Advertisement

ಒಡಲಲ್ಲೇ ಜಲಾಶಯವಿದ್ರೂ ಬರ!

05:31 PM May 25, 2019 | Naveen |

ಹಿರಿಯೂರು: ಒಡಲಲ್ಲೇ ವಾಣಿವಿಲಾಸ ಸಾಗರ ಜಲಾಶಯವನ್ನು ಹೊಂದಿದ್ದರೂ ತಾಲೂಕಿನ ಜನರು ಹನಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ತಾಲೂಕಿನಾದ್ಯಂತ ನೀರಿನ ಅಭಾವ ದಿನೇ ದಿನೇ ಹೆಚ್ಚುತ್ತಿದೆ. ತಾಲೂಕು ಆಡಳಿತ ಗ್ರಾಮೀಣ ಭಾಗಕ್ಕೆ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದರೂ ಸಾಲುತ್ತಿಲ್ಲ. ಹಿರಿಯೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ವಾಣಿವಿಲಾಸ ಸಾಗರದಲ್ಲಿನ ನೀರು ಸಂಗ್ರಹ ಡೆಡ್‌ ಸ್ಟೋರೆಜ್‌ ಹಂತ ತಲುಪಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ನಗರದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 31 ವಾರ್ಡ್‌ಗಳಿಗೆ ನಗರಸಭೆ ನೀರು ಸರಬರಾಜು ಮಾಡಬೇಕಿದೆ. ವಾಣಿವಿಲಾಸ ಸಾಗರದ ನೀರಿನ ಮಟ್ಟ ಕಡಿಮೆ ಆಗಿರುವುದರಿಂದ ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ನೀರು ಸರಬರಾಜು ಕೇಂದ್ರಕ್ಕೆ ವಿವಿ ಸಾಗರದ ನೀರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹರಿದು ಬರುತ್ತಿದೆ, ಇದರಿಂದ ನಗರದಲ್ಲಿ

ಪ್ರತಿ ಐದು ದಿನಗಳಿಗೊಮ್ಮೆ ಕುಡಿಯುವ ನೀರನ್ನು ನಗರಸಭೆ ಪೂರೈಕೆ ಮಾಡುತ್ತಿದ್ದಾರೆ. ಆ ನೀರು ಕೇವಲ 20 ನಿಮಿಷ ಮಾತ್ರ ನಲ್ಲಿಗಳಲ್ಲಿ ಬರುತ್ತದೆ. ನೀರು ಪಡೆಯಲು ಸಾರ್ವಜನಿಕ ನಳಗಳ ಬಳಿ ಕಿತ್ತಾಟ, ಜಗಳ ಸಾಮಾನ್ಯವಾಗಿಬಿಟ್ಟಿವೆ.

ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ಬಹುತೇಕ ಕೊಳವೆಬಾವಿಗಳು ಬತ್ತಿ ಹೋಗಿವೆ. ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಜನರ ದಂಡು ನೆರೆದಿರುತ್ತದೆ. ಕುಡಿಯುವ ನೀರಿಗಾಗಿ ಜನರು ಗಂಟೆಗಟ್ಟಲೆ ಕಾಯುವಂತಾಗಿದೆ. ಕೊಡ, ಕ್ಯಾನ್‌ಗಳಲ್ಲಿ ನೀರು ಪಡೆಯಲು ಪರದಾಟ ನಡೆಸಬೇಕಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಶುದ್ಧ ನೀರು ಘಟಕಗಳ ಮುಂದೆ ನೀರಿಗಾಗಿ ಜನರು ಹರಸಾಹಸ ಮಾಡುವ ದೃಶ್ಯ ಕಂಡು ಬರುತ್ತಿದೆ. ಆದ್ದರಿಂದ ನೀರಿನ ಬವಣೆ ನೀಗಿಸಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನ ನೀಡಬೇಕಿದೆ.

Advertisement

ವರುಣ ಕೃಪೆಗೆ ದೇವರ ಮೊರೆ
ನೀರಿನ ಬವಣೆಯಿಂದ ಜನರು ಕಂಗಾಲಾಗಿದ್ದಾರೆ. ನೀರಿಗಾಗಿ ಕೊಡ, ಕ್ಯಾನ್‌ಗಳನ್ನು ಹಿಡಿದು ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಬರುವ ಸ್ಥಳಗಳ ಬಳಿ ಕೈಗಾಡಿ, ಆಟೋ, ದ್ವಿಚಕ್ರ ವಾಹನ, ಲಗೇಜ್‌ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಮಳೆಯಾದರೆ ನೀರಿನಮ ಸಮಸ್ಯೆ ಸ್ಪಲ್ಪವಾದರೂ ನಿವಾರಣೆಯಾಗುತ್ತದೆ. ಹಾಗಾಗಿ ಸಾರ್ವಜನಿಕರು ದೇವರ ಮೊರೆ ಹೋಗುತ್ತಿದ್ದಾರೆ. ವಿವಿಧ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next