಕ, ಹೊರಕೇರಪ್ಪ, ಎಂ.ಆರ್.ಪುಟ್ಟಸ್ವಾಮಿ, ಎಂ.ಟಿ.ಸುರೇಶ್, ದಸ್ತಗೀರ್ ಸಾಬ್, ಅರಳೀಕೆರೆ ತಿಪ್ಪೇಸ್ವಾಮಿ, ಓಬಣ್ಣ, ಸಿದ್ದನಾಯಕ, ಎಂ.ಎಂ.ಎಂ. ಮಣಿ, ದಿನಕರ್ ಇತರರು ಉಪಸ್ಥಿತರಿದ್ದರು.