ಹಿರಿಯೂರು:ಪ್ರೀತಿಯ ಪವರ್ ಹಾಗೆ. ಇದಕ್ಕೆ ವಿದ್ಯಾರ್ಹತೆ, ಅಂತಸ್ತು ಯಾವುದೂ ಅಡ್ಡಿಯಾಗಲ್ಲ. ಯಾರ ವಿರೋಧ ಎದುರಾದರೂ ಪ್ರೇಮಿಗಳಿಗೆ ಅವೆಲ್ಲ ಗೌಣ ಅನ್ನೋದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಪರಸ್ಪರ ಪ್ರೀತಿಸುತ್ತಿದ್ದ ಕುರಿಗಾಹಿ ಯುವಕ ಹಾಗೂ ಸ್ನಾತಕೋತ್ತರ ಪದವೀಧರ ಯುವತಿ ಕುರಿ ಮೇಯಿಸುವ ಜಾಗದಲ್ಲೇ ಕುರಿಗಳನ್ನೇ ಸಾಕ್ಷಿಯಾಗಿಟ್ಟು ವಿವಾಹವಾಗಿ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.
ಇಂತಹದ್ದೊಂದು ಅಪರೂಪದ ಪ್ರೇಮವಿವಾಹ ನಡೆದಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಯಲ್ಲದಕೆರೆ ಸೀಗೆಹಟ್ಟಿ ಗ್ರಾಮದಲ್ಲಿ. ಕುರಿಗಾಹಿ ಅರುಣ ಹಾಗೂ ಅಮೃತಾ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರೂ ಒಂದೇ ಜಾತಿಯವರು. ವಿವಾಹವಾಗುವ ಬಯಕೆ ಇದ್ದರೂ ಅರುಣ, ಯುವತಿ ಮನೆಯವರಲ್ಲಿ ವಿಷಯ ಪ್ರಸ್ತಾಪಿಸಲು ಹಿಂದೇಟು ಹಾಕುತ್ತಿದ್ದ ಎನ್ನಲಾಗಿದೆ.
ಅರುಣ ಎಸ್‌ಎಸ್‌ಎಲ್ ಸಿವರೆಗೆ ಓದಿದ್ದು, ಅಮೃತಾ ಎಂಎ ಓದುತ್ತಿದ್ದಾಳೆ. ಇದೇ ಕಾರಣಕ್ಕೆ ಇವರ ಪ್ರೇಮಕ್ಕೆ ವಿರೋಧ ವ್ಯಕ್ತವಾಗಿದೆ. ವಿದ್ಯಾಹರ್ತೆಯಲ್ಲಿ ಹೊಂದಾಣಿಕೆ ಇಲ್ಲ ಕಾರಣಕ್ಕೆ ಅರುಣ್ ಸಹ ಮದುವೆಗೆ ಹಿಂದೇಟು ಹಾಕಿದ್ದ. ಇದೇ ಕಾರಣಕ್ಕೆ ಯುವತಿ ಮನೆಯವರು ಸಹ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಲ್ಲದೆ ಬೇರೆ ಹುಡುಗನೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು.
ಮಾರಮ್ಮನ ಹಬ್ಬಕ್ಕೆ ಬಂದಾಕೆ ಮದುವೆಯಾದಳು: ತುಮಕೂರಿನಲ್ಲಿ ಎಂಎ ಓದುತ್ತಿದ್ದ ಅಮೃತಾಳನ್ನು ಮಾರಮ್ಮನ ಹಬ್ಬಕ್ಕೆಂದು ಮನೆಗೆ ಕರೆಸಿ ಬೇರೆ ಹುಡುಗನ ಪರಿಚಯ ಮಾಡಿಸಿದ್ದರು. ಅಲ್ಲದೆ ಮನೆಯಿಂದ ಹೊರಗೆ ಕಳುಹಿಸದೆ ಕಣ್ಗಾವಲು ಇಟ್ಟಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಬಹಿರ್ದೆಸೆಗೆ ಹೊರಗೆ ಹೋಗುವ ನೆಪ ಮಾಡಿಕೊಂಡು ಕುರಿ ಕಾಯುತ್ತಿದ್ದ ಅರುಣ ಇರುವ ಸ್ಥಳಕ್ಕೆ ತೆರಳಿದ್ದಾಳೆ.
ಅಲ್ಲಿ ತಕ್ಷಣ ಅರುಣ, ಅಮೃತಾಳಿಗೆ ಮಾಂಗಲ್ಯ ಕಟ್ಟಿದ್ದಾನೆ. ಅಲ್ಲಿಂದ ಪ್ರೇಮಿಗಳು ಹಿರಿಯೂರು ಸಮೀಪ ಇರುವ ಅರುಣನ ಸಂಬಂಧಿಕರ ಮನೆಗೆ ಬಂದಿದ್ದಾರೆ.
ಯುವಕನ ವಿರುದ್ಧ ದೂರು: ಇವರಿಬ್ಬರು ಮದುವೆಯಾದ ವಿಷಯ ತಿಳಿದ ಯುವತಿಯ ತಂದೆ ಜಯಣ್ಣ, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಅರುಣನ ವಿರುದ್ಧ ದೂರು ದಾಖಲಿಸಿದ್ದಾರೆ. ಅರುಣ ಮತ್ತು ಆತನ ಕುಟುಂಬದವರು ನಮ್ಮ ಮನೆಗೆ ಊಟಕ್ಕೆಂದು ಬಂದು ನಮ್ಮ ಮೇಲೆಯೇ ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಭಯಭೀತರಾಗಿರುವ ನವ ದಂಪತಿಯನ್ನು ಹುಡುಗನ ಸಂಬಂಧಿಕರು ಬೇರೆಡೆ ಕಳುಹಿಸಿದ್ದಾರೆ. ವಿಶೇಷ ಮದುವೆ ವಾದ್ಯ ಮೇಳ, ಮಂತ್ರಗಳ ಉದ್ಘೋಷ, ಸಂಬಂಧಿಗಳು ಯಾವುದೂ ಇರಲಿಲ್ಲ. ಅಲ್ಲಿ ಇದ್ದಿದ್ದು ಹುಲ್ಲುಗಾವಲು ಹಾಗೂ ಒಂದಿಷ್ಟು ಕುರಿಗಳು ಮಾತ್ರ. ಪರಸ್ಪರ ಪ್ರೀತಿಸುತ್ತಿದ್ದ ಸ್ನಾತಕೋತ್ತರ ಪದವೀಧರೆ ಹಾಗೂ ಕುರಿಗಾಹಿ ಯುವಕ ಕುರಿ ಕಾಯುತ್ತಿದ್ದ ಸ್ಥಳದಲ್ಲೇ ವಿವಾಹವಾಗಿದ್ದಾರೆ.